ಚಿತ್ರದುರ್ಗ(ನ.02): ಇದೇ ತಿಂಗಳ 10 ರಂದು ಟಿಪ್ಪು ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದನ್ನು ವಿರೋಧಿಸಿ ರಾಜ್ಯಾದ್ಯಂತ ಹೋರಾಟಗಳು ನಡೆಯುತ್ತಿದೆ. ಚಿತ್ರದುರ್ಗದಲ್ಲಿ ಒನಕೆ ಚಳವಳಿ ನಡೆಸಲು ಸಿದ್ಧತೆ ನಡೆದಿತ್ತು. ಆದರೆ ಅದಕ್ಕೀಗ ಪೊಲೀಸರು ನಿರ್ಬಂಧ ಹೇರಿದ್ದಾರೆ. ಕಾರಣ ಏನು ಎಂದು ತಿಳಿದರೆ ಮಾತ್ರ ಅಚ್ಚರಿಯಾಗದೆ ಇರಲ್ಲ.

ಒನಕೆ ಚಳವಳಿಗೆ ಅನುಮತಿ ನಿರಾಕರಣೆ: ಚಿತ್ರದುರ್ಗ ಪೊಲೀಸರಿಗೆ ಒನಕೆ ಆಯುಧವಂತೆ!

ಟಿಪ್ಪು ಜಯಂತಿ ವಿರೋಧಿಸಿ ಇವತ್ತು ಚಿತ್ರದುರ್ಗದಲ್ಲಿ ಒನಕೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಆದರೆ ಜಿಲ್ಲಾಡಳಿತ ಮಾತ್ರ ಅವಕಾಶ ಕೊಡುವುದಿಲ್ಲ ಎನ್ನುತ್ತಿದೆ. ಇದಕ್ಕೆ ಕಾರಣ ನೋಡಿದರೆ ಅಚ್ಚರಿಯಾಗುತ್ತದೆ. ಚಿತ್ರದುರ್ಗ ಪೊಲೀಸರಿಗೆ ಒನಕೆ ಒಂದು ಆಯುದವಂತೆ, ಅದೇ ಕಾರಣಕ್ಕೆ ಚಳವಳಿಗೆ ಅನುಮತಿ ನೀಡುವುದಿಲ್ಲ ಎಂದು ಪ್ರತಿಭಟನಾಕಾರಿಗೆ ಹೇಳಿದ್ದರಂತೆ. ಆದರೆ ಎಸ್ಪಿ ಮಾತ್ರ ಪ್ರತಿಭಟನೆಗೆ ಅವಕಾಶ ಕೊಡಲು ಸಾಧ್ಯವಿಲ್ಲ ಎಂದಿದ್ದು ನಿಖರ ಕಾರಣ ಕೊಟ್ಟಿಲ್ಲ.

ಆದರೆ ಪೊಲೀಸರು ಬಿಜೆಪಿ ಹಾಗೂ ಭಜರಂಗ ದಳದ ಕೆಲವು ಮುಖಂಡರ ಮನೆಗಳಲ್ಲಿ ಓನಕೆಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಇದೇ ತಿಂಗಳ 10ರಂದು ನಡೆಯಲಿರುವ ಟಿಪ್ಪು ಜಯಂತಿ ವಿರೋಧಿಸಿ ಒನಕೆ ಚಳವಳಿ ನಡೆಸಲು ಈಗಾಗಲೇ ಕಳೆದ ಒಂದು ವಾರದಿಂದ ಕರಪತ್ರ ಹಂಚಲಾಗಿದೆ. ಚಳವಳಿ ಹತ್ತಿರವಾಗುತ್ತಿದ್ದಂತೆಯೇ ಆತಂಕ ಹೆಚ್ಚಾಗಿದ್ದು, ಪೊಲೀಸರು ಬಿಜೆಪಿ ಮುಖಂಡರ ಮನೆಗಳಲ್ಲಿ ಒನಕೆಗಳಿಗಾಗಿ ದಾಳಿ ನಡೆಸುತ್ತಿದ್ದಾರೆ. ಇದು ಆಕ್ರೋಶಕ್ಕೆ ಕಾರಣವಾಗಿದೆ.

ಪೊಲೀಸರು ಏನೇ ಹೇಳಿದರೂ ಬಿಜೆಪಿ ಹಾಗೂ ಸಂಘಪರಿವಾರ ಇವತ್ತು ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಆದರೆ ಪೊಲೀಸರು ಪ್ರತಿಭಟನೆ ಹತ್ತಿಕ್ಕಲು ಮುಂದಾಗಿದ್ದು, ಈಗಾಗಲೇ ಹಲವರನ್ನು ಬಂಧಿಸಲಾಗಿದೆ.