Asianet Suvarna News Asianet Suvarna News

ಅಂಬಿಯನ್ನು ರಾಜಕೀಯಕ್ಕೆ ಕರೆತಂದಿದ್ದೇ ಗೌಡರು : ಹೇಗಿತ್ತು ರಾಜಕೀಯ ಪಯಣ

 ರಾಜಕೀಯ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲಿ ಮಿಂಚಿ ಮರೆಯಾದ ಅಂಬರೀಷ್‌ ಅವರಿಗೆ ಜೆಡಿಎಸ್‌ ಪಕ್ಷ ಹಾಗೂ ಅದರ ವರಿಷ್ಠ ಎಚ್‌.ಡಿ.ದೇವೇಗೌಡರ ಕುಟುಂಬದ ಜೊತೆ ಅವಿನಾಭಾವ ಸಂಬಂಧವಿತ್ತು. ಈ ಇಬ್ಬರು ದಿಗ್ಗಜರು ಬೇರೆ ಬೇರೆ ಪಕ್ಷಗಳಲ್ಲಿ ಸಕ್ರಿಯ ರಾಜಕಾರಣ ಮಾಡಿದ್ದರೂ ಯಾವತ್ತಿಗೂ ಎಲ್ಲೆ ಮೀರಿದ ಜಿದ್ದು ಸಾಧಿಸಲಿಲ್ಲ.

Political Life Of Actor Ambareesh
Author
Bengaluru, First Published Nov 27, 2018, 8:53 AM IST

ಬೆಂಗಳೂರು :  ರಾಜಕೀಯ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲಿ ಮಿಂಚಿ ಮರೆಯಾದ ಅಂಬರೀಷ್‌ ಅವರಿಗೆ ಜೆಡಿಎಸ್‌ ಪಕ್ಷ ಹಾಗೂ ಅದರ ವರಿಷ್ಠ ಎಚ್‌.ಡಿ.ದೇವೇಗೌಡರ ಕುಟುಂಬದ ಜೊತೆ ಅವಿನಾಭಾವ ಸಂಬಂಧವಿತ್ತು. ಈ ಇಬ್ಬರು ದಿಗ್ಗಜರು ಬೇರೆ ಬೇರೆ ಪಕ್ಷಗಳಲ್ಲಿ ಸಕ್ರಿಯ ರಾಜಕಾರಣ ಮಾಡಿದ್ದರೂ ಯಾವತ್ತಿಗೂ ಎಲ್ಲೆ ಮೀರಿದ ಜಿದ್ದು ಸಾಧಿಸಲಿಲ್ಲ.

ದೇವೇಗೌಡರನ್ನು ಆರಾಧನೆಯ ಭಾವದಿಂದ ಕಾಣುತ್ತಿದ್ದ ಅಂಬರೀಷ್‌ ಅವರಿಗೆ ಅದೇ ಗೌಡರ ಮಕ್ಕಳ ಜತೆ ದೋಸ್ತಿ ಇತ್ತು. ಅದರಲ್ಲೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಅವರಿಗೆ ತುಂಬಾ ಆತ್ಮೀಯತೆ ಇತ್ತು. ಹೀಗಾಗಿಯೇ ಅಂಬರೀಷ್‌ ಅಗಲಿಕೆ ಸುದ್ದಿ ತಿಳಿದು ಅತೀವ ವ್ಯಾಕುಲತೆ ತೋರಿದ ಕುಮಾರಸ್ವಾಮಿ ಅವರು ತಮ್ಮ ಆಪ್ತ ಗೆಳೆಯನ ಅಂತಿಮ ಯಾತ್ರೆಯುದ್ದಕ್ಕೂ ಅವರ ಕುಟುಂಬದ ಜತೆ ನಿಂತಿದ್ದರು.

ಗೌಡರ ಕುಟುಂಬ ಮತ್ತು ಅಂಬರೀಷ್‌ ನಡುವಿನ ಬಿಡಿಸಲಾಗದ ನಂಟಿಗೆ ಸಮುದಾಯ ಪ್ರೀತಿಯೂ ಒಂದು ಕಾರಣ ಎನ್ನಬಹುದು. ಉಭಯ ನಾಯಕರು ತಮ್ಮ ಬದುಕಿನಲ್ಲಿ ಏರಿಳಿತ ಕಂಡಾಗಲೆಲ್ಲಾ ಪರಿಸ್ಪರ ಊರುಗೋಲು ಮಾಡಿಕೊಂಡೇ ಮತ್ತೆ ಪುಟ್ಟಿದೆದ್ದು ಬಂದವರು. ಕಲಾವಿದನಾಗಿ ಚಲನಚಿತ್ರ ರಂಗದಲ್ಲಿ ಮಿನುಗುತ್ತಿದ್ದ ಅಂಬರೀಷ್‌ ಅವರ ವರ್ಚಸ್ಸಿಗಿರುವ ತಾಕತ್ತು ಅರಿತ ಚತುರ ರಾಜಕಾರಣಿ ದೇವೇಗೌಡರು, ಆ ಸ್ಟಾರ್‌ಗಿರಿಯನ್ನು ರಾಜಕೀಯ ಶಕ್ತಿಯಾಗಿ ಪರಿವರ್ತಿಸಲು ಮೊದಲ ಹೆಜ್ಜೆ ಇಟ್ಟರು. 1996ರಲ್ಲಿ ತಮ್ಮಿಂದ ತೆರವಾಗಿದ್ದ ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಅಖಾಡಕ್ಕೆ ಅಂಬರೀಷ್‌ ಅವರನ್ನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದರು.

ಅಂದು ಕಾಂಗ್ರೆಸ್ಸಿಗರ ಒಗ್ಗಟ್ಟಿನ ಹೋರಾಟದ ಮುಂದೆ ಗೌಡರ ತಂತ್ರಗಾರಿಕೆಗೆ ಸೋಲಾಯಿತು. ಈ ಮೂಲಕ ಚಲನಚಿತ್ರರಂಗದಲ್ಲಿ ಮೊದಲ ಯತ್ನದಲ್ಲೇ ಭರ್ಜರಿ ಯಶಸ್ಸು ಪಡೆದಿದ್ದ ಅಂಬರೀಷ್‌ ಅವರ ರಾಜಕೀಯವು ಸೋಲಿನೊಂದಿಗೆ ಆರಂಭವಾಯಿತು. ವಿಪರ್ಯಾಸವೆಂದರೆ ಆ ರಾಜಕೀಯ ಪರ್ವದ ಅಂತ್ಯವು ಸಹ ಬೇಸರದಿಂದಲೇ ಆಯಿತು. ಅಂಬಿ ಅವರ ರಾಜಕೀಯ ಅಧ್ಯಾಯದ ಪ್ರಾರಂಭ ಮತ್ತು ಮುಕ್ತಾಯವೂ ದೇವೇಗೌಡರ ಸಖ್ಯದೊಂದಿಗೆ ಆಯಿತು ಎಂಬುದು ಗಮನಾರ್ಹ ಸಂಗತಿ.

ಅಂದು ಉಪಚುನಾವಣೆಗೆ ಅಂಬರೀಷ್‌ ಅವರನ್ನೇ ಅಭ್ಯರ್ಥಿಯಾಗಿಸುವ ದೇವೇಗೌಡರಿಗೆ ಮತ್ತೊಂದು ಬಲವಾದ ಕಾರಣವಿತ್ತು. ಜನತಾ ಪರಿವಾರದಲ್ಲಿ ತಮ್ಮ ಕಡುವೈರಿ ರಾಮಕೃಷ್ಣ ಹೆಗಡೆ ಜತೆ ಗುದ್ದಾಡುತ್ತಲೇ ಮುಖ್ಯಮಂತ್ರಿ ಪದವಿ ಕನಸು ಕಂಡಿದ್ದ ಗೌಡರಿಗೆ ಆ ಕನಸು ಈಡೇರಿಕೆಗೆ ಸಮುದಾಯದ ಶಕ್ತಿ ನೀಡುವಲ್ಲಿ ಅಂಬರೀಷ್‌ ಸಹ ಕಾರಣೀಭೂತರು ಎಂಬುದು ಹೊರಜಗತ್ತಿಗೆ ಬಿತ್ತರಗೊಳ್ಳದ ಸಂಗತಿಯಾಗಿದೆ.

1995ರ ವಿಧಾನಸಭಾ ಚುನಾವಣೆಗೆ ಮುನ್ನ ಬೆಂಗಳೂರಿನ ಕಬ್ಬನ್‌ ಪಾರ್ಕ್ನಲ್ಲಿ ಒಕ್ಕಲಿಗರ ಬಲ ಪ್ರದರ್ಶನ ನಡೆದಿತ್ತು. ಈ ರಾರ‍ಯಲಿ ಮೂಲಕ ದೇವೇಗೌಡರ ಬೆನ್ನಿಗೆ ಮೊಟ್ಟಮೊದಲ ಬಾರಿಗೆ ಒಕ್ಕಲಿಗ ಸಮುದಾಯವು ಬಹಿರಂಗವಾಗಿ ರಾಜಕೀಯ ಬಲ ತುಂಬಿತ್ತು. ಅಂದು ಒಕ್ಕಲಿಗರ ರಾರ‍ಯಲಿ ಸಂಘಟಿಸುವಲ್ಲಿ ಆ ಸಮುದಾಯದ ಪ್ರಮುಖರು ಹಾಗೂ ಸ್ವಾಮೀಜಿ ಜೊತೆ ಬಹುಮುಖ್ಯ ಪಾತ್ರವಹಿಸಿದ್ದು ಅಂಬರೀಷ್‌. ಅಲ್ಲದೆ, ರಾಜಕೀಯ ಕಡು ವೈರಿಗಳಾಗಿದ್ದ ದೇವೇಗೌಡ, ಎಸ್‌.ಎಂ.ಕೃಷ್ಣ, ಡಿ.ಕೆ.ಶಿವಕುಮಾರ್‌, ವೈ.ಕೆ.ರಾಮಯ್ಯ ಅವರನ್ನು ಒಂದೇ ವೇದಿಕೆಯಲ್ಲಿ ಸೇರಿಸುವಂತೆ ಅವರು ಮಾಡಿದ್ದರು. ಇದರ ಉಪಕಾರಾರ್ಥವಾಗಿ ದೇವೇಗೌಡರು, ರಾಮನಗರ ಉಪಚುನಾವಣೆಗೆ ಅಂಬರೀಷ್‌ ಅವರನ್ನೇ ಹುರಿಯಾಳಾಗಿಸಿದರು.

ರಾಮನಗರದ ಸೋಲಿನ ಬೇಸರದಿಂದ ರಾಜಕೀಯ ತೊರೆಯದಂತೆ ಅಂಬರೀಷ್‌ ಅವರನ್ನು ನೋಡಿಕೊಂಡ ದೇವೇಗೌಡರು, 1998ರಲ್ಲಿ ಮಂಡ್ಯ ಲೋಕಸಭಾ ಚುನಾವಣೆಗೆ ಅವರನ್ನು ಗೆಲ್ಲಿಸಿ ದೆಹಲಿಗೆ ಕರೆದೊಯ್ದರು. ಮತ್ತೆ ರಾಜಕೀಯ ಸ್ಥಿತ್ಯಂತರಗಳು ಗತಿಸಿದ್ದವು. ತಮ್ಮ ಜಿಲ್ಲೆಯ ಕೃಷ್ಣ ಅವರ ಮಾತಿಗೆ ಒಪ್ಪಿದ ಅಂಬರೀಷ್‌, ಗೌಡರ ಸಂಗ ಬಿಟ್ಟು ಕೈ ಹಿಡಿದರು. ಆದರೂ ಅಂಬರೀಷ್‌ ಅವರ ರಾಜಕೀಯಕ್ಕೆ ಯಾವತ್ತಿಗೂ ದೇವೇಗೌಡರ ಕುಟುಂಬ ಅಡ್ಡವಾಗಲಿಲ್ಲ. ಸತತವಾಗಿ ಮಂಡ್ಯದಿಂದ ಅವರು ಲೋಕಸಭೆ ಪ್ರವೇಶಿಸಲು ಪರೋಕ್ಷವಾಗಿ ದಳಪತಿಗಳ ಸಹಕಾರವಿತ್ತು ಎಂಬುದು ಜನಜನಿತ. 2004ರಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸೋಲನುಭವಿಸಿದ ಅಂಬರೀಷ್‌ ಸ್ವಂತ ಊರಾದ ಮದ್ದೂರಿನಲ್ಲಿ ಸ್ಪರ್ಧಿಸಿದ್ದರೆ ಗೆಲ್ಲಬಹುದಿತ್ತು. ಆದರೆ, ಅಲ್ಲಿ ದೇವೇಗೌಡರ ಬೀಗರಾದ ಈಗಿನ ಸಚಿವ ಡಿ.ಸಿ.ತಮ್ಮಣ್ಣ ಆಗ ಶಾಸಕರಾಗಿದ್ದರು ಎಂಬ ಪ್ರೀತಿಯ ಕಾರಣಕ್ಕಾಗಿ ತಾವು ಸ್ಪರ್ಧಿಸಲು ಅಂಬರೀಷ್‌ ಹಿಂಜರಿದರು ಎನ್ನಲಾಗಿದೆ.

ಕಳೆದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನದಿಂದ ವಜಾಗೊಂಡ ಬಳಿಕ ಅಂಬರೀಷ್‌ ಅವರಿಗೆ ಗೌಡರ ಕುಟುಂಬವು ಬಹಿರಂಗವಾಗಿ ಬೆನ್ನಿಗೆ ನಿಂತಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಪಕ್ಷಕ್ಕೆ ಕರೆದು ಅಂಬರೀಷ್‌ ಬಯಸಿದ ಕ್ಷೇತ್ರದಿಂದ ನಿಲ್ಲಿಸಿ ಗೆಲ್ಲಿಸಲು ದಳಪತಿ ಯತ್ನಿಸಿದರು. ಅಂಬರೀಷ್‌ ಜೆಡಿಎಸ್‌ ಸೇರಲಿಲ್ಲ. ಆದರೆ ವಿಧಾನಸಭಾ ಚುನಾವಣೆ ವೇಳೆ ಮದ್ದೂರಿನಲ್ಲಿ ಜೆಡಿಎಸ್‌ ಅಭ್ಯರ್ಥಿ ಆಗಿದ್ದ ಹಾಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಜತೆ ಹೋಗಿ ಮತ ಹಾಕಿದ್ದರು.

ವರದಿ :  ಗಿರೀಶ್‌ ಮಾದೇನಹಳ್ಳಿ

Follow Us:
Download App:
  • android
  • ios