Asianet Suvarna News Asianet Suvarna News

ಪ್ರಣಬ್ @ಆರ್‌ಎಸ್‌ಎಸ್‌: ರಾಜಕೀಯ ತಲ್ಲಣವೇಕೆ?

ಮಾಜಿ ರಾಷ್ಟ್ರಪತಿ ಮೇಲೆ ಕಾಂಗ್ರೆಸ್‌ಗೇಕೆ ಸಿಟ್ಟು?

ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅಪರಾಧವೇ?

ಬಹುತ್ವದ ರಾಜಕಾರಣ ಕೈ ಪಾಳೆಯಕ್ಕೆ ಅಪಥ್ಯವೇಕೆ?

ರಾಜಕೀಯ ತಲ್ಲಣಕ್ಕೆ ನಾಂದಿ ಹಾಡಿದ ಪ್ರಣಬ್ ಭಾಷಣ

Pranab Mukherjee@RSS HQ

ಬೆಂಗಳೂರು(ಜೂ.7): ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ಆರ್ ಎಸ್ ಎಸ್ ಕೇಂದ್ರ ಕಚೇರಿಯಲ್ಲಿ ಭಾಷಣ ಮಾಡಿರುವುದು, ದೇಶದ ರಾಜಕೀಯ ಮೊಗಸಾಲೆಯಲ್ಲಿ ಸಣ್ಣದೊಂದು ತಲ್ಲಣ ಮೂಡಿಸಿದೆ. ಪ್ರಣಬ್ ಅವರ ಇಂದಿನ ಭೇಟಿಯನ್ನು ಪ್ರಸಕ್ತ ರಾಜಕೀಯ ಸನ್ನಿವೇಶಕ್ಕೆ ಹೋಲಿಸಿ ವ್ಯಾಖ್ಯಾನಿಸುತ್ತಿರುವುದೇ ಈ ತಲ್ಲಣಕ್ಕೆ ಕಾರಣ ಎಂಬುದು ಸುಳ್ಳಲ್ಲ. ಪರಸ್ಪರ ವೈರುಧ್ಯ ಅಭಿಪ್ರಾಯ ಹೊಂದಿರುವ ಸಿದ್ದಾಂತಗಳನ್ನು ಗೌರವಿಸುವುದೇ ನಮ್ಮ ಪ್ರಜಾಪ್ರಭುತ್ವದ ಶಕ್ತಿ ಎಂಬುದನ್ನೂ ನಾವು ಮರೆಯಬಾರದು.

ಆದರೆ ಪ್ರಣಬ್ ಅವರ ಭೇಟಿಯನ್ನು ಆರ್ ಎಸ್ ಎಸ್ ವಿರೋಧಿ ರಾಜಕೀಯ ಪಕ್ಷಗಳು ಅದರಲ್ಲೂ ಪ್ರಮುಖವಾಗಿ ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತಿದೆ. ಇದಕ್ಕೆ ಕಾರಣವೂ ಇಲ್ಲದ್ದಿಲ್ಲ. ಪ್ರಣಬ್ ತಮ್ಮ ಜೀವಮಾನವೀಡಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿದ್ದ ವ್ಯಕ್ತಿಯಾಗಿದ್ದರು. ಮತ್ತು ಈ ಕಾರಣಕ್ಕೆ ಅವರು ಆರ್ ಎಸ್ ಎಸ್ ಸಭೆಯಲ್ಲಿ ಭಾಗವಹಿಸಿರುವುದು ಅಕ್ಷಮ್ಯ ಎಂಬುದು ಕಾಂಗ್ರೆಸ್ ವಾದ. ಇದೇ ವೇಳೆ ಪ್ರಣಬ್ ಪಕ್ಷ ರಾಜಕೀಯಕ್ಕೂ ಮೀರಿದ ವ್ಯಕ್ತಿಯಾಗಿದ್ದರು ಎಂಬುದನ್ನು ಕಾಂಗ್ರೆಸ್ ಪ್ರಜ್ಞಾಪೂರ್ವಕವಾಗಿಯೇ ಮರೆಯುತ್ತಿದೆ.

ಪ್ರಣಬ್ ರಾಷ್ಟ್ರಪತಿ ಸ್ಥಾನ ಅಲಂಕರಿಸಿದ ಮರುಕ್ಷಣದಿಂದಲೇ ಪಕ್ಷ ರಾಜಕಾರಣದಿಂದ ತಮ್ಮನ್ನು ತಾವು ಬೇರ್ಪಡಿಸಿಕೊಂಡಿದ್ದರು. ಇದೊಂದು ಅನಿವಾರ್ಯ ನಡೆ ಎಂದು ಹೇಳಬಹುದಾದರೂ, ಪ್ರಣಬ್ ಅವರ ವ್ಯಕ್ತಿತ್ವ ಕೂಡ ಎಲ್ಲರನ್ನೂ ಒಳಗೊಳ್ಳುವ ರಾಜಕಾರಣದತ್ತಲೇ ಇತ್ತು ಎಂಬುದು ಶತಸಿದ್ದ. ಆದರೆ ಪ್ರಣಬ್ ಮುಖರ್ಜಿ ಅವರ ಇಂದಿನ ಭೇಟಿಯನ್ನು ವಿರೋಧಿಸುತ್ತಾ ಕಾಂಗ್ರೆಸ್ ತನ್ನ ಸಂಕುಚಿತ ಮನೋಭಾವನೆಯನ್ನು ತನಗೆ ಅರಿವಿಲ್ಲದಂತೆ ಹೊರ ಹಾಕುತ್ತಿದೆ ಎಂಬ ಮಾತುಗಳಿಗೂ ತೂಕವಿದೆ.

ಪ್ರಣಬ್ ಮುಖರ್ಜಿ ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೇ ಕಾಂಗ್ರೆಸ್ ನ ಪ್ರಮುಖ ನಾಯಕರೆಲ್ಲರೂ ಇದಕ್ಕೆ ವಿರೋಧ ವ್ಯಕ್ತಪಡಿಸತೊಡಗಿದ್ದರು. ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದ ಹಿಡಿದು ರಾಹುಲ್ ಗಾಂಧಿ, ಆನಂದ್ ಶರ್ಮ, ಅಹ್ಮದ್ ಪಟೇಲ್ ಸೇರಿದಂತೆ ಹಲವು ಪ್ರಮುಖ ನಾಯಕರು ಪ್ರಣಬ್ ನಿರ್ಧಾರಕ್ಕೆ ಅಪಸ್ವರ ಎತ್ತಿದ್ದರು.

ಅದರಲ್ಲೂ ಖುದ್ದು ಪ್ರಣಬ್ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ತಮ್ಮ ತಂದೆಯ ನಿರ್ಣಯವನ್ನು ವಿರೋಧಿಸಿದ್ದು ಹಲವರಿಗೆ ಆಶ್ಚರ್ಯವನ್ನುಂಟು ಮಾಡಿತ್ತು. ಆದರೆ ಇಂದಿನ ಸಭೆಯಲ್ಲಿ ತಾವೇ  ಹೇಳಿದಂತೆ ಬಹುತ್ವದ ರಾಜಕಾರಣವನ್ನು ಪ್ರಣಬ್ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇದಕ್ಕೂ ಮಿಗಿಲಾಗಿ ಪ್ರಣಬ್ ಅವರ ರಾಜಕೀಯ ನಿಲುವನ್ನು ಗೌರವಿಸುತ್ತಲೇ ಇಂದಿನ ಸಭೆಗೆ ಅವರನ್ನು ಆಹ್ವಾನಿಸಿದ್ದಾಗಿ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದು ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಂತಿತ್ತು.

ಒಟ್ಟಿನಲ್ಲಿ ಪ್ರಣಬ್ ಮುಖರ್ಜಿ ಅವರ ಇಂದಿನ ಆರ್ ಎಸ್ ಎಸ್ ಸಭೆಗೆ ಅದೆನೇ ವಿರೋಧ ವ್ಯಕ್ತವಾದರೂ, ಪರಸ್ಪರ ವೈರುದ್ಯ ಸಿದ್ದಾಂತ ರಾಜಕಾರಣವನ್ನೂ ಮೀರಿ ಒಬ್ಬರನ್ನೊಬ್ಬರು ಅಪ್ಪಿಕೊಳ್ಳುವುದೇ ಭಾರತದ ಪ್ರಜಾಪ್ರಭುತ್ವದ ಶಕ್ತಿ ಎಂಬುದು ಇಂದು ಮತ್ತೆ ಸಾಬೀತಾಗಿದೆ.

Follow Us:
Download App:
  • android
  • ios