ಬೆಂಗಳೂರು[ಏ.28]: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್‌ ಅಧಿಕಾರಿಗಳಿಗೆ .25 ಲಕ್ಷ ನಗದು ಬಹುಮಾನ ನೀಡುವಂತೆ ಕೋರಿ ರಾಜ್ಯ ಗೃಹ ಇಲಾಖೆಗೆ ಎಸ್‌ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್‌ ಪತ್ರ ಬರೆದಿದ್ದಾರೆ.

ಈ ಹತ್ಯೆ ಕೃತ್ಯವು ಪೊಲೀಸ್‌ ಇಲಾಖೆಗೆ ಸವಾಲಾಗಿ ಪರಿಣಮಿಸಿತ್ತು. ಸತತವಾಗಿ ಒಂದು ವರ್ಷ ಪರಿಶ್ರಮಪಟ್ಟಪರಿಣಾಮ ಆರೋಪಿಗಳು ಸೆರೆಯಾದರು. ಈ ತನಿಖೆಯಿಂದ ರಾಜ್ಯ ಮತ್ತು ಹೊರ ರಾಜ್ಯದಲ್ಲಿ ನಡೆದಿದ್ದ ವಿಚಾರವಾದಿಗಳ ಕೊಲೆಗಳಿಗೆ ಮಹತ್ವದ ಸುಳಿವು ಸಹ ಸಿಕ್ಕಿದೆ. ಹೀಗಾಗಿ ಪ್ರಕರಣವನ್ನು ಭೇದಿಸುವಲ್ಲಿ ಅವಿಶ್ರಾಂತವಾಗಿ ದುಡಿದ ಅಧಿಕಾರಿಗಳಿಗೆ ಸೂಕ್ತ ಬಹುಮಾನ ನೀಡಿ ಗೌರವಿಸಬೇಕು ಎಂದು ಎಸ್‌ಐಟಿ ಮುಖ್ಯಸ್ಥರು ಮನವಿ ಮಾಡಿದ್ದಾರೆ. ಈ ಕೋರಿಕೆಗೆ ಸರ್ಕಾರ ಸಹ ಪೂರಕವಾಗಿ ಸ್ಪಂದಿಸಿದೆ ಎಂದು ತಿಳಿದುಬಂದಿದೆ.

ಸರ್ಕಾರಕ್ಕೆ ಪತ್ರ ಬರೆದಿರುವ ಸಂಗತಿಯನ್ನು ಬಿ.ಕೆ.ಸಿಂಗ್‌ ‘ಕನ್ನಡಪ್ರಭ’ಕ್ಕೆ ಖಚಿತಪಡಿಸಿದ್ದಾರೆ. ಅಲ್ಲದೆ, ಎಸ್‌ಐಟಿ ಸಿಬ್ಬಂದಿಗೆ ಬಹುಮಾನ ನೀಡುವಂತೆ ಸರ್ಕಾರವನ್ನು ಗೌರಿ ಲಂಕೇಶ್‌ ಸೋದರಿ ಕವಿತಾ ಲಂಕೇಶ್‌ ಸಹ ಟ್ವೀಟರ್‌ನಲ್ಲಿ ಒತ್ತಾಯಿಸಿದ್ದಾರೆ.