Asianet Suvarna News Asianet Suvarna News

ಕಾಂಗ್ರೆಸ್ ಒಳಗೆ ಬೆಂಕಿ : ಇಬ್ಬರು ಪ್ರಮುಖರ ವಿರುದ್ಧ ಕ್ರಮ?

ಕಾಂಗ್ರೆಸ್ ನಾಯಕರ ನಡುವೆ ರಂಪಾಟ ಆರಂಭವಾಗಿದೆ. ಒಳಜಗಳ ಇದೀಗ ತಾರಕಕ್ಕೆ ಏರಿದ್ದು, ಇಬ್ಬರು ನಾಯಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. 

Prameshwar Demands Action Against KN Rajanna
Author
Bengaluru, First Published Jun 8, 2019, 7:44 AM IST

ಬೆಂಗಳೂರು :  ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿದ ಮಾಜಿ ಸಚಿವ ರೋಷನ್‌ಬೇಗ್‌ ಅವರ ವಿರುದ್ಧ ಕ್ರಮಕ್ಕೆ ಹೈಕಮಾಂಡ್‌ಗೆ ಶಿಫಾರಸು ಮಾಡಿರುವ ರಾಜ್ಯ ಕಾಂಗ್ರೆಸ್‌ ನಾಯಕತ್ವಕ್ಕೆ, ಇಂತಹುದೇ ಧೋರಣೆ ತೋರಿದ ಮಾಜಿ ಶಾಸಕ ಹಾಗೂ ಸಿದ್ದರಾಮಯ್ಯ ಅವರ ಆಪ್ತ ಕೆ.ಎನ್‌. ರಾಜಣ್ಣ ವಿರುದ್ಧವೂ ಕ್ರಮ ಜರುಗಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಪಟ್ಟು ಹಿಡಿದಿರುವುದು ನುಂಗಲಾಗದ ತುತ್ತಾಗಿ ಪರಿಣಮಿಸಿದೆ.

‘ಝೀರೋ ಟ್ರಾಫಿಕ್‌ ಸಚಿವ’ ಎಂದು ಮೂದಲಿಸಿದ ಹಾಗೂ ಸತತವಾಗಿ ತಮ್ಮ ವಿರುದ್ಧ ವಾಗ್ದಾಳಿ ನಡೆಸಿದ ಕೆ.ಎನ್‌.ರಾಜಣ್ಣ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪರಮೇಶ್ವರ್‌ ಕಾಂಗ್ರೆಸ್‌ ನಾಯಕತ್ವದ ಮೇಲೆ ಒತ್ತಡ ತಂದಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೆ.ಎನ್‌.ರಾಜಣ್ಣ ಅವರನ್ನು ಕರೆಸಿ ತಮ್ಮ ಹೇಳಿಕೆ ಹಿಂಪಡೆಯುವಂತೆ ಹಾಗೂ ಕ್ಷಮೆ ಕೋರುವಂತೆ ಸೂಚನೆ ನೀಡಿದ್ದರು.

ಇದೇ ವೇಳೆ ಸಿದ್ದರಾಮಯ್ಯ ಅವರು ಪರಮೇಶ್ವರ್‌ ಅವರೊಂದಿಗೂ ಸಮಾಲೋಚನೆ ನಡೆಸಿದ್ದು, ರಾಜಣ್ಣ ನೀಡಿದ ಹೇಳಿಕೆಗೆ ಕ್ಷಮೆ ಕೋರುತ್ತಾರೆ. ಈ ಘಟನೆಯನ್ನು ಮರೆತು ಪಕ್ಷದ ಹಿತ ದೃಷ್ಟಿಯಿಂದ ಹೊಂದಿಕೊಂಡು ಹೋಗುವಂತೆ ಕೋರಿದರು ಎನ್ನಲಾಗಿದೆ.

ಆದರೆ, ಇದಕ್ಕೆ ಒಪ್ಪದ ಪರಮೇಶ್ವರ್‌ ಅವರು, ರಾಜಣ್ಣ ಸತತವಾಗಿ ತಮ್ಮ ವಿರುದ್ಧ ಹೇಳಿಕೆ ನೀಡಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ತೆರಳಿ ದುಂಡಾವರ್ತನೆ ತೋರಿದ್ದಾರೆ. ನಿಮ್ಮ ವಿರುದ್ಧ (ಸಿದ್ದರಾಮಯ್ಯ) ಹೇಳಿಕೆ ನೀಡಿದ ರೋಷನ್‌ ಬೇಗ್‌ ಅವರ ವಿರುದ್ಧ ಕ್ರಮ ಜರುಗಬಹುದಾದರೆ ಇಂತಹುದೇ ದುರ್ವರ್ತನೆ ತೋರಿದ ರಾಜಣ್ಣ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು? ಈ ವಿಷಯವನ್ನು ನಾನಂತೂ ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಒಂದು ವೇಳೆ ರಾಜ್ಯ ಕಾಂಗ್ರೆಸ್‌ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಈ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಬಳಿಗೆ ದೂರು ಒಯ್ಯುವುದಾಗಿ ತಿಳಿಸಿದರು ಎಂದು ಮೂಲಗಳು ಹೇಳಿವೆ.

ಈ ವೇಳೆ ಸಿದ್ದರಾಮಯ್ಯ ಅವರು ಪರಮೇಶ್ವರ್‌ ಅವರನ್ನು ಸಮಾಧಾನಪಡಿಸಲು ತೀವ್ರ ಪ್ರಯತ್ನ ನಡೆಸಿದ್ದು, ಪರಿಶಿಷ್ಟಜಾತಿಯ ನಿಮ್ಮ ಹಾಗೂ ಪರಿಶಿಷ್ಟಪಂಗಡದ ರಾಜಣ್ಣ ನಡುವೆ ಈ ರೀತಿ ಜಿದ್ದಾಜಿದ್ದಿ ನಡೆದರೆ ಅದು ಜಾತಿ ಸಂಘರ್ಷವಾಗಿ ಪರಿವರ್ತನೆಯಾಗಬಹುದು. ಈ ಬಗ್ಗೆ ತುಮಕೂರಿನಲ್ಲಿ ಪರಿಶಿಷ್ಟರು ಪ್ರತಿಭಟನೆಯ ಮಾತುಗಳನ್ನು ಹೇಳುತ್ತಿದ್ದಾರೆ. ಒಂದು ವೇಳೆ ಇದು ಇತರ ಜಿಲ್ಲೆಗಳಿಗೂ ವ್ಯಾಪಿಸಿದರೆ ಜಾತಿ ಸಂಘರ್ಷ ನಡೆದಂತೆ ಆಗುತ್ತದೆ. ಇದರಿಂದ ಕಾಂಗ್ರೆಸ್‌ ಪಕ್ಷಕ್ಕೆ ಹಾನಿಯುಂಟಾಗುತ್ತದೆ. ಇಂತಹ ವಿಕೋಪ ಸ್ಥಿತಿಗೆ ಪ್ರಕರಣವನ್ನು ತೆಗೆದುಕೊಂಡು ಹೋಗುವುದು ಬೇಡ. ರಾಜಣ್ಣಗೆ ಬಹಿರಂಗವಾಗಿ ಹೇಳಿಕೆ ಹಿಂಪಡೆದು, ಕ್ಷಮೆ ಕೋರುವಂತೆ ಸೂಚಿಸುತ್ತೇನೆ. ನೀವು ಈ ವಿಚಾರವನ್ನು ಇಲ್ಲಿಗೆ ಬಿಡಿ ಎಂದು ಕೋರಿದರು ಎನ್ನಲಾಗಿದೆ.

ಅದರಂತೆ ರಾಜಣ್ಣ ಶುಕ್ರವಾರ ಕೆಪಿಸಿಸಿ ಕಚೇರಿಗೆ ಆಗಮಿಸಿ ತಾವು ಪರಮೇಶ್ವರ್‌ ವಿರುದ್ಧ ನೀಡಿದ್ದ ಹೇಳಿಕೆಯನ್ನು ಹಿಂಪಡೆದು, ವಿಷಾದ ವ್ಯಕ್ತಪಡಿಸಿದರು. ಆದರೆ, ಪರಮೇಶ್ವರ್‌ ಮಾತ್ರ ಇನ್ನೂ ತಮ್ಮ ಪಟ್ಟು ಬಿಟ್ಟಿಲ್ಲ ಎನ್ನಲಾಗಿದ್ದು, ರಾಜಣ್ಣ ಮೇಲೆ ಕ್ರಮ ಜರುಗಿಸಲೇಬೇಕು ಎಂಬ ಆಗ್ರಹ ಮುಂದುವರೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಕೆಲ ಪರಿಶಿಷ್ಟಜಾತಿಯ ಸಂಘಟನೆಗಳು ಜೂ.12ರಂದು ತುಮಕೂರಿನಲ್ಲಿ ರಾಜಣ್ಣ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿವೆ ಎನ್ನಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್‌ ನಾಯಕತ್ವ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆಯಲು ಯತ್ನ ಮುಂದುವರೆಸಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios