ಈ ಬಾರಿ ದಾಖಲೆಯ ಮುಂಗಾರು ಪೂರ್ವ ಮಳೆ

Pre-monsoon rainfall broke 10-year record
Highlights

ರಾಜ್ಯದಲ್ಲಿ ಈ ವರ್ಷ ಮುಂಗಾರು ಪೂರ್ವದಲ್ಲಿ ಸುರಿದ ಮಳೆ ದಶಮಾನದ ದಾಖಲೆ ಸೃಷ್ಟಿಸಿದೆ. ಕಳೆದ 10 ವರ್ಷಗಳಲ್ಲೇ ಪೂರ್ವ ಮುಂಗಾರು ಅವಧಿಯಲ್ಲಿ ಬಿದ್ದ ಅತ್ಯಧಿಕ ಮಳೆಯಾಗಿದೆ.  ಅಷ್ಟೇ ಅಲ್ಲ, 1971ರಿಂದ ಈವರೆಗಿನ ರಾಜ್ಯದ ಮುಂಗಾರು ಪೂರ್ವ ಅವಧಿಯಲ್ಲಿ ಬಿದ್ದ 3ನೇ ಅತಿ ಹೆಚ್ಚು ಪ್ರಮಾಣದ ಮಳೆಯಾಗಿ ದಾಖಲೆ ಸೃಷ್ಟಿಸಿದೆ.
 

ಬೆಂಗಳೂರು :  ರಾಜ್ಯದಲ್ಲಿ ಈ ವರ್ಷ ಮುಂಗಾರು ಪೂರ್ವದಲ್ಲಿ ಸುರಿದ ಮಳೆ ದಶಮಾನದ ದಾಖಲೆ ಸೃಷ್ಟಿಸಿದೆ. ಕಳೆದ 10 ವರ್ಷಗಳಲ್ಲೇ ಪೂರ್ವ ಮುಂಗಾರು ಅವಧಿಯಲ್ಲಿ ಬಿದ್ದ ಅತ್ಯಧಿಕ ಮಳೆಯಾಗಿದೆ.  ಅಷ್ಟೇ ಅಲ್ಲ, 1971ರಿಂದ ಈವರೆಗಿನ ರಾಜ್ಯದ ಮುಂಗಾರು ಪೂರ್ವ ಅವಧಿಯಲ್ಲಿ ಬಿದ್ದ 3ನೇ ಅತಿ ಹೆಚ್ಚು ಪ್ರಮಾಣದ ಮಳೆಯಾಗಿ ದಾಖಲೆ ಸೃಷ್ಟಿಸಿದೆ.

ಹೌದು, ಈ ಬಾರಿಯ ಪೂರ್ವ ಮುಂಗಾರು ಅವಧಿಯಲ್ಲಿ (2018 ಮಾಚ್‌ರ್‍ 1ರಿಂದ ಮೇ 31ರ ವರೆಗೆ) ರಾಜ್ಯದಲ್ಲಿ ಸರಾಸರಿಗಿಂತ ಶೇ.54ರಷ್ಟುಹೆಚ್ಚು ಮಳೆಯಾಗಿದೆ. ಪೂರ್ವ ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ ಸರಾಸರಿ 129 ಮಿ.ಮೀ. ಮಳೆಯಾಗಬೇಕು. ಆದರೆ, ಈ ವರ್ಷ 193 ಮಿ.ಮೀ.ನಷ್ಟುಮಳೆ ದಾಖಲಾಗಿದೆ. ಇಷ್ಟುಪ್ರಮಾಣದ ಅಧಿಕ ಮಳೆ ಕಳೆದ ಹತ್ತು ವರ್ಷಗಳಲ್ಲೇ ಬಿದ್ದಿರಲಿಲ್ಲ.

ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ಪ್ರಕಾರ, ರಾಜ್ಯದಲ್ಲಿ 2008ರ ಪೂರ್ವ ಮುಂಗಾರಿನಲ್ಲಿ ಸರಾಸರಿಗಿಂತ ಶೇ.63 ರಷ್ಟುಅಧಿಕ ಮಳೆಯಾಗಿತ್ತು. ಅದನ್ನು ಬಿಟ್ಟರೆ ಈ ಪೂರ್ವ ಮುಂಗಾರಿನಲ್ಲಿ ದಾಖಲಾಗಿರುವ ಶೇ.54ರಷ್ಟುಅಧಿಕ ಮಳೆ ಕಳೆದ ಒಂದು ದಶಕದಲ್ಲಿ ಎಂದೂ ಆಗಿರಲಿಲ್ಲ.

ಅಲ್ಲದೆ, 1971ರಿಂದ ಈ ವರೆಗಿನ ಲಭ್ಯವಿರುವ ಅಂಕಿ ಅಂಶಗಳ ಅನುಸಾರ ಈ ಬಾರಿ ರಾಜ್ಯದಲ್ಲಿ ಆಗಿರುವ ಮುಂಗಾರು ಪೂರ್ವ ಮಳೆ 3ನೇ ಅತಿ ಹೆಚ್ಚು ಪ್ರಮಾಣದ ಮಳೆಯಾಗಿ ದಾಖಲೆ ಸೃಷ್ಟಿಸಿದೆ. ಲಭ್ಯ ದಾಖಲೆಗಳ ಪ್ರಕಾರ, 2004ರ ಮುಂಗಾರು ಪೂರ್ವಾವಧಿಯಲ್ಲಿ ದಾಖಲಾಗಿದ್ದ ಸರಾಸರಿಗಿಂತ ಶೇ.71ರಷ್ಟುಅಧಿಕ ಮಳೆಯೇ ಈ ವರೆಗಿನ ಅತ್ಯಧಿಕ ದಾಖಲೆ ಮಳೆಯಾಗಿದೆ. ಆ ನಂತರ 2008ರಲ್ಲಿ ಶೇ.63ರಷ್ಟುಅಧಿಕ ಮಳೆಯಾಗುವ ಮೂಲಕ 2ನೇ ಅತಿ ಹೆಚ್ಚು ಪೂರ್ವ ಮುಂಗಾರು ಅವಧಿಯ ಮಳೆ ಎನಿಸಿತ್ತು. ಆ ನಂತರ ಈ ವರ್ಷದ ಮಳೆಯೇ ಅತಿ ಹೆಚ್ಚಿನ ಮಳೆಯಾಗಿದೆ ಎನ್ನುತ್ತಾರೆ ಕೆಎಸ್‌ಎನ್‌ಡಿಎಂಸಿ ಅಧಿಕಾರಿಗಳು.

ಕರಾವಳಿಯಲ್ಲಿ ಅಧಿಕ ಮಳೆ: ಪ್ರದೇಶವಾರು ಮಳೆಯ ಲೆಕ್ಕಾಚಾರ ನೋಡುವುದಾದರೆ ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಸರಾಸರಿಗಿಂತ ಶೇ.84ರಷ್ಟುಮಳೆಯಾಗಿದೆ. ಜಿಲ್ಲಾವಾರು ಕೂಡ ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸರಾ ಸರಿಗಿಂತ ಶೇ.115ರಷ್ಟು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.111ರಷ್ಟುಅಧಿಕ ಮಳೆಯಾಗಿದೆ. ಉಡುಪಿ ಜಿಲ್ಲೆಯಾದ್ಯಂತ ಮಾಚ್‌ರ್‍ನಿಂದ ಮೇ ವರೆಗೆ ಸರಾಸರಿ 202 ಮಿ.ಮೀ. ಮಳೆ ದಾಖಲಾಗಬೇಕಿತ್ತು. ಈ ಬಾರಿ 433 ಮಿ.ಮೀ. ಮಳೆ ಯಾಗಿದೆ. ದ. ಕನ್ನಡದಲ್ಲಿ ಸರಾಸರಿ 232 ಮಿ.ಮೀ ಮಳೆ ಬೀಳಬೇಕಿತ್ತು. 489 ಮಿ.ಮೀ. ಮಳೆ ದಾಖಲಾಗಿದೆ. ಇನ್ನು ಕರಾವಳಿಯ ಉಳಿದ ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಶೇ.40ರಷ್ಟುಅಧಿಕ ಮಳೆ ಬಿದ್ದಿದೆ.

ಇನ್ನು ಮಲೆನಾಡು ಭಾಗದಲ್ಲಿ ಶಿವಮೊಗ್ಗ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ 171 ಮಿ.ಮೀ. ಸರಾಸರಿ ಮಳೆಗಿಂತ 315 ಮಿ.ಮೀ.ವರೆಗೆ (ಶೇ.84ರಷ್ಟುಅಧಿಕ) ಮಳೆ ಸುರಿದಿದೆ. ದಕ್ಷಿಣ ಒಳನಾಡಿನಲ್ಲಿ ಸರಾಸರಿಗಿಂತ ಶೇ.59ರಷ್ಟು, ಉತ್ತರ ಒಳನಾಡಿನಲ್ಲಿ ಶೇ.23ರಷ್ಟುಅಧಿಕ ಮಳೆ ದಾಖಲಾಗಿದೆ.

5 ಜಿಲ್ಲೆಗಳಲ್ಲಿ ಮಳೆ ಕೊರತೆ :  ಈ ಮಧ್ಯೆ ರಾಜ್ಯದಲ್ಲಿ ಉತ್ತಮ ಪೂರ್ವ ಮುಂಗಾರು ಮಳೆಯಾದರೂ, ಉತ್ತರ ಒಳನಾಡಿನ ರಾಯಚೂರು (ಶೇ.43ರಷ್ಟುಕಡಿಮೆ), ಯಾದಗಿರಿ (ಶೇ.13), ಬೀದರ್‌ (ಶೇ.10), ಬಾಗಲಕೋಟೆ (ಶೇ.5) ಜಿಲ್ಲೆಗಳಲ್ಲಿ ಸರಾಸರಿಗಿಂತ ಕಡಿಮೆ ಮಳೆ ಬಿದ್ದಿದೆ. ರಾಯಚೂರು ಅತಿ ಹೆಚ್ಚು ಮಳೆ ಕೊರತೆಯ ಜಿಲ್ಲೆ ಎನಿಸಿದೆ.

ಕಳೆದ ವರ್ಷ ಶೇ.2ರಷ್ಟುಮಳೆ ಕೊರತೆ :  ರಾಜ್ಯದಲ್ಲಿ ಕಳೆದ ವರ್ಷ ಪೂರ್ವ ಮುಂಗಾರು ಅವಧಿಯಲ್ಲಿ ಶೇ.2ರಷ್ಟುಮಳೆ ಕೊರತೆ ಉಂಟಾಗಿತ್ತು. ವಿಭಾಗವಾರು ದಕ್ಷಿಣ ಒಳನಾಡು ಹೊರತುಪಡಿಸಿ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡು ಮೂರೂ ಭಾಗಗಳಲ್ಲಿ ಮಳೆ ಕೊರತೆ ಉಂಟಾಗಿತ್ತು. ಜಿಲ್ಲಾವಾರು ಕೂಡ ಸುಮಾರು 18 ಜಿಲ್ಲೆಗಳಲ್ಲಿ ಶೇ.9ರಿಂದ 58ರಷ್ಟುಮಳೆ ಕೊರತೆ ಕಂಡುಬಂದಿತ್ತು.

ಇನ್ನು ರಾಜ್ಯದಲ್ಲಿ ಇಡೀ ವರ್ಷದ ಸರಾಸರಿ ಮಳೆ ಪ್ರಮಾಣ 1155 ಮಿ.ಮೀ. ಆಗಿದೆ. ಇದರಲ್ಲಿ ಶೇ.11ರಷ್ಟುಮಳೆ ಪೂರ್ವ ಮುಂಗಾರು ಅವಧಿಯಲ್ಲಿ ಆಗಬೇಕು. ಉಳಿದದ್ದು ಮುಂಗಾರು, ಹಿಂಗಾರು ಅವಧಿಯಲ್ಲಿ ಆಗಲಿದೆ. ಆದರೆ, ಈ ಬಾರಿ ಪೂರ್ವ ಮುಂಗಾರಿನಲ್ಲಿ ಶೇ.16.96ರಷ್ಟುಮಳೆಯಾಗಿದೆ.

loader