ನವದೆಹಲಿ[ಆ.17]: ಕಳೆದೊಂದು ವಾರದಿಂದ ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಕೇಂದ್ರ ಹಣಕಾಸು ಖಾತೆ ಮಾಜಿ ಸಚಿವ ಅರುಣ್‌ ಜೇಟ್ಲಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ಶುಕ್ರವಾರ ಬೆಳಗ್ಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಆಸ್ಪತ್ರೆಗೆ ಭೇಟಿ ನೀಡಿ ಜೇಟ್ಲಿ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಕೇಂದ್ರ ಆರೋಗ್ಯ ಖಾತೆ ಸಚಿವ ಹರ್ಷವರ್ಧನ್‌, ಅಶ್ವಿನಿ ಚೌಭೆ ಇದ್ದರು. ಉಸಿರಾಟ ತೊಂದರೆಯಿಂದಾಗಿ ಆ.9 ರಂದು ಅರುಣ್‌ ಜೇಟ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನುರಿತ ವೈದ್ಯರ ತಂಡದಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಆದರೆ, ಜೇಟ್ಲಿ ಅವರ ಆರೋಗ್ಯ ಸ್ಥಿತಿ ಕುರಿತು ಇದುವರೆಗೂ ಆಸ್ಪತ್ರೆ ಯಾವುದೇ ಮಾಹಿತಿ ನೀಡಿಲ್ಲ.

ಕಳೆದ ಶನಿವಾರ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಆಸ್ಪತ್ರೆಗೆ ಭೇಟಿ ನೀಡಿ ಜೇಟ್ಲಿ ಆರೋಗ್ಯ ವಿಚಾರಿಸಿ, ಜೇಟ್ಲಿ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಯಾವುದೇ ಆತಂಕವಿಲ್ಲ ಎಂದು ತಿಳಿಸಿದ್ದರು.