Published : May 16 2017, 10:22 AM IST| Updated : Apr 11 2018, 12:55 PM IST
Share this Article
FB
TW
Linkdin
Whatsapp
ನಾನು ಹೋರಾಟ ಮಾಡುವುದಿಲ್ಲ, ನಾನು ಯಾವುದೇ ಸಂಸ್ಥೆಯವನಲ್ಲ, ನನಗೆ ಅನ್ಯಭಾಷೆಗಳ ಮೇಲೆ ಕೋಪ ಇಲ್ಲ, ನನ್ನ ನಂಬಿ ಸರ್‌, ನಾನು ಕನ್ನಡಿಗ! ಹಾಗಂತ ಉದ್ಯಮಿ ಪ್ರಶಾಂತ್‌ ಸಂಬರಗಿ ಅವರು ಆಡಿದ ಮಾತುಗಳ ಒಂದು ವೀಡಿಯೋ ವೈರಲ್‌ ಆಗಿದೆ. ಅದರ ಹೆಸರು ‘ನಿಜವಾದ ಕನ್ನಡಿಗ ಯಾರು?'. ಅದು ಪೋಸ್ಟ್‌ ಆದಾಗಿಂದ ಇಲ್ಲಿಯವರೆಗೆ ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ, ನೋಡುತ್ತಲೇ ಇದ್ದಾರೆ. ಆ ಮೂಲಕ ಸಂಬರಗಿ ಅವರು ಕನ್ನಡಿಗರ ಅಪಾರ ಪ್ರೀತಿಗೆ ಪಾತ್ರರಾಗಿದ್ದಾರೆ.
ನಾನು ಹೋರಾಟ ಮಾಡುವುದಿಲ್ಲ, ನಾನು ಯಾವುದೇ ಸಂಸ್ಥೆಯವನಲ್ಲ, ನನಗೆ ಅನ್ಯಭಾಷೆಗಳ ಮೇಲೆ ಕೋಪ ಇಲ್ಲ, ನನ್ನ ನಂಬಿ ಸರ್, ನಾನು ಕನ್ನಡಿಗ! ಹಾಗಂತ ಉದ್ಯಮಿ ಪ್ರಶಾಂತ್ ಸಂಬರಗಿ ಅವರು ಆಡಿದ ಮಾತುಗಳ ಒಂದು ವೀಡಿಯೋ ವೈರಲ್ ಆಗಿದೆ. ಅದರ ಹೆಸರು ‘ನಿಜವಾದ ಕನ್ನಡಿಗ ಯಾರು?'. ಅದು ಪೋಸ್ಟ್ ಆದಾಗಿಂದ ಇಲ್ಲಿಯವರೆಗೆ ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ, ನೋಡುತ್ತಲೇ ಇದ್ದಾರೆ. ಆ ಮೂಲಕ ಸಂಬರಗಿ ಅವರು ಕನ್ನಡಿಗರ ಅಪಾರ ಪ್ರೀತಿಗೆ ಪಾತ್ರರಾಗಿದ್ದಾರೆ. ಹಾಗೇ ಕೆಲವು ಶಕ್ತಿಗಳು ಅವರನ್ನು ತುಳಿದು, ನಿಂದಿಸಿದ್ದೂ ನಡೆದಿದೆ.
‘ನಾನು ಸಾಮಾನ್ಯವಾಗಿ ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡುತ್ತೇನೆ, ಕನ್ನಡ ನನ್ನ ಮೊದಲ ಪ್ರೀತಿ. ನಾನು ಅಪ್ಪಟ ಕನ್ನಡಿಗ. ಆದರೆ ಒಬ್ಬ ಕಲಾವಿದ ಯಾವತ್ತೋ ಕೊಟ್ಟಹೇಳಿಕೆ ಇಟ್ಟುಕೊಂಡು ಅದೆಷ್ಟೋ ವರ್ಷಗಳ ನಂತರ ವಿವಾದ ಮಾಡಿ, ಆತ ಅಭಿನಯಿಸಿದ ಯಾವುದೋ ಒಂದು ನಿರ್ದಿಷ್ಟಸಿನಿಮಾವನ್ನು ಬ್ಯಾನ್ ಮಾಡಬೇಕು ಅನ್ನುವ ಮಾತು ಬಂದಾಗ ನನಗೆ ವಿಚಿತ್ರ ಅನ್ನಿಸಿತು. ಯಾಕೆಂದರೆ ಆ ರೀತಿ ಕನ್ನಡಿಗರನ್ನು ನಿಂದಿಸಿದ ಮೇಲೆ ಆ ಕಲಾವಿದನ ಬೇರೆ ಬೇರೆ ಸಿನಿಮಾಗಳು ಬಂದಿವೆ. ಈ ಕಲಾವಿದ ನಿಂದಿಸಿದ ವೇದಿಕೆಯಲ್ಲೇ ಬೇರೆ ಕಲಾವಿದರು ಇದ್ದರು. ಅವರೂ ಕನ್ನಡಕ್ಕೇ ಬಂದು ನಟಿಸಿ ಹೋಗಿದ್ದಾರೆ. ಅದ್ಯಾವುದನ್ನೂ ವಿರೋಧಿಸದೇ ಯಾರೋ ಒಬ್ಬ ವ್ಯಕ್ತಿಯ ಅಭಿನಯದ ಒಂದು ಸಿನಿಮಾಕ್ಕೆ ವಿರೋಧ ಮಾಡುವುದು ಸರಿಯಾದ ಕ್ರಮ ಅಲ್ಲ ಅಂತ ಅನ್ನಿಸಿತು. ಇದಕ್ಕೆ ಸಂಬಂಧಪಟ್ಟಂತೆ ನನ್ನ ಆಕ್ಷೇಪವನ್ನೆಲ್ಲಾ ಹೇಳಿ, ಒಂದು ವೀಡಿಯೋ ಮಾಡಿ ಪೋಸ್ಟ್ ಮಾಡಿದೆ.'
-ಮುಂದೇನಾಯ್ತು?
‘ಆ ವೀಡಿಯೋಕ್ಕೆ ದೊಡ್ಡ ಮಟ್ಟದಲ್ಲಿ ವಿರೋಧ ಬಂತು. ನನ್ನನ್ನು ಮೀರ್ ಸಾದಿಕ್ ಎಂದು ಕರೆದರು. ಕನ್ನಡಿಗನೇ ಅಲ್ಲ ಅಂತ ಕರೆದರು, ಸಂಜೆ ಹೊತ್ತಿಗೆ ಕೋಪ, ತಾಪ, ಕೆಟ್ಟಬೈಗುಳ, ಅಶ್ಲೀಲ ಸಂದೇಶಗಳು ಬಂದವು. ಪೊಲೀಸ್ ಕಂಪ್ಲೇಂಟ್ ಆಯಿತು, ಮಾನವ ಹಕ್ಕು ವಿರೋಧಿ ಅನ್ನುವ ಥರದ ಕಾಮೆಂಟ್ಗಳು ಬಂದವು. ಅದೆಲ್ಲಾ ಅನುಭವಕ್ಕೆ ಬಂದ ಮೇಲೆ ಸುಮ್ಮನೆ ಕುಳಿತು ಯೋಚನೆ ಮಾಡಿದೆ, ಹಾಗಿದ್ದರೆ ನಿಜವಾದ ಕನ್ನಡಿಗರು ಯಾರು? ಕನ್ನಡ ಮಾತಾಡುವವರಲ್ಲವಾ, ಕನ್ನಡ ಓದುವವರಲ್ಲವಾ, ಕನ್ನಡ ಮಣ್ಣಲ್ಲೇ ಹುಟ್ಟಿದವರಲ್ಲವಾ ಅನ್ನುವ ಪ್ರಶ್ನೆ ಹಾಕಿಕೊಂಡು ವೀಡಿಯೋ ಮಾಡಿದೆ. ಆ ವೀಡಿಯೋನೇ ‘ನಿಜವಾದ ಕನ್ನಡಿಗ ಯಾರು?' ಅದಕ್ಕೆ ಸಿಕ್ಕ ಪ್ರೋತ್ಸಾಹ ಅಭೂತಪೂರ್ವ. ನಮ್ಮಲ್ಲಿ ಸೂಕ್ಷ್ಮವಾಗಿ ಇರುವವರು ಇದ್ದಾರೆ, ವಿದ್ಯಾವಂತರಿದ್ದಾರೆ, ಬುದ್ಧಿಜೀವಿಗಳಿದ್ದಾರೆ ಅಂತ ಅರ್ಥವಾಯಿತು. ಚಾನಲ್ಗಳಲ್ಲಿ ಸಂದರ್ಶನಗಳು ಪ್ರಾರಂಭವಾದವು. ಆ ವೀಡಿಯೋಗೆ ಸಿಕ್ಕ ಬೆಂಬಲಕ್ಕೆ, ನನ್ನ ಮಾತಿಗೆ ಸಮ್ಮತಿ ನೀಡಿದವರಿಗೆ ಕೃತಜ್ಞ.'
-ಮುಂದೇನು?
‘ಹೇಳಿದ ಹಾಗೆ ಕನ್ನಡ, ಕನ್ನಡಕ್ಕೆ ಸಂಬಂಧಪಟ್ಟಹೋರಾಟಗಳೆಂದರೆ ಸಂಘ, ಸಂಸ್ಥೆಗಳಲ್ಲ. ಬೀದಿಗಿಳಿದು ಹೋರಾಟವಲ್ಲ. ಗೋಕಾಕ್ ಹೊರಾಟಕ್ಕೆ ಬೀದಿಗಿಳಿದಾಗ ಆ ಕಾಲಕ್ಕೆ ಅಂಥದ್ದೊಂದು ಹೋರಾಟ ಅಗತ್ಯವಿತ್ತು. ಆದರೆ ನದಿ, ನೆಲ, ನೀರಿನ ವಿಚಾರಕ್ಕೆ ನಡೆಯುತ್ತಿರುವ ಹೋರಾಟ, ಬಂದ್ಗಳೇ ನಮ್ಮ ಪ್ರತಿಕ್ರಿಯೆ ಆಗಬಾರದು. ನೀರಿಗೆ ಸಂಬಂಧಪಟ್ಟದ್ದನ್ನು ಬಗೆಹರಿಸುವುದಕ್ಕೆ ಕೋರ್ಟು ಇದೆ, ನ್ಯಾಯದ ಬಗ್ಗೆ ತಿಳಿದುಕೊಂಡವರಿದ್ದಾರೆ, ಅಧಿಕಾರಿಗಳಿದ್ದಾರೆ. ಕನ್ನಡಕ್ಕೋಸ್ಕರ ತೆರೆ ಮರೆಯಲ್ಲಿ ತುಂಬ ಜನ ದುಡಿಯುತ್ತಿದ್ದಾರೆ, ಕನ್ನಡ ಕಲಿಸಲು ವೈಯಕ್ತಿಕ ಮಟ್ಟದಲ್ಲಿ ಶ್ರಮಿಸುತ್ತಿದ್ದಾರೆ. ಹಳೆಗನ್ನಡ, ಹೊಸಗನ್ನಡ, ಬೇರೆ ಭಾಷೆಯಿಂದ ಕನ್ನಡಕ್ಕೆ ಬಂದ ಪದಗಳು, ತಾಂತ್ರಿಕ ಪದಗಳ ಬಗೆಗೆಲ್ಲಾ ಗಂಭೀರ ಅಧ್ಯಯನ ಮಾಡುತ್ತಿದ್ದಾರೆ, ಸಾಫ್ಟ್ವೇರ್ ಕ್ಷೇತ್ರದಲ್ಲಿ ಅಂಥ ಕೆಲಸ ಹೆಚ್ಚು ಆಗುತ್ತಿದೆ. ಅಪಾರ್ಟ್ಮೆಂಟ್ಗಳಲ್ಲಿ ಕನ್ನಡ ಕಲಿಸುತ್ತಿದ್ದಾರೆ, ಗಾಂಚಾಲಿ ಬಿಡಿ ಕನ್ನಡ ಮಾತಾಡಿ ಅಂಥೊಂದು ಗುಂಪು ಕೆಲಸ ಮಾಡುತ್ತಿದೆ. ಅಸಂವಿಧಾನಿಕವಾಗಿ ನಾವು ಮುನ್ನುಗ್ಗಿ, ಹಿಂಸೆಯ ಅಸ್ತ್ರ ಹಿಡಿಯುವುದು ಕನ್ನಡ ಪ್ರೀತಿ ಅಲ್ಲ ಅಂತ ಅರಿತುಕೊಳ್ಳಬೇಕು. ಡಬ್ಬಿಂಗ್ ಬೇಕೋ, ಬೇಡವೋ ಅನ್ನುವುದನ್ನೂ ಚರ್ಚೆಯ ಮೂಲಕ ನೋಡಬೇಕು, ಹಿಂಸೆ, ಆಕ್ರೋಶದಿಂದಲ್ಲ. ಮುಂದೆ ಇಂಥ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಳ್ಳುವ, ಅರ್ಥ ಮಾಡಿಸುವ ಗುರಿ ನನ್ನದು!
-ಕನ್ನಡಪ್ರಭ, ಸಿನಿವಾ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.