ಕೊಡಗಿನ ದಿಡ್ಡಳ್ಳಿಯಲ್ಲಿ ನಿರಾಶ್ರಿತರ ಗುಡಿಸಲಿನತ್ತ ಗುಂಡು ಹಾರಿಸಿ ಆತಂಕ ಸೃಷ್ಟಿಸಿದ್ದ ವ್ಯಕ್ತಿಯನ್ನು ಸಿದ್ದಾಪುರ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.

ಮಡಿಕೇರಿ (ಏ.12): ಕೊಡಗಿನ ದಿಡ್ಡಳ್ಳಿಯಲ್ಲಿ ನಿರಾಶ್ರಿತರ ಗುಡಿಸಲಿನತ್ತ ಗುಂಡು ಹಾರಿಸಿ ಆತಂಕ ಸೃಷ್ಟಿಸಿದ್ದ ವ್ಯಕ್ತಿಯನ್ನು ಸಿದ್ದಾಪುರ ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.

ಗೂಡ್ಲೂರಿನ ಪೂಣಚ್ಚ (50) ಬಂಧಿತ ಆರೋಪಿ. ಈತ ವೈಯಕ್ತಿಕ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಸೋಮವಾರ ರಾತ್ರಿ ದಿಡ್ಡಳ್ಳಿಯ ಆಶ್ರಮ ಶಾಲೆ ಆವರಣದಲ್ಲಿರುವ ನಿರಾಶ್ರಿತರ ಗುಡಿಸಲಿನತ್ತ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ್ದರು. ಈ ವೇಳೆ ಎಚ್ಚರಗೊಂಡ ಅಲ್ಲಿನ ನಿವಾಸಿ ಬಸವ ಎಂಬವರು ಟಾರ್ಚ್‌ಲೈಟ್ ಬಿಟ್ಟು ಯಾರೆಂದು ನೋಡಲು ಯತ್ನಿಸಿದಾಗ ಅವರ ಮೇಲೂ ಗುಂಡು ಹಾರಿಸಿದ್ದರು. ಈ ವೇಳೆ ಕೂದಲೆಳೆ ಅಂತರದಿಂದ ಗುಂಡೇಟಿನಿಂದ ತಪ್ಪಿಸಿಕೊಂಡ ಬಸವ ತಕ್ಷಣ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದರು. ಬಂಧಿತ ಆರೋಪಿ ಪೂಣಚ್ಚ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. 

ಅಪ್ಪಣ್ಣ, ಮಣಿ, ದೇಚು ಎಂಬ ಮೂವರು ಆದಿವಾಸಿ ಕಾರ್ಮಿಕರಿಗೆ ಕೂಲಿ ಕೆಲಸಕ್ಕಾಗಿ ಮುಂಗಡ ಹಣ ನೀಡಿದ್ದ ಪೂಣಚ್ಚ ಅವರು ಕೆಲಸಕ್ಕೆ ಬಾರದಿದ್ದಾಗ ಜಗಳವಾಡಿದ್ದ. ಹೀಗಾಗಿ, ಪೂಣಚ್ಚ ವಿರುದ್ಧ ಆದಿವಾಸಿಗಳು ತಿರುಗಿಬಿದ್ದಿದ್ದರು. ಆ ಮೂವರ ಮೇಲಿನ ಸಿಟ್ಟಿನಿಂದ ಸೋಮವಾರ ರಾತ್ರಿ ಮದ್ಯ ಸೇವಿಸಿ ಬಂದ ಆರೋಪಿ ಗುಂಡುಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.