ಬಾಲಿವುಡ್ ಚಿತ್ರನಟಿ ಸನ್ನಿ ಲಿಯೋನ್‌ರ ‘ಸನ್ನಿ ನೈಟ್ ಇನ್ ಬೆಂಗಳೂರು’ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದ ನಗರ ಪೊಲೀಸರು ಹೊರಾಂಗಣದಲ್ಲಿ ನಡೆಯುವ ಹಲವು ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಿದ್ದಾರೆ.

ಬೆಂಗಳೂರು (ಡಿ.27): ಬಾಲಿವುಡ್ ಚಿತ್ರನಟಿ ಸನ್ನಿ ಲಿಯೋನ್‌ರ ‘ಸನ್ನಿ ನೈಟ್ ಇನ್ ಬೆಂಗಳೂರು’ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದ ನಗರ ಪೊಲೀಸರು ಹೊರಾಂಗಣದಲ್ಲಿ ನಡೆಯುವ ಹಲವು ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಿದ್ದಾರೆ.

ಹೊಸ ವರ್ಷಾಚರಣೆ ಸಂಭ್ರಮಕ್ಕಾಗಿ ಹೊರಾಂಗಣ ಕಾರ್ಯ ಕ್ರಮದಲ್ಲಿ ನಡೆಯುವ ಆರ್ಕೆಸ್ಟ್ರಾ, ಸಂಗೀತಾ ಕಾರ್ಯಕ್ರಮಗಳಿಗೆ ಅನು ಮತಿ ಕೇಳಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರಿಗೆ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಹಲವು ಕಾರ್ಯಕ್ರಮಗಳು ಹೊರಾಂಗಣದಲ್ಲಿ ಆಯೋಜನೆಗೊಂಡಿದ್ದು, ಆಯೋಜಕರು ಅನುಮತಿ ಕೇಳಿದ್ದರು. ಆದರೆ ಭದ್ರತೆಯ ಕಾರಣದಿಂದಾಗಿ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅನುಮತಿ ನೀಡಲು ನಿರಾಕರಿಸಿದ್ದಾರೆ ಎಂದು ಪೊಲೀಸ್ ಇಲಾಖೆಯ ವಿಶ್ವಾಸನೀಯ ಮೂಲಗಳು ತಿಳಿಸಿವೆ. ಹೊಸ ವರ್ಷಾಚರಣೆ ಸಂಭ್ರಮದ ವೇಳೆ ನಗರದ ಯಾವೊಬ್ಬ ಪೊಲೀಸರಿಗೆ ರಜೆ ನೀಡಿರುವುದಿಲ್ಲ. ಎಲ್ಲರೂ ಕರ್ತವ್ಯಕ್ಕೆ ಹಾಜರಾಗುತ್ತಾರೆ. ಇರುವ ಠಾಣಾ ಸಿಬ್ಬಂದಿಯೇ ಸಂಪೂರ್ಣವಾಗಿ ತಮ್ಮ ವ್ಯಾಪ್ತಿಯ ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗುತ್ತದೆ. ಅಲ್ಲದೆ, ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಿಗೆ ಸಿಬ್ಬಂದಿಯನ್ನು ನಿಯೋ ಜಿಸಲಾಗುತ್ತದೆ. ಹೀಗಿದ್ದಾಗ ಬೇರೆ ಕಡೆ ಹೊರಾಂಗಣದಲ್ಲಿ ನಡೆಯುವ ಕಾರ್ಯ ಕ್ರಮಗಳಿಗೆ ಭದ್ರತೆ ಕಲ್ಪಿಸಲು ಸಾಧ್ಯವಿಲ್ಲ. ಹೀಗಾಗಿ ಕಾರ್ಯಕ್ರಮ ಆಯೋಜನೆಗೆ ಅನುಮತಿ ನೀಡಲಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು. ಮಾನ್ಯತಾಟೆಕ್ ಪಾರ್ಕ್‌ನಲ್ಲಿ ಟೈಮ್ಸ್ ಕ್ರಿಯೇಷನ್‌ನವರು ‘ಸನ್ನಿ ನೈಟ್ ಇನ್ ಬೆಂಗಳೂರು’ ಕಾರ್ಯಕ್ರಮಕ್ಕೆ ಇತ್ತೀಚೆಗಷ್ಟೇ ಈಶಾನ್ಯ ವಿಭಾಗದ ಡಿಸಿಪಿ ಅನುಮತಿ ನಿರಾಕರಿಸಿದ್ದರು.