ಮುಂಬೈ: ‘ನಕ್ಸಲ್ ಚಳವಳಿ ಜತೆ ನಂಟು’, ‘ಹೊಸ ಸಂಚಿನ ಮಾಹಿತಿ’ ಹಾಗೂ ‘ದೊಡ್ಡ ರಾಜಕಾರಣಿಗಳು ಇವರ ಗುರಿ’ ಎಂಬ ಸುಳಿವು ಸಿಕ್ಕಿದ್ದಕ್ಕಾಗಿ ಆಂಧ್ರದ ಕ್ರಾಂತಿಕಾರಿ ಕವಿ ವರವರ ರಾವ್ ಸೇರಿದಂತೆ ಐವರು ನಕ್ಸಲ್‌ವಾದಿಗಳನ್ನು ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಸರ್ಕಾರ ಸ್ಪಷ್ಟಪಡಿಸಿದೆ. 

ಇದೇ ವೇಳೆ,  ‘ಪ್ರಸಕ್ತ ಆಡಳಿತದ ಬಗ್ಗೆ ಅಸಹಿಷ್ಣುತೆ ಹೊಂದಿರುವ ಇವರು ದೊಡ್ಡ ಮಟ್ಟದ ಮಾವೋವಾದಿ ಸಂಚಿನಲ್ಲಿ ಉದ್ದೇಶಪೂರ್ವಕವಾಗಿ ಭಾಗಿಯಾಗಿದ್ದರು’ ಎಂದು ಬಂಧನ ಕಾರ್ಯಾಚರಣೆ ನಡೆಸಿದ ಪುಣೆ ಪೊಲೀಸರು ಹೇಳಿದ್ದಾರೆ.

‘ಬಂಧಿತರಿಗೆ ನಕ್ಸಲ್ ಚಳವಳಿ ಜತೆ ನಂಟು ಇದೆ. ಆ ಕಾರಣಕ್ಕಾಗಿಯೇ ಅವರನ್ನು ಬಂಧಿಸಲಾಗಿದೆ. ಸಾಕ್ಷ್ಯವೇ ಇಲ್ಲದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿರಲಿಲ್ಲ. ದಾಳಿ ಕೈಗೊಳ್ಳುವ ಮುನ್ನ ಎಲ್ಲ ಪ್ರಕ್ರಿಯೆಗಳನ್ನು ಪಾಲಿಸಲಾಗಿದೆ’ ಎಂದು ಮಹಾರಾಷ್ಟ್ರದ ಗೃಹ ಖಾತೆ ರಾಜ್ಯ ಸಚಿವ  ಪಕ್ ಕೇಸರ್‌ಕರ್ ಅವರು ತಿಳಿಸಿದ್ದಾರೆ. ಯಾರನ್ನೋ ಮೆಚ್ಚಿಸಲು ಈ ಐವರನ್ನು ಬಂಧಿಸಲಿಲ್ಲ. ನಮ್ಮ ಬಳಿ ಸಾಕ್ಷ್ಯವೇ ಇಲ್ಲದಿದ್ದರೆ ಬಂಧಿತರ ವಿರುದ್ಧ ದಾಳಿಯನ್ನೂ ಮಾಡುತ್ತಿರಲಿಲ್ಲ ಎಂದಿದ್ದಾರೆ.