Asianet Suvarna News Asianet Suvarna News

ನಾಳೆಯಿಂದ ದುಬಾರಿ ದುನಿಯಾ : ಯಾವುದರ ಬೆಲೆ ಏರಿಕೆ..?

ಕಳೆದ ಫೆ.1ರಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಮಂಡಿಸಿದ್ದ 2018-19ನೇ ಸಾಲಿನ ಬಜೆಟ್‌ ಪ್ರಸ್ತಾವನೆಗಳು ಏ.1ರ ಭಾನುವಾರದಿಂದ ಆರಂಭವಾಗುವ ಹೊಸ ಹಣಕಾಸು ವರ್ಷದಿಂದ ಜಾರಿಗೆ ಬರಲಿವೆ.

Price Hike Apply From Tomorrow

ನವದೆಹಲಿ : ಕಳೆದ ಫೆ.1ರಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಮಂಡಿಸಿದ್ದ 2018-19ನೇ ಸಾಲಿನ ಬಜೆಟ್‌ ಪ್ರಸ್ತಾವನೆಗಳು ಏ.1ರ ಭಾನುವಾರದಿಂದ ಆರಂಭವಾಗುವ ಹೊಸ ಹಣಕಾಸು ವರ್ಷದಿಂದ ಜಾರಿಗೆ ಬರಲಿವೆ.

ಕೇಂದ್ರದ ಎನ್‌ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ ಇದಾಗಿದ್ದು, ಇದರಲ್ಲಿ ಜನಸಾಮಾನ್ಯರು ಮತ್ತು ಉದ್ಯಮ ವಲಯದ ಮೇಲೆ ನೇರ ಪರಿಣಾಮ ಬೀರುವ ಏರಿಳಿಕೆ ಭಾನುವಾರಿಂದ ಜಾರಿಗೆ ಬರಲಿವೆ.

ಜನ ಸಾಮಾನ್ಯರು ನಿತ್ಯ ಬಳಸುವ ತರಕಾರಿ, ಹಣ್ಣಿನ ಜ್ಯೂಸ್‌, ಅಡುಗೆ ಎಣ್ಣೆ, ಕ್ಯಾಂಡಲ್‌, ಹಾಸಿಗೆ ಲ್ಯಾಂಪ್‌ನಂಥ ವಸ್ತುಗಳು ಜೊತೆಗೆ ಚಿನ್ನ, ಬೆಳ್ಳಿ, ವಜ್ರ, ಕಾರು, ಬೈಕ್‌ ಮೊದಲಾದ ವಾಹನಗಳ ಬೆಲ ಏರಿಕೆಯಾಗಲಿದೆ. ಇನ್ನು ಹಿರಿಯ ನಾಗರಿಕರಿಗೆ ನಿಶ್ಚಿತ ಠೇವಣಿಗಳಿಂದ ದೊರಕುವ ಬಡ್ಡಿಗೆ ತೆರಿಗೆ ವಿನಾಯ್ತಿ ಮಿತಿ 50000 ರು.ಗೆ ಏರಿಕೆ ಮತ್ತು ಆರೋಗ್ಯ ವಿಮೆ ಪ್ರೀಮಿಯಂ ಹಾಗೂ ವೈದ್ಯಕೀಯ ವೆಚ್ಚಗಳ ಮರುಪಾವತಿಗೆ ತೆರಿಗೆ ವಿನಾಯ್ತಿ ಮಿತಿ 50000 ರು.ಗೆ ಏರಿಕೆ ಮುಂತಾದ ಬದಲಾವಣೆ ಮಾಡಲಾಗಿದೆ.

ಇನ್ನು ಹೊಸತಾಗಿ ದೀರ್ಘಾವಧಿ ಬಂಡವಾಳ ಲಾಭ (ಲಾಂಗ್‌ ಟಮ್‌ರ್‍ ಕ್ಯಾಪಿಟಲ್‌ ಗೇನ್ಸ್‌ - ಎಲ್‌ಟಿಸಿಜಿ)ದ ಮೇಲೆ ತೆರಿಗೆ ವಿಧಿಸಲಾಗಿದೆ. ಹಾಗೆಯೇ, 250 ಕೋಟಿ ರು.ವರೆಗಿನ ವಾರ್ಷಿಕ ವಹಿವಾಟು ನಡೆಸುವ ಕಂಪನಿಗಳ ಮೇಲಿನ ತೆರಿಗೆ ಶೇ.25ಕ್ಕೆ ಇಳಿಕೆ, ಸಂಬಳದಾರರಿಗೆ 40000 ರು. ಸ್ಟಾಂಡರ್ಡ್‌ ಡಿಡಕ್ಷನ್‌,

ಬಜೆಟ್‌ನಲ್ಲಿ ಮಾಡಲಾದ, ಏ.1ರಿಂದ ಜಾರಿಗೆ ಬರಲಿರುವ ಹೊಸ ಬದಲಾವಣೆಗಳು ಈ ಕೆಳಗಿನಂತಿವೆ.

ಷೇರು ಲಾಭಕ್ಕೆ ತೆರಿಗೆ

ಷೇರುಗಳನ್ನು ಖರೀದಿಸಿ 1 ವರ್ಷದ ನಂತರ ಮಾರಾಟ ಮಾಡಿದರೆ ಇಷ್ಟುದಿನ ಲಾಭದ ಮೇಲೆ ತೆರಿಗೆ ವಿಧಿಸುತ್ತಿರಲಿಲ್ಲ. ಏ.1ರಿಂದ ಶೇ.10ರಷ್ಟುಎಲ್‌ಟಿಸಿಜಿ ತೆರಿಗೆ ಜಾರಿಗೆ ಬರಲಿದೆ. ಅದರಂತೆ, ಷೇರುಗಳನ್ನು 1 ವರ್ಷದ ನಂತರ ಮಾರಾಟ ಮಾಡಿದಾಗ 1 ಲಕ್ಷ ರು.ಗಿಂತ ಹೆಚ್ಚು ಲಾಭ ಬಂದರೆ ಅದಕ್ಕೆ ಶೇ.10 ತೆರಿಗೆ ವಿಧಿಸಲಾಗುತ್ತದೆ. 14 ವರ್ಷಗಳ ಹಿಂದೆ ಈ ತೆರಿಗೆಯನ್ನು ರದ್ದುಪಡಿಸಲಾಗಿತ್ತು. ಇದೀಗ ಮತ್ತೆ ಜಾರಿಗೆ ತರಲಾಗಿದೆ. ಇದರ ಜೊತೆಗೆ ಶೇ.15ರಷ್ಟುಷೇರು ವಹಿವಾಟು ತೆರಿಗೆ ಇರುತ್ತದೆ. 1 ವರ್ಷಕ್ಕಿಂತ ಮೊದಲು ಷೇರು ಮಾರಾಟ ಮಾಡಿದರೆ ಲಾಭದ ಮೇಲೆ ಶೇ.15ರಷ್ಟುತೆರಿಗೆ ವಿಧಿಸಲಾಗುತ್ತದೆ.

.40000 ಸ್ಟಾಂಡರ್ಡ್‌ ಡಿಡಕ್ಷನ್‌

ಈ ಸಲದ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯ್ತಿ ಮಿತಿಯನ್ನು ಹೆಚ್ಚಿಸಿಲ್ಲ. ಆದರೆ, 40000 ರು. ಸ್ಟಾಂಡರ್ಡ್‌ ಡಿಡಕ್ಷನ್‌ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು, ಅದರಿಂದ ವೇತನದಾರರು ಸದ್ಯ ಹೊಂದಿರುವ ಆದಾಯ ತೆರಿಗೆ ವಿನಾಯ್ತಿ ಮಿತಿಗೆ 40000 ರು.ಗಳನ್ನು ಸೇರಿಸಿಕೊಂಡು ತೆರಿಗೆ ವಿನಾಯ್ತಿ ಪಡೆಯಬಹುದು. ಇಷ್ಟುದಿನ ಈ ವಿನಾಯ್ತಿಯನ್ನು ಪ್ರಯಾಣ ವೆಚ್ಚ ಹಾಗೂ ವೈದ್ಯಕೀಯ ವೆಚ್ಚವನ್ನು ತೋರಿಸಿ (ಗರಿಷ್ಠ 34200 ರು.) ಪಡೆಯಬಹುದಿತ್ತು. ಏ.1ರಿಂದ ಈ ಯಾವುದೇ ವೆಚ್ಚ ತೋರಿಸುವ ಅಗತ್ಯವಿಲ್ಲ. ಹಾಗೇ ಸ್ಟಾಂಡರ್ಡ್‌ ಡಿಡಕ್ಷನ್‌ ಲಾಭ ಪಡೆಯಬಹುದು. ಇದರಿಂದ ಸಂಬಳದಾರರಿಗೆ ಒಂದು ವರ್ಷಕ್ಕೆ 5800 ರು. ಆದಾಯದ ಮೇಲಿನ ತೆರಿಗೆ ಉಳಿಯುತ್ತದೆ.

ಕಂಪನಿಗಳಿಗೆ ತೆರಿಗೆ ಉಳಿತಾಯ

ಬಜೆಟ್‌ನಲ್ಲಿ ಸಣ್ಣ ಗಾತ್ರದ ಕಾರ್ಪೊರೆಟ್‌ ಕಂಪನಿಗಳ ಮೇಲಿನ ತೆರಿಗೆ ಇಳಿಕೆ ಮಾಡಲಾಗಿದೆ. ಅಂದರೆ, ವರ್ಷಕ್ಕೆ 250 ಕೋಟಿ ರು.ವರೆಗಿನ ವಹಿವಾಟು ನಡೆಸುವ ಕಂಪನಿಗಳಿಗೆ ವಿಧಿಸುತ್ತಿದ್ದ ತೆರಿಗೆಯನ್ನು ಶೇ.30ರಿಂದ ಶೇ.25ಕ್ಕೆ ಇಳಿಸಲಾಗಿದೆ. ಆದಾಯ ತೆರಿಗೆ ರಿಟನ್ಸ್‌ರ್‍ ಸಲ್ಲಿಸುವ ಕಂಪನಿಗಳ ಪೈಕಿ ಈ ವ್ಯಾಪ್ತಿಗೆ ಬರುವ ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಕಂಪನಿಗಳೇ ಶೇ.99ರಷ್ಟುಇರುವುದರಿಂದ ಹೆಚ್ಚುಕಮ್ಮಿ ಎಲ್ಲಾ ಕಾರ್ಪೊರೆಟ್‌ ಕಂಪನಿಗಳಿಗೂ ಈ ತೆರಿಗೆ ಇಳಿಕೆಯ ಲಾಭ ಸಿಗಲಿದೆ.

ವೃದ್ಧರಿಗೆ ತೆರಿಗೆ ಉಳಿತಾಯ

ಇಷ್ಟುದಿನ ಹಿರಿಯ ನಾಗರಿಕರಿಗೆ ನಿಶ್ಚಿತ ಠೇವಣಿಗಳಿಂದ ಸಿಗುವ ವಾರ್ಷಿಕ ಬಡ್ಡಿ ಗರಿಷ್ಠ 10000 ರು. ಇದ್ದರೆ ಮಾತ್ರ ಅದಕ್ಕೆ ತೆರಿಗೆ ವಿನಾಯ್ತಿ ಸಿಗುತ್ತಿತ್ತು. ಏ.1ರಿಂದ ನಿಶ್ಚಿತ ಠೇವಣಿಗಳಿಂದ ವರ್ಷಕ್ಕೆ 50000 ರು.ವರೆಗೆ ಸಿಗುವ ಬಡ್ಡಿಗೆ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಹಿರಿಯ ನಾಗರಿಕರಿಗೆ ಬಡ್ಡಿ ಆದಾಯದ ಮೇಲಿನ ತೆರಿಗೆ ವಿನಾಯ್ತಿ ಮಿತಿಯನ್ನು ಬಜೆಟ್‌ನಲ್ಲಿ ಹಾಲಿ ಇರುವ 10000 ರು.ಗಳಿಂದ 50000 ರು.ಗೆ ಏರಿಸಲಾಗಿದೆ. ಹಾಗೆಯೇ, ಹಿರಿಯ ನಾಗರಿಕರಿಗೆ ವೈದ್ಯಕೀಯ ವೆಚ್ಚ ಹಾಗೂ ಆರೋಗ್ಯ ವಿಮೆ ಪ್ರೀಮಿಯಂ ಮೇಲೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80ಡಿ ಅಡಿ ಲಭಿಸುತ್ತಿದ್ದ 30000 ರು.ವರೆಗಿನ ವಿನಾಯ್ತಿಯನ್ನೂ 50000 ರು.ಗೆ ಏರಿಸಲಾಗಿದೆ.

- ಜೇಟ್ಲಿ ಬಜೆಟ್‌ ಘೋಷಣೆಗಳು ಏ.1ರಿಂದ ಜಾರಿ ಹಿನ್ನೆಲೆ: ಹಲವು ವಸ್ತುಗಳ ಬೆಲೆ ಏರಿಕೆ

- ವಾಹನ, ಮೊಬೈಲ್‌, ಚಿನ್ನಾಭರಣ, ಟೀವಿ ತುಟ್ಟಿ

ವೃದ್ಧರು, ಕಂಪನಿಗಳಿಗೆ ಉಳಿತಾಯ

ಏನೇನು ದುಬಾರಿ?

ಕಾರು, ಬೈಕ್‌, ಮೊಬೈಲ್‌ ಫೋನ್‌, ಚಿನ್ನ, ಬೆಳ್ಳಿ, ವಜ್ರ, ತರಕಾರಿ, ಹಣ್ಣಿನ ಜ್ಯೂಸ್‌, ಸನ್‌ಗ್ಲಾಸ್‌, ಸುಗಂಧದ್ರವ್ಯ, ಸನ್‌ಸ್ಕ್ರೀನ್‌, ಬಸ್‌, ಲಾರಿ ಟಯರ್‌, ಪಾದರಕ್ಷೆ

ಸ್ಮಾರ್ಟ್‌ವಾಚ್‌, ಎಲ್‌ಸಿಡಿ/ ಎಲ್‌ಇಡಿ ಟೀವಿ ಪ್ಯಾನೆಲ್‌, ಪೀಠೋಪಕರಣ, ಹಾಸಿಗೆ, ಲ್ಯಾಂಪ್‌, ಗಡಿಯಾರ, ಸಿಗರೆಟ್‌, ಕ್ಯಾಂಡಲ್‌, ಅಡುಗೆ ಎಣ್ಣೆ

Follow Us:
Download App:
  • android
  • ios