ಬ್ಯೂಟಿ ಪಾರ್ಲರ್ ಮೇಲೆ ದಾಳಿ ಮಾಡುವ ನೆಪದಲ್ಲಿ ಪೊಲೀಸರೇ  ಖಾಕಿ ಸಮವಸ್ತ್ರದಲ್ಲಿ ದರೋಡೆಗಿಳಿದಿದ್ದಾರೆ. 

ಬೆಂಗಳೂರು (ಮಾ. 28): ಬ್ಯೂಟಿ ಪಾರ್ಲರ್ ಮೇಲೆ ದಾಳಿ ಮಾಡುವ ನೆಪದಲ್ಲಿ ಪೊಲೀಸರೇ ಖಾಕಿ ಸಮವಸ್ತ್ರದಲ್ಲಿ ದರೋಡೆಗಿಳಿದಿದ್ದಾರೆ. 

ಹೆಣ್ಣೂರು ಪೊಲೀಸ್ ಠಾಣೆಯ ಪೇದೆಗಳಾದ ವಿಠಲ್ ಮತ್ತು ಫಾರುಖ್ ಎಂಬುವವರು ದಾಳಿ ನೆಪದಲ್ಲಿ ಬ್ಯೂಟಿ ಪಾರ್ಲರ್’ಗೆ ನುಗ್ಗಿ 20 ಸಾವಿರಕ್ಕೆ ಡಿಮ್ಯಾಂಡ್ ಇಟ್ಟಿದ್ದರು. ಹಣ ಕೊಡಲು ನಿರಾಕರಿಸಿದ್ದಕ್ಕೆ ಪಾರ್ಲರ್ ನಡೆಸುತ್ತಿದ್ದ ಮಹಿಳೆಯ ಮೇಲೆ ಹಲ್ಲೆ ಮಾಡಿ 28 ಸಾವಿರ ನಗದು ಸೇರಿದಂತೆ ಮೊಬೈಲ್’ಗಳನ್ನ ಪೊಲೀಸ್ ಪೇದೆಗಳು ಕದ್ದೊಯ್ದಿದ್ದಾರೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಕಾನ್ಸ್‌ಟೇಬಲ್’ಗಳಾಗಿ ಕೆಲಸ ಮಾಡುತ್ತಿರುವ ವಿಠಲ್ ಮತ್ತು ಫಾರುಖ್ ಕೊನೆಗೆ ಸಾಕ್ಷಿ ನಾಶ ಮಾಡಲು ಮಧು ಎಂಬ ಪೊಲೀಸ್ ಪೇದೆಗೆ ಹೇಳಿದ್ದರು. 

ಇಬ್ಬರು ಪೊಲೀಸ್ ಪೇದೆಗಳ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಬ್ಯೂಟಿ ಪಾರ್ಲರ್ ಸಿಬ್ಬಂದಿಗಳು ದೂರು ದಾಖಲು ಮಾಡಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಸಿಪಿ ಮಹಾದೇವಪ್ಪ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದಾರೆ.