ಮುಜಪ್ಫರ್‌ನಗರ[ಅ.12]: ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಮುಸ್ಲಿಂ ಮಹಿಳೆಯರ ಗುಂಪೊಂದು ಉತ್ತರಪ್ರದೇಶದ ಮುಜಪ್ಫರ್‌ನಗರದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿದೆ.

ರುಬಿ ಘಜ್ನಿ ಎಂಬ ಮಹಿಳೆ ಇದರ ನೇತೃತ್ವ ವಹಿಸಿದ್ದಾರೆ. ‘ಮೋದಿ ಅವರು ತ್ರಿವಳಿ ತಲಾಖ್‌ ನಿಷೇಧಿಸುವ ಮೂಲಕ ಮುಸ್ಲಿಂ ಮಹಿಳೆಯರ ಬದುಕು ಬದಲಿಸಿದ್ದಾರೆ. ಗ್ಯಾಸ್‌, ಉಚಿತ ವಸತಿ ಸೌಲಭ್ಯ ಒದಗಿಸಿದ್ದಾರೆ. ಇಷ್ಟೆಲ್ಲಾ ಸೌಕರ್ಯ ಒದಗಿಸಿದ ಪ್ರಧಾನಿ ಅಭಿನಂದನೆಗೆ ಅರ್ಹರು. ಅವರ ಹೆಸರಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗುವುದು’ ಎಂದು ರುಬಿ ಘಜ್ನಿ ತಿಳಿಸಿದ್ದಾರೆ.

ದೇವಸ್ಥಾನ ನಿರ್ಮಾಣ ಕುರಿತು ಜಿಲ್ಲಾಡಳಿತಕ್ಕೆ ಅರ್ಜಿ ಬರೆದಿರುವ ಮಹಿಳೆಯರ ಗುಂಪು, ತನ್ನ ಸ್ವಂತ ಹಣದಲ್ಲಿಯೇ ದೇವಸ್ಥಾನ ನಿರ್ಮಾಣ ಮಾಡಲಿದೆ. ಈ ಮೂಲಕ ಮೋದಿ ಅವರಿಗೆ ಮುಸ್ಲಿಂ ಮಹಿಳೆಯರ ಸಂಪೂರ್ಣ ಬೆಂಬಲ ಇದೆ ಎಂಬುದನ್ನು ಸಾರಲಾಗುವುದು. ಪ್ರಧಾನಿ ಮೋದಿ ಮುಸ್ಲಿಮರ ವಿರೋಧಿ ಎಂಬ ಆರೋಪ ತೊಡೆದುಹಾಕಲಾಗುವುದು ಎಂದು ಮಹಿಳೆಯರು ತಿಳಿಸಿದ್ದಾರೆ.