ಬೆಂಗಳೂರು :  ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ ಆವರಣದಲ್ಲಿ ಮತ್ತೆ ಕಾಂಚಾಣ ಸದ್ದು ಮಾಡಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಸಿ.ಪುಟ್ಟರಂಗಶೆಟ್ಟಿಅವರ ಆಪ್ತ ಸಹಾಯಕ ಮೋಹನ್‌ ಬಳಿ 25.76 ಲಕ್ಷ ರು. ನಗದು ಶುಕ್ರವಾರ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಮೋಹನ್‌ ಅವರನ್ನು ಬಂಧಿಸಲಾಗಿದೆ.

ಈಗ ಹಣದ ಮೂಲ ವಾರಸುದಾರರ ಕುರಿತು ತೀವ್ರ ವಿವಾದ ಸ್ವರೂಪ ಪಡೆದುಕೊಂಡಿದ್ದು, ಹಣದ ಬಗ್ಗೆ ಮೋಹನ್‌ ಅವರ ನೀಡಿರುವ ದಂದ್ವ ಹೇಳಿಕೆಯು ಮತ್ತಷ್ಟುಅನುಮಾನಗಳ ಹುಟ್ಟಿಗೆ ಕಾರಣವಾಗಿದೆ.

2016ರ ಅಕ್ಟೋಬರ್‌ 21ರಂದು ಇದೇ ರೀತಿ ವಿಧಾನಸೌಧ ಆವರಣದಲ್ಲಿ ಹೈಕೋರ್ಟ್‌ ವಕೀಲ ಎಚ್‌.ಎಂ. ಸಿದ್ದಾಥ್‌ರ್‍ ಎಂಬುವರ ಕಾರಿನಲ್ಲಿ 1.97 ಕೋಟಿ ರು. ಜಪ್ತಿಯಾಗಿತ್ತು. ಇದು ಪ್ರಭಾವಿ ರಾಜಕೀಯ ಮುಖಂಡರೊಬ್ಬರಿಗೆ ಸೇರಿದ ಹಣ ಎಂಬ ಗುಮಾನಿ ಉಂಟಾಗಿ ರಾಜಕೀಯ ಹೇಳಿಕೆ-ಪ್ರತಿಹೇಳಿಕೆಗೆ ನಾಂದಿ ಹಾಡಿತ್ತು. ಆ ಘಟನೆ ಜನಮಾನಸದಿಮದ ಮಾಸುವ ಮುನ್ನವೇ ಈ ಘಟನೆ ನಡೆದಿದೆ.

ಆಗಿದ್ದೇನು?: ವಿಧಾನಸೌಧದಲ್ಲಿರುವ ಸಚಿವರ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಡಿ ಕಾರ್ಯನಿರ್ವಹಿಸುವ ಸಚಿವ ಪುಟ್ಟರಂಗಶೆಟ್ಟಿಅವರ ಆಪ್ತ ಸಹಾಯಕ ಮೋಹನ್‌, ಸಂಜೆ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಹೊರಟ್ಟಿದ್ದರು. ಆ ವೇಳೆ ಪಶ್ಚಿಮ ದ್ವಾರದಲ್ಲಿ ಭದ್ರತೆ ನಿಯೋಜಿತರಾಗಿದ್ದ ಪೊಲೀಸರು, ಮೋಹನ್‌ ಅವರನ್ನು ಅಡ್ಡಗಟ್ಟಿಬ್ಯಾಗ್‌ ಅನ್ನು ತಪಾಸಣೆಗೊಳಪಡಿಸಿದಾಗ ಹಣ ಪತ್ತೆಯಾಗಿದೆ.

ಬ್ಯಾಗ್‌ನಲ್ಲಿ ಕಂತೆ ಕಂತೆ ಹಣ ನೋಡಿ ಶಂಕಿತರಾದ ಪೊಲೀಸರು, ಆ ಹಣದ ಬಗ್ಗೆ ಮೋಹನ್‌ ಅವರನ್ನು ವಿಚಾರಿಸಿದ್ದಾರೆ. ಆದರೆ ಅವರಿಂದ ಗೊಂದಲಕಾರಿ ಹೇಳಿಕೆ ಬಂದ ಕಾರಣ ಮತ್ತಷ್ಟುಅನುಮಾನಿತರಾದ ಪೊಲೀಸರು, ತಕ್ಷಣವೇ ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಸಿದ್ದರಾಜು ಅವರಿಗೆ ಮಾಹಿತಿ ನೀಡಿದ್ದಾರೆ. ಡಿಸಿಪಿ ಸೂಚನೆ ಮೇರೆಗೆ ಮೋಹನ್‌ ಅವರನ್ನು ಬೈಕ್‌ ಸಮೇತ ವಶಕ್ಕೆ ಪಡೆದು ವಿಧಾನಸೌಧ ಠಾಣೆಗೆ ಕರೆದೊಯ್ದು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಒಮ್ಮೆ ಈ ಹಣವು ಸ್ವಂತದ್ದು ಎಂದೂ ಹೇಳಿದರೆ, ಮಗದೊಮ್ಮೆ ಸ್ನೇಹಿತರು ಕೊಟ್ಟಿದ್ದರು ಎಂದು ಮೋಹನ್‌ ಹೇಳಿಕೆ ನೀಡಿದ್ದಾರೆ. ಹೀಗಾಗಿ ಈ ದಂದ್ವ ಹೇಳಿಕೆ ಹಿನ್ನೆಲೆಯಲ್ಲಿ ಮೋಹನ್‌ ಅವರನ್ನು ತೀವ್ರ ಪೊಲೀಸರು ಪ್ರಶ್ನಿಸಿದ ನಂತರ ವಿವರ ಬಯಲಿಗೆ ಬಂತು. ನಂತರ ಎಫ್‌ಐಆರ್‌ ದಾಖಲಿಸಿ ಅವರನ್ನು ಬಂಧಿಸಲಾಗಿದೆ.

ಯಾರು ಈ ಮೋಹನ್‌?

ವಿಧಾನಸೌಧ ಸಚಿವಾಲಯದಲ್ಲಿ ಹನ್ನೆರಡು ವರ್ಷಗಳಿಂದ ಹೊರಗುತ್ತಿಗೆ ಆಧಾರದಡಿ ಮೋಹನ್‌ ಟೈಪಿಸ್ಟ್‌ ಆಗಿದ್ದು, ಹಲವು ಸಚಿವರ ಆಪ್ತ ಶಾಖೆಯಲ್ಲಿ ಅವರು ಕಾರ್ಯನಿರ್ವಹಿಸಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಅಲ್ಪಸಂಖ್ಯಾತ ಖಾತೆ ಸಚಿವ ಆರ್‌.ರೋಷನ್‌ ಬೇಗ್‌ ಕಚೇರಿಯಲ್ಲಿ ಕೆಲಸ ಮಾಡಿದ್ದ ಮೋಹನ್‌, ಮೈತ್ರಿ ಸರ್ಕಾರದ ಚಾಮರಾಜನಗರದ ಕಾಂಗ್ರೆಸ್‌ ಶಾಸಕ ಪುಟ್ಟರಂಗಶೆಟ್ಟಿಅವರು ಸಚಿವರಾದ ನಂತರ ಅವರಿಗೆ ಆಪ್ತ ಸಹಾಯಕನಾಗಿ ನೇಮಕಗೊಂಡಿದ್ದರು ಎಂದು ತಿಳಿದು ಬಂದಿದೆ.

ಮೋಹನ್‌ ಸರ್ಕಾರಿ ನೌಕರನಲ್ಲ. ಈಗ ಜಪ್ತಿಯಾಗಿರುವ ಹಣವು ಸ್ವಂತದ್ದು ಎಂದು ಆತ ಹೇಳಿದ್ದಾನೆ. ಆದರೆ ಈ ಬಗ್ಗೆ ಅನುಮಾನವಿದ್ದು, ತನಿಖೆ ಮುಂದುವರೆಸಿದ್ದೇವೆ. ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

- ಸಿದ್ದರಾಜು, ಡಿಸಿಪಿ, ವಿಧಾನಸೌಧ ಭದ್ರತಾ ವಿಭಾಗ