ಶಾಂತಿಗಾಗಿ ರಾಜಕೀಯ ನಾಯಕರ ಕಾಲಿಗೆ ಮುತ್ತಿಟ್ಟ ಪೋಪ್‌ ಫ್ರಾನ್ಸಿಸ್‌| ದಕ್ಷಿಣ ಸೂಡಾನ್‌ನಲ್ಲಿ ಉದ್ಭವವಾಗಿದ್ದ ಅಶಾಂತಿ ಹಾಗೂ ನಾಗರಿಕ ಯುದ್ಧಗಳು ಮತ್ತೆ ನಡೆಯದಂತೆ ಶಾಂತಿ ಕಾಪಾಡಿ ಎಂದು ಮನವಿ 

ವ್ಯಾಟಿಕನ್‌ ಸಿಟಿ[ಏ.13]: ರಾಜಕೀಯ ನಾಯಕರು ಹಾಗೂ ಜನ ಸಾಮಾನ್ಯರು ಧಾರ್ಮಿಕ ಗುರುಗಳ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುವುದು ವಿಶೇಷವೇನಲ್ಲ. ಆದರೆ, ಆಫ್ರಿಕಾ ಖಂಡದ ದಕ್ಷಿಣ ಸೂಡಾನ್‌ ರಾಜಕೀಯ ಮುಖಂಡರಿಗೇ ಕ್ರೈಸ್ತ ಧರ್ಮಗುರು ಪೋಪ್‌ ಫ್ರಾನ್ಸಿಸ್‌ ಅವರು ತಮ್ಮ ಮಂಡಿಯೂರಿ ಕಾಲಿಗೆ ಮುತ್ತಿಟ್ಟಅಪರೂಪದ ಘಟನೆ ಕ್ಯಾಥೋಲಿಕ್‌ ಚಚ್‌ರ್‍ ಕೇಂದ್ರ ಕಚೇರಿ ಇರುವ ವ್ಯಾಟಿಕನ್‌ ಸಿಟಿಯಲ್ಲಿ ನಡೆದಿದೆ.

ದಕ್ಷಿಣ ಸೂಡಾನ್‌ನಲ್ಲಿ ಉದ್ಭವವಾಗಿದ್ದ ಅಶಾಂತಿ ಹಾಗೂ ನಾಗರಿಕ ಯುದ್ಧಗಳು ಮತ್ತೆ ನಡೆಯದಂತೆ ಶಾಂತಿ ಕಾಪಾಡಿಕೊಳ್ಳಬೇಕು ಎಂದು ಕೋರಿ ಪೋಪ್‌ ಫ್ರಾನ್ಸಿಸ್‌ ಅವರು ರಾಜಕೀಯ ಮುಖಂಡರ ಕಾಲಿಗೆ ಎರಗಿದ್ದರು. 82 ವರ್ಷದ ಪೋಪ್‌ ಅವರು ಕಾಲಿಗೆ ಮುತ್ತು ಕೊಡಲು ಬಾಗುತ್ತಿದ್ದಂತೆ ನಾಯಕರು ಒಂದು ಕ್ಷಣ ತಬ್ಬಿಬ್ಬಾದರು.

ನಿಶಸ್ತ್ರೀಕರಣಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದ ದಕ್ಷಿಣ ಸೂಡಾನ್‌ನ ಅಧ್ಯಕ್ಷ ಸಾಲ್ವಾ ಕೀರ್‌ ಮಯಾರ್ದಿತ್‌, ಅವರ ಮಾಜಿ ಉಪಾಧ್ಯಕ್ಷ ಹಾಗೂ ಇದೀಗ ಬಂಡಾಯ ನಾಯಕರಾಗಿ ಪರಿವರ್ತನೆಯಾದ ರೀಕ್‌ ಮಚಾರ್‌ ಹಾಗೂ ಇತರ ಮೂವರು ಉಪಾಧ್ಯಕ್ಷರುಗಳಿಗೆ ಮುಂದಿನ ತಿಂಗಳು ಒಮ್ಮತದ ಸರ್ಕಾರ ರಚನೆ ಮಾಡುವಂತೆ ತಿಳಿಸಿದರು.

Scroll to load tweet…

ಈ ಬಗ್ಗೆ ಮಾತನಾಡಿದ ಪೋಪ್‌ ಫ್ರಾನ್ಸಿಸ್‌ ಅವರು, ‘ನೀವೆಲ್ಲರೂ ಸಹೋದರರಂತೆ ಶಾಂತಿಯುತವಾಗಿರುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ನಾವೆಲ್ಲರೂ ಮುಂದುವರಿಯೋಣ ಎಂದು ನನ್ನ ಹೃದಯದಿಂದ ಕೇಳಿಕೊಳ್ಳುತ್ತಿದ್ದೇನೆ. ನಮ್ಮಲ್ಲಿ ಹಲವು ಸಮಸ್ಯೆಗಳು ಇರಬಹುದು. ಆದರೆ, ಅವುಗಳನ್ನು ನಿವಾರಿಸಿಕೊಳ್ಳಬಹುದು,’ ಎಂದು ಹೇಳಿದರು.