ಹಾರ್ದಿಕ್ ಕ್ಷೇತ್ರದಲ್ಲಿ ನಡೆದ ಪಿಎಂ ರ‍್ಯಾಲಿಗೆ ಬಂದಿದ್ದು 7-10000 ಜನ ಬಿಜೆಪಿಗೆ ಆತಂಕ, ಮುಂದಿನ ರ‍್ಯಾಲಿಯಲ್ಲಿ ಹೆಚ್ಚು ಜನರ ಸೇರಿಸಲು ಪ್ಲ್ಯಾನ್

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗುವ ರ‍್ಯಾಲಿಗಳೆಂದರೆ ಲಕ್ಷಗಟ್ಟಲೆ ಜನ ಸೇರುತ್ತಾರೆ. ಅದರಲ್ಲೂ ಗುಜರಾತ್‌ನಲ್ಲಿ ಜನರ ಸಂಖ್ಯೆ ಸ್ವಲ್ಪ ಹೆಚ್ಚೇ ಇರುತ್ತದೆ. ಆದರೆ ಸೂರತ್ ಜಿಲ್ಲೆಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಿದ್ದ 3 ಬಿಜೆಪಿ ರ‍್ಯಾಲಿಗಳಲ್ಲಿ ಜನರ ಸಂಖ್ಯೆ ತೀರಾ ಕಡಿಮೆ ಪ್ರಮಾಣದಲ್ಲಿತ್ತು. ಇದು ಬಿಜೆಪಿಯಲ್ಲಿ ಆತಂಕ ಮೂಡಿಸಿದೆ.

ಸೂರತ್ ಜಿಲ್ಲೆಯ ಜಾಸ್ದನ್ ಮತ್ತು ಧಾರಿ ಎಂಬಲ್ಲಿ ಮೋದಿ ಅವರ ಸಮಾವೇಶಕ್ಕೆ ಕ್ರಮವಾಗಿ 7 ಸಾವಿರ ಹಾಗೂ 10 ಸಾವಿರ ಜನರು ಮಾತ್ರ ಬಂದಿದ್ದರು. ಸೂರತ್ ಪಟೇಲರ ಭದ್ರಕೋಟೆಯಾಗಿದ್ದು, ಇಲ್ಲಿ ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್‌ರ ಬೇರು ಭದ್ರವಾಗಿವೆ. ಹೀಗಾಗಿ ಇಲ್ಲಿ ಬಿಜೆಪಿಗೆ ಅಭದ್ರತೆ ಕಾಡುತ್ತಿದೆ ಎನ್ನಲಾಗಿದೆ. ಜೊತೆಗೆ ಪಟೇಲ್ ಸಮುದಾಯದ ಹಾರ್ದಿಕ್ ಪಟೇಲ್, ಕಾಂಗ್ರೆಸ್ ಜೊತೆ ಕೈ ಜೋಡಿಸುವ ಮೂಲಕ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಡ್ಡು ಹೊಡೆದಿದ್ದಾರೆ. ಇದು ರಾಜ್ಯವನ್ನು ಮತ್ತೆ ಕೈವಶ ಮಾಡಿಕೊಳ್ಳುವ ತವಕದಲ್ಲಿರುವ ಬಿಜೆಪಿಯನ್ನು ಕಳವಳಕ್ಕೀಡು ಮಾಡಿದೆ.

ಹೀಗಾಗಿ ಮೋದಿ ಅವರ ಮುಂದಿನ ರ‍್ಯಾಲಿಗಳಲ್ಲಿ ಹೆಚ್ಚು ಜನರನ್ನು ಸೇರಿಸಬೇಕು ಎಂದು ಬಿಜೆಪಿಯವರು, ‘ಬನ್ನಿ, ನಮ್ಮ ಗುಜರಾತ್ ಸುಪುತ್ರನನ್ನು ನೋಡಿ’ ಎಂದು ಹೊಸದಾಗಿ ಪ್ರಚಾರ ಆರಂಭಿಸಿದ್ದಾರೆ. ಬುಧವಾರ ಮೋದಿ ಸೋಮನಾಥ್ ಸಮೀಪದ ಮೊರ್ಬಿ, ಪ್ರಾಚಿ ಎಂಬ ಗ್ರಾಮಗಳಲ್ಲಿ ಭಾವನಗರ್ ಸಮೀಪದ ಪಲಿಟಾನಾ ಮತ್ತು ದಕ್ಷಿಣ ಗುಜರಾತ್‌ನ ನವಸಾರಿಯಲ್ಲಿ ನಡೆಯಲಿರುವ

ರ‍್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ಈ ರ‍್ಯಾಲಿಯಲ್ಲಿ ಜನ ಯಾವ ಪ್ರಮಾಣದಲ್ಲಿ ಸೇರಲಿದ್ದಾರೆ ಎಂಬುದು ಕುತೂಹಲಕ್ಕೆ ಎಡೆಮಾಡಿದೆ. ಮೊದಲ ಮತ್ತು ಎರಡನೇ ಹಂತದ ಚುನಾವಣೆ ವೇಳೆ ಮೋದಿ ಒಟ್ಟಾರೆ 35 ರ‍್ಯಾಲಿಗಳಲ್ಲಿ ಭಾಗಿಯಾಗಲಿದ್ದಾರೆ. 

(ಗುಜರಾತಿನಿಂದ ಕನ್ನಡಪ್ರಭ ವರದಿ)