ಬೆಂಗಳೂರು[ಮಾ.19]:  ನಗರದ ಮಾನ್ಯತಾ ಟೆಕ್‌ಪಾರ್ಕ್‌ನಲ್ಲಿ ಸ್ಟಾರ್ಟ್‌ಅಪ್ ಉದ್ಯಮಿಗಳೊಂದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂವಾದ ನಡೆಸುತ್ತಿದ್ದಾಗ ಹೊರಗೆ ಟೆಕಿಗಳ ಗುಂಪು ಮೋದಿ ಮೋದಿ ಎಂದು ಕೂಗಿದ್ದರಿಂದ ರಾಹುಲ್ ಅವರಿಗೆ ತೀವ್ರ ಮುಜುಗರ ಉಂಟಾದ ಘಟನೆ ಸೋಮವಾರ ನಡೆದಿದೆ/

ಸಂವಾದ ಮುಗಿಸಿ ರಾಹುಲ್ ಹೊರಹೋಗುವಾಗಲೂ ಈ ಗುಂಪು ಮೋದಿ ಮೋದಿ, ಹರಹರ ಮೋದಿ ಎಂದು ಕೂಗುತ್ತ ‘ಮತ್ತೊಮ್ಮೆ ಮೋದಿ’ ಎಂಬ ಫಲಕಗಳನ್ನು ಪ್ರದರ್ಶಿಸಿತು. ಈ ಘಟನೆಯಿಂದ ಕೆಂಡಾಮಂಡಲಗೊಂಡ ರಾಹುಲ್ ಗಾಂಧಿ ಸ್ಥಳೀಯ ಶಾಸಕರೂ ಆಗಿರುವ ಸಚಿವ ಕೃಷ್ಣ ಬೈರೇಗೌಡ ಹಾಗೂ ಮಾಧ್ಯಮ ವಿಭಾಗದ ಮುಖ್ಯಸ್ಥ ರಿಜ್ವಾನ್ ಅರ್ಷದ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.

ಮಾನ್ಯತಾ ಟೆಕ್‌ಪಾರ್ಕ್‌ನ ಆ್ಯಂಪಿ ಥಿಯೇಟರ್‌ನಲ್ಲಿ ರಾಹುಲ್ ಗಾಂಧಿ ಸಂವಾದದ ವೇಳೆ ಮೋದಿ ಪರ ಘೋಷಣೆ ಕೂಗಿದ ಗುಂಪು ತೀವ್ರ ಮುಜುಗರ ಉಂಟು ಮಾಡಿತು.

ಈ ಬಗ್ಗೆ ಬೆಂಗಳೂರಿನಿಂದ ತೆರಳುವ ಮುನ್ನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ ರಾಹುಲ್ ಅವರು, ಕೃಷ್ಣ ಬೈರೇಗೌಡ ಹಾಗೂ ರಿಜ್ವಾನ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಸ್ಟಾರ್ಟ್‌ಅಪ್ ಉದ್ಯಮಿಗಳೊಂದಿಗಿನ ಸಂವಾದ ಕಾರ್ಯಕ್ರಮವನ್ನು ಟೆಕ್ ಪಾರ್ಕ್‌ನಲ್ಲೇ ಏಕೆ ಆಯೋಜಿಸಬೇಕಿತ್ತು? ಇಂತಹ ಕಾರ್ಯಕ್ರಮ ಆಯೋಜನೆ ಮಾಡಲು ಬೇರೆಲ್ಲೂ ಸೂಕ್ತ ಜಾಗ ಇರಲಿಲ್ಲವೇ? ನನಗೆ ಮುಜುಗರ ಉಂಟುಮಾಡಲು ಭಿತ್ತಿಪತ್ರಗಳೊಂದಿಗೆ ಸೂಕ್ತ ಸಿದ್ಧತೆಯೊಂದಿಗೆ ಬಿಜೆಪಿ ಬೆಂಬಲಿಗರು ಬಂದಿದ್ದಾರೆ. ಹೀಗಿದ್ದರೂ ಪೊಲೀಸರಿಗಾಗಲಿ, ನಿಮಗಾಗಲಿ ಏಕೆ ಮಾಹಿತಿ ಲಭ್ಯವಾಗಲಿಲ್ಲ? ಇದನ್ನು ತಡೆಯಲು ಏಕೆ ಪ್ರಯತ್ನಿಸಿಲ್ಲ ಎಂದು ಪ್ರಶ್ನಿಸಿದರು ಎನ್ನಲಾಗಿದೆ.

ಘೋಷಣೆ ಕೂಗಲು ಬಂದಿದ್ದ ಗುಂಪು ಸಂಪೂರ್ಣ ತಯಾರಿಯೊಂದಿಗೆ ಬಂದಿದೆ. ರಾಜ್ಯದಲ್ಲಿ ಪಕ್ಷದ ನೇತೃತ್ವದ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. ಹಾಗಿದ್ದರೂ, ಇಂತಹದೊಂದು ಘಟನೆ ನಡೆಯುವ ವಿಚಾರ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗಕ್ಕೆ ಇರಲಿಲ್ಲವೇ ಎಂದು ಪ್ರಶ್ನಿಸಿದರು ಎನ್ನಲಾಗಿದೆ. 

ರಾಜ್ಯದಲ್ಲಿ ಎಂದೂ ಇಂತಹ ಘಟನೆ ನಡೆದಿರಲಿಲ್ಲ. ಅತ್ಯಂತ ಕೆಟ್ಟದಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬೇರೆ ಸ್ಥಳದಲ್ಲಿ ಈ ಕಾರ್ಯಕ್ರಮ ಆಯೋಜಿಸಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.

ಘಟನೆಯ ಬಳಿಕವೂ ಮೋದಿ ಪರವಾಗಿ ಘೋಷಣೆ ಕೂಗಿ ಗೊಂದಲ ವಾತಾವರಣ ಸೃಷ್ಟಿಸಿದ ಟೆಕ್ಕಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿಲ್ಲ. ಬದಲಿಗೆ ತಡೆಯಲು ಯತ್ನಿಸಿದ ಎನ್‌ಎಸ್‌ಯುಐ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಎನ್‌ಎಸ್ ಯುಐ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸುವವರೆಗೂ ಪೊಲೀಸರು ಮೋದಿ ಬೆಂಬಲಿಗರನ್ನು ತಡೆಯುವ ಯತ್ನ ಮಾಡಿಲ್ಲ. ಬಳಿಕವೂ ಅವರಿಗೇ ಬೆಂಬಲ ನೀಡಿದ್ದಾರೆ. ಇಷ್ಟೊಂದು ಅವ್ಯವಸ್ಥೆಗಳನ್ನು ನಾನು ಯಾವುದೇ ಕಾರ್ಯಕ್ರಮದಲ್ಲಿ ನೋಡಿಲ್ಲ. ನನಗೆ ತೀವ್ರ ಮುಜುಗರ ಉಂಟು ಮಾಡಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ನಡೆದಿದ್ದು ಏನು?:

ರಾಹುಲ್ ಗಾಂಧಿ ಅವರ ಸಂವಾದ ಕಾರ್ಯಕ್ರಮ ಆರಂಭವಾಗುವ ವೇಳೆ ಗುಂಪೊಂದು ನೆರೆದು, ‘ಮೋದಿ, ಮೋದಿ’ ಎಂಬ ಘೋಷಣೆ ಕೂಗಿತ್ತು. ಅಲ್ಲದೆ, ‘ಮತ್ತೊಮ್ಮೆ ಮೋದಿ’ ಎಂಬ ಫಲಕಗಳನ್ನು ಪ್ರದರ್ಶನ ಮಾಡಿ, ಹರ ಹರ ಮೋದಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಲಾಯಿತು

ಇದು ಸ್ಥಳದಲ್ಲಿದ್ದ ಎನ್‌ಎಸ್‌ಯುಐ ಕಾರ್ಯಕರ್ತರನ್ನು ಸಿಟ್ಟಿಗೆಬ್ಬಿಸಿದ್ದು, ಅವರು ಘೋಷಣೆ ಕೂಗುತ್ತಿದ್ದ ಗುಂಪಿನ ವರ್ತನೆಯನ್ನು ಆಕ್ಷೇಪಿಸಿದರು. ಆಗ ಗುಂಪು ಹಾಗೂ ಎನ್‌ಎಸ್ ಯುಐ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಒಂದು ಹಂತದಲ್ಲಿ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಾಠಿ ಪ್ರಹಾರ ಕೂಡ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಇಷ್ಟಾಗಿಯೂ ರಾಹುಲ್ ಗಾಂಧಿ ಕಾರ್ಯಕ್ರಮ ಮುಗಿಸಿ ಹೊರ ಹೋಗುವಾಗಲೂ ಗುಂಪಿನಿಂದ ಮೋದಿ ಪರ ಘೋಷಣೆ ಕೇಳಿ ಬಂದಿದೆ. ಇದು ರಾಹುಲ್ ಗಾಂಧಿ ಅವರಿಗೆ ತೀವ್ರ ಬೇಸರ ಉಂಟು ಮಾಡಿದೆ.