ನವದೆಹಲಿ(ಆ.08): ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನಕ್ಕೆ ಭಾಜನರಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಇಂದು ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಷ್ಟ್ರ ರಾಜಧಾನಿ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಮುಖರ್ಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ಪ್ರಧಾನ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಬಾರಿಯ ಗಣರಾಜ್ಯೋತ್ಸವ ದಿನದಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಖ್ಯಾತ ಗಾಯಕ ಬೂಪೇನ್ ಹಜಾರಿಕಾ ಹಾಗೂ ಜನಸಂಘದ ಸಂಸ್ಥಾಪಕ ಸದಸ್ಯ ನಾನಾಜಿ ದೇಶಮುಖ್ ಅವರಿಗೆ ಭಾರತ ರತ್ನ ಘೋಷಿಸಿತ್ತು.

ಭೂಪೇನ್ ಹಜಾರಿಕಾ ಪರವಾಗಿ ಅವರ ಪುತ್ರ ತೇಜ್ ಹಜಾರಿಕಾ ಭಾರತ ರತ್ನ ಪ್ರಶಸ್ತಿ ಸ್ವೀಕರಿಸಿದರು.

ಅದರಂತೆ ನಾನಾ ಜಿ ದೇಶಮುಖ್ ಪರವಾಗಿ ದೀನದಯಾಳ್ ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ವಿರೇಂದ್ರಜೀತ್ ಸಿಂಗ್ ಭಾರತ ರತ್ನ ಪ್ರಶಸ್ತಿ ಸ್ವೀಕರಿಸಿದರು.

ಇನ್ನು ಪ್ರಣಬ್ ಮುಖರ್ಜಿ ಅವರಿಗೂ ಮೊದಲು ಭಾರತ ರತ್ನ ಪ್ರಶಶ್ತಿಗೆ ಭಾಜನರಾದ ಮಾಜಿ ರಾಷ್ಟ್ರಪತಿಗಳೆಂದರೆ, ಡಾ. ಎಸ್. ರಾಧಾಕೃಷ್ಣನ್, ಬಾಬು ರಾಜೇಂದ್ರ ಪ್ರಸಾದ್,  ಜಾಕೀರ್ ಹುಸೇನ್ ಹಾಗೂ ವಿವಿ ಗಿರಿ.