ಬೆಂಗಳೂರು [ಜು.24] :  ರಾಜ್ಯದಲ್ಲಿ ಬಹಿರಂಗವಾಗಿ ಕುದುರೆ ವ್ಯಾಪಾರ ನಡೆಯುತ್ತಿದ್ದರೂ ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ. ನನಗೆ ಮಾತ್ರ ಇ.ಡಿ. ಮತ್ತೊಂದು ನೋಟಿಸ್ ನೀಡಿದ್ದು, ಸದ್ಯದಲ್ಲೇ ಜೈಲಿಗೆ ಹಾಕಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಸಚಿವ ಡಿ.ಕೆ. ಶಿವಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. 

ಮಂಗಳವಾರ ಸದನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇಷ್ಟೆಲ್ಲಾ ಆಗುತ್ತಿದ್ದರೂ ಐಟಿ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ನನಗೆ ಮಾತ್ರ ಇದೀಗ ಮತ್ತೊಂದು ನೋಟಿಸ್ ಜಾರಿ ನಿರ್ದೇಶನಾಲಯ ಜಾರಿ ಮಾಡಿದೆ. ನನ್ನನ್ನು ಜೈಲಿಗೆ ಹಾಕಲಿದ್ದಾರೆ. ನಾನು ಜೈಲಿಗೆ ಹೋದರೆ ನೀವು ನನ್ನನ್ನು ನೋಡಲು ಬರುತ್ತೀರಿ ಎಂಬ ವಿಶ್ವಾಸದೊಂದಿಗೆ ಹೇಳುತ್ತಿದ್ದೇನೆ ಎಂದರು.

ಈ ವೇಳೆ ಸ್ಪೀಕರ್ ರಮೇಶ್ ಕುಮಾರ್, ನೀವು ಲಕ್ಷ ತಪ್ಪು ಮಾಡಿದರೂ ನನ್ನ ಸಹೋದರರು. ಅಂತಹ ಸ್ಥಿತಿ ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಅಂತಹ ಸ್ಥಿತಿ ಬಂದರೆ ನಿತ್ಯವೂ ನಿಮ್ಮನ್ನು ನೋಡಲು ಬರುತ್ತೇನೆ ಎಂದು ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಹೇಳಿದರು.