ನವದೆಹಲಿ: ಮಾರ್ಚ್ ನಿಂದ  ಮೇ ತಿಂಗಳವರೆಗಿನ ಮುಂಗಾರು ಪೂರ್ವಮಳೆಯಲ್ಲಿ ಶೇ.22ರಷ್ಟುಕೊರತೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂಕಿ ಅಂಶಗಳು ತಿಳಿಸಿವೆ.

ಮಾ.1ರಿಂದ ಮೇ 15ರವರೆಗಿನ ಅವಧಿಯಲ್ಲಿ 75.9 ಮಿಲಿ ಮೀಟರ್‌ ಮಳೆ ಸುರಿದಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 96.8 ಮಿಲಿ ಮೀಟರ್‌ ಮಳೆ ಸುರಿಯಬೇಕಿತ್ತು. ಹೀಗಾಗಿ ಶೇ 22ರಷ್ಟುಮುಂಗಾರು ಪೂರ್ವ ಮಳೆಯ ಕೊರತೆ ಉಂಟಾಗಿದೆ.

ಕರ್ನಾಟಕವನ್ನೂ ಒಳಗೊಂಡ ದಖ್ಖನ್‌ ಪ್ರಸ್ಥಭೂಮಿಯಲ್ಲಿ ಅತ್ಯಧಿಕ ಅಂದರೆ ಶೇ.46ರಷ್ಟುಮುಂಗಾರು ಪೂರ್ವ ಮಳೆಯ ಕೊರತೆ ಉಂಟಾಗಿದೆ. ಒಟ್ಟಾರೆ ಮಾ.1ರಿಂದ ಏ.24ರ ಅವಧಿಯಲ್ಲಿ ಶೇ.27ರಷ್ಟುಮಳೆಯ ಕೊರತೆ ಉಂಟಾಗಿದ್ದರಿಂದ ದೇಶದಲ್ಲಿ ಬರದ ಪರಿಸ್ಥಿತಿ ಉಂಟಾಗುವ ಅಪಾಯ ಎದುರಾಗಿತ್ತು. ಆದರೆ, ಕಳೆದ 15 ದಿನಗಳಲ್ಲಿ ಪೂರ್ವ ಮತ್ತು ಈಶಾನ್ಯ ಭಾರತಗಳಲ್ಲಿ ಮಳೆ ಸುರಿದಿರುವ ಕಾರಣದಿಂದ ಮಳೆಯ ಕೊರತೆಯ ಪ್ರಮಾಣ ಶೇ.27ರಿಂದ ಶೇ.22ಕ್ಕೆ ಇಳಿಕೆಯಾಗಿದೆ. ಮಹಾರಾಷ್ಟ್ರ, ಗೋವಾ, ಛತ್ತೀಸ್‌ಗಢ, ಗುಜರಾತ್‌ ಮತ್ತು ಮಧ್ಯ ಪ್ರದೇಶಗಳಲ್ಲಿ ಮುಂಗಾರು ಪೂರ್ವ ಮಳೆಯ ಕೊರತೆ ಉಂಟಾಗಿಲ್ಲ

ದೇಶದ ಹಲವು ಭಾಗಗಳಲ್ಲಿ ದೇಶದ ಕೃಷಿ ಚಟುವಟಿಕೆಗೆ ಮುಂಗಾರು ಪೂರ್ವ ಮಳೆ ಮಹತ್ವದ ಪಾತ್ರ ವಹಿಸುತ್ತದೆ. ಪಶ್ಚಿಮ ಘಟ್ಟಪ್ರದೇಶಗಳಲ್ಲಿ ತೋಟದ ಬೆಳೆಗಳಿಗೆ ಮಳೆಯ ಅಗತ್ಯವಿದೆ. ಕೇಂದ್ರ ಭಾರತದಲ್ಲಿ ಬೆಳೆಯುವ ಕಬ್ಬು ಮತ್ತು ಹತ್ತಿ ಬೆಳಗೆಗಳು ನೀರಾವರಿ ಇಲ್ಲವೇ ಮುಂಗಾರು ಪೂರ್ವ ಮಳೆಯ ಮೇಲೆಯೇ ಅವಲಂಬಿತವಾಗಿವೆ.

ಇದೇ ವೇಳೆ ನೈಋುತ್ಯ ಮಾನ್ಸೂನ್‌ ದಕ್ಷಿಣ ಅಂಡಮಾನ್‌ ಸಮುದ್ರಕ್ಕೆ ಮುಂಚಿತವಾಗಿಯೇ ಆಗಮಿಸಿದ್ದು, ಉತ್ತರ ಅಂಡಮಾನ್‌ ಸಮುದ್ರ ಮತ್ತು ಅಂಡಮಾನ್‌ ದ್ವೀಪಗಳಿಗೆ ಮುಂದಿನ 2-3 ದಿನಗಳಲ್ಲಿ ಆಗಮಿಸುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.