ಕಾಂಗ್ರೆಸ್‌ನಿಂದ ಸಚಿವರು ಎಷ್ಟು: 12 ಅಥವಾ 17?

Portfolio struggles continue in Congress
Highlights

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಂಪುಟಕ್ಕೆ ಕಾಂಗ್ರೆಸ್‌ನಿಂದ ಬುಧವಾರ ಸೇರ್ಪಡೆಯಾಗುವವರು 12 ಮಂದಿಯೋ ಅಥವಾ 17 ಮಂದಿಯೋ ಎಂಬುದರ ಬಗ್ಗೆ ಇಂದು ಮಹತ್ವದ ತೀರ್ಮಾನ ಹೊರಬೀಳಲಿದೆ.

ಬೆಂಗಳೂರು :  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಂಪುಟಕ್ಕೆ ಕಾಂಗ್ರೆಸ್‌ನಿಂದ ಬುಧವಾರ ಸೇರ್ಪಡೆಯಾಗುವವರು 12 ಮಂದಿಯೋ ಅಥವಾ 17 ಮಂದಿಯೋ ಎಂಬುದನ್ನು ನಿರ್ಧರಿಸಲು ಪಕ್ಷದ ರಾಜ್ಯ ನಾಯಕರು ಸೋಮವಾರ ತಡರಾತ್ರಿ ದೆಹಲಿಗೆ ತೆರಳಿದರು.ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರೊಂದಿಗೆ ಇಂದು 11 ಗಂಟೆಗೆ ಸಭೆ ನಿಗದಿಯಾಗಿದ್ದು, ಈ ಸಭೆಯಲ್ಲಿ ಸಂಪುಟ ಸೇರ್ಪಡೆಗೆ ಸಂಬಂಧಿಸಿದ ಮಹತ್ವದ ವಿಚಾರಗಳು ಇತ್ಯರ್ಥವಾಗಲಿವೆ.

ಸಂಪುಟ ವಿಸ್ತರಣೆ ಎಷ್ಟುಹಂತದಲ್ಲಿ ನಡೆಯಬೇಕು? ಹಲವು ಹಂತಗಳಲ್ಲಿ ವಿಸ್ತರಣೆ ನಡೆಯುವುದಿದ್ದರೆ ಈ ಬಾರಿ ಎಷ್ಟುಮಂದಿ ಕಾಂಗ್ರೆಸ್ಸಿನಿಂದ ಸಂಪುಟಕ್ಕೆ ಸೇರ್ಪಡೆಯಾಗಬೇಕು? ಹೀಗೆ ಸಂಪುಟ ಸೇರ್ಪಡೆ ಯಾಗುವವರಲ್ಲಿ ಹಿರಿಯರು ಎಷ್ಟುಮಂದಿ ಇರಬೇಕು? ಎಷ್ಟುಮಂದಿ ಕಿರಿಯರಿಗೆ ಅವಕಾಶ ನೀಡಬೇಕು? ಕೊಕ್‌ ಪಡೆಯುವ ಹಿರಿಯರು ಅಸಮಾಧಾನಗೊಳ್ಳದಂತೆ ಮಾಡಲು ಏನು ಮಾಡಬೇಕು? ಹಿರಿಯರ ಪೈಕಿ ಎಷ್ಟುಮಂದಿಯನ್ನು ಪಕ್ಷದಲ್ಲಿ ಬಳಸಿಕೊಳ್ಳಬೇಕು? ಈ ಎಲ್ಲಾ ಪ್ರಶ್ನೆಗಳು ರಾಹುಲ್‌ ಗಾಂಧಿ ಅವರೊಂದಿಗೆ ನಡೆಯುವ ಸಭೆಯಲ್ಲಿ ಇತ್ಯರ್ಥವಾಗಬೇಕಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್‌ ಶಾಸ ಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಸೋಮವಾರ ರಾತ್ರಿ ದೆಹಲಿಗೆ ತೆರಳಿದರು. ಸಭೆಯಲ್ಲಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಪಾಲ್ಗೊಳ್ಳಲಿದ್ದಾರೆ.

ಎರಡು ಹಾಗೂ ಎರಡಕ್ಕಿಂತ ಹೆಚ್ಚು ಬಾರಿ ಸಚಿವರಾಗಿರುವವರಿಗೆ ಮತ್ತೆ ಸಚಿವ ಸ್ಥಾನ ನೀಡಬಾರದು ಎಂಬ ತೀವ್ರ ಒತ್ತಡ ಕಾಂಗ್ರೆಸ್‌ನೊಳಗೆ ಇದೆ. ಮಾಜಿ ಉಪ ಸಭಾಧ್ಯಕ್ಷ ಶಿವಶಂಕರರೆಡ್ಡಿ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಶಾಸಕರು ರಾಜ್ಯದ ಪ್ರಮುಖ ನಾಯಕರು ಹಾಗೂ ಹೈಕಮಾಂಡ್‌ನ ಪ್ರಮುಖ ನಾಯಕರನ್ನು ಭೇಟಿ ಮಾಡಿ ಈ ಬಾರಿ ಹಿರಿಯರ ಬದಲಾಗಿ ಎರಡು-ಮೂರು ಹಾಗೂ ನಾಲ್ಕು ಬಾರಿ ಶಾಸಕ ರಾಗಿರುವವರಿಗೆ ಸಚಿವ ಸ್ಥಾನ ನೀಡಬೇಕು. ಹಿರಿತನದ ನೆಪದಲ್ಲಿ ಆರೇಳು ಬಾರಿ ಶಾಸಕರಾಗಿರುವವರಿಗೆ ಹಾಗೂ ಮೂರ್ನಾಲ್ಕು ಬಾರಿ ಸಚಿವರಾಗಿರುವವರಿಗೆ ಅವಕಾಶ ನೀಡಿದರೆ, ಎರಡರಿಂದ ನಾಲ್ಕು ಬಾರಿ ಗೆದ್ದ ಶಾಸಕರು ಸಚಿವ ಸ್ಥಾನದಿಂದ ಕಾಯಂ ವಂಚಿತರಾಗಬೇಕಾಗುತ್ತದೆ. ಹೀಗಾಗಿ ಈ ಬಾರಿ ಕಿರಿಯರಿಗೆ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ.

ಮೂಲಗಳ ಪ್ರಕಾರ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸಹ ಈ ಬಾರಿ ಹೊಸ ಪ್ರಯೋಗ ಮಾಡುವ ಉತ್ಸಾಹದಲ್ಲಿದ್ದಾರೆ ಎನ್ನಲಾಗಿದೆ. ಇದು ನಿಜವೇ ಆಗಿದ್ದರೆ, ಈ ಬಾರಿ ಕೇವಲ ನಾಲ್ಕರಿಂದ ಐದು ಮಂದಿ ಮಾತ್ರ ಹಿರಿಯರಿಗೆ ಅವಕಾಶ ದೊರೆಯಲಿದ್ದು, ಉಳಿದಂತೆ ಹೊಸ ಮುಖಗಳು ಸಚಿವ ಸ್ಥಾನ ಗಿಟ್ಟಿಸಬಹುದು ಎನ್ನಲಾಗಿದೆ. ಪರಂತು, ರಾಜ್ಯ ನಾಯಕತ್ವವು, ಈ ಬಾರಿ ವಿಧಾನಸಭೆಯಲ್ಲಿ ಪ್ರಬಲ ಪ್ರತಿಪಕ್ಷವಿದ್ದು, ಸರ್ಕಾರದ ವಿಚಾರಗಳ ಬಗ್ಗೆ ಸಮರ್ಥನೆ ಮಾಡಿಕೊಳ್ಳಲು ಅನುಭವವುಳ್ಳ ಕೆಲವರಾದರೂ ಹಿರಿಯರಿಗೆ ಅವಕಾಶ ನೀಡಬೇಕು ಎಂಬ ವಾದವನ್ನು ಮಂಗಳವಾರದ ಸಭೆಯಲ್ಲಿ ಮಂಡಿಸುವ ಸಾಧ್ಯತೆಯಿದೆ.

ಜತೆಗೆ, ಹಿರಿಯರಿಗೆ ಸಚಿವ ಸ್ಥಾನ ತಪ್ಪಿಸಿದರೆ ಅವರಿಗೆ ಯಾವ ಹೊಣೆಗಾರಿಕೆ ನೀಡಬೇಕು? ಪಕ್ಷದಲ್ಲಿ ಅವರಿಗೆ ಯಾವ ಸ್ಥಾನ ನೀಡಬೇಕು ಎಂಬುದು ಸಹ ಇತ್ಯರ್ಥವಾಗಬೇಕಿದೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಬದಲಾವಣೆಯೂ ಆಗಬೇಕಿದೆ. ಜತೆಗೆ, ಎಐಸಿಸಿಯಲ್ಲೂ ಹಿರಿಯರಿಗೆ ಅವಕಾಶ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳುತ್ತವೆ. ಇಷ್ಟಾದರೂ ಸಹ ಹಿರಿಯರು ಅಸಮಾಧಾನ ಗೊಳ್ಳುವ ಸಾಧ್ಯತೆ ಮತ್ತು ಅದರಿಂದ ಪಕ್ಷಕ್ಕೆ ಉಂಟಾಗುವ ಹಾನಿಯನ್ನು ತಡೆಯುವುದು ಕಷ್ಟಎಂಬ ಅರಿವು ನಾಯಕತ್ವಕ್ಕೆ ಇದೆ. ಹೀಗಾಗಿ ಎಲ್ಲಾ ಹೊಣೆಯನ್ನು ಹೈಕಮಾಂಡ್‌ ಮೇಲೆ ಹಾಕುವ ಉದ್ದೇಶವೂ ರಾಜ್ಯ ನಾಯಕರಿಗೆ ಇದೆ ಎಂದೇ ಹೇಳಲಾಗುತ್ತಿದೆ.

loader