ಶಿವಮೊಗ್ಗ:  ಕ್ಷುಲ್ಲಕ ಕಾರಣಕ್ಕೆ ಪೊಲೀಸ್ ಪೇದೆಯೊಬ್ಬರ ಮೇಲೆ ಗಾಂಜಾ ಮತ್ತಿನಲ್ಲಿದ್ದ ಯುವಕರಿಬ್ಬರು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಕುಂಸಿ ಠಾಣೆ ಪೊಲೀಸ್ ಪೇದೆ ಮಂಜುನಾಥ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಮಂಗಳವಾರ ರಾತ್ರಿ ಶಿವಮೊಗ್ಗ ಬಸ್ ನಿಲ್ದಾಣದಲ್ಲಿದ್ದಾಗ ಈ ಘಟನೆ ನಡೆದಿದೆ. 

ಇಬ್ಬರು ಯುವಕರು ಮಂಜುನಾಥ್ ಬಳಿ ಬಂದು ಹಣ ಕೇಳಿದ್ದಾರೆ. ಹಣ ನೀಡುವುದಿಲ್ಲ ಎಂದಿದ್ದಕ್ಕೆ ಕೋಪಗೊಂಡ ಯುವಕರು ಕುತ್ತಿಗೆ, ಕೈ- ಕಾಲಿಗೆ ಬ್ಲೇಡಿನಲ್ಲಿ ಕೊಯ್ದಿದ್ದಾರೆ. 

ಜನ ಸೇರುತ್ತಿದ್ದಂತೆ ಇಬ್ಬರೂ ಯುವಕರು ಸ್ಥಳದಿಂದ ಪರಾರಿ ಆಗಿದ್ದಾರೆ. ತಕ್ಷಣ ಗಾಯಗೊಂಡ ಮಂಜುನಾಥ್ ಅವರನ್ನು ಮೆಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಮಂಜುನಾಥ್ ಕುಂಸಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಪ್ರತ್ಯಕ್ಷದರ್ಶಿಗಳು ಯುವಕರನ್ನು ಗುರುತಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಈ ಘಟನೆ ಸಂಬಂಧ ದೊಡ್ಡಪೇಟೆ ಠಾಣೆ ಪೊಲೀಸರು ಆಟೋ ಚಾಲಕರಾದ ನದೀಂ ಹಾಗೂ ನಜೀರ್ ಎಂಬ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.