ಕೇರಳ ಈ ವರ್ಷವೂ ನೆರೆಯಿಂದ ತತ್ತರಿಸಿ ಹೋಗಿದೆ. ಭದ್ರತಾ ಪಡೆಗಳು, NDRF, ನಾಗರಿಕ ಸಂಘ-ಸಂಸ್ಥೆಗಳು, ಸ್ವಯಂಸೇವಕರು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ರಕ್ಷಣೆ ಮತ್ತು ಪುನರ್ವಸತಿಗಾಗಿ ಹರಸಾಹಸ ಪಡುತ್ತಿದ್ದಾರೆ.  

ಇನ್ನೊಂದು ಕಡೆ ಕೇರಳ ಪೊಲೀಸರು, ನೆರೆಪೀಡಿತ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ದಲಿತ ಹೋರಾಟಗಾರರೊಬ್ಬರನ್ನು  ಕ್ಷುಲ್ಲಕ ಕಾರಣಕ್ಕಾಗಿ ಬಂಧಿಸಿ ಸುದ್ದಿಯಾಗಿದ್ದಾರೆ. ಪರಿಹಾರ ಕೇಂದ್ರದಲ್ಲಿರುವ ಮಹಿಳೆಯರಿಗೆ ಒಳ ಒಡುಪಿನ ಅಗತ್ಯವಿದೆ ಎಂದಿದ್ದೆ ಕೇರಳ ಪೊಲೀಸರಿಗೆ ದೊಡ್ಡ ಅಪರಾಧವಾಗಿ ಕಂಡಿದೆ. 

ಏನಿದು ಒಳ-ಉಡುಪು ವಿವಾದ?

ಕಳೆದ ಭಾನುವಾರ ದಲಿತ ಹೋರಾಟಗಾರ ರಘು ಎಂಬವರು ತನ್ನ ಪತ್ನಿ ಹಾಗೂ ಗೆಳತಿಯೊಂದಿಗೆ, ಪ್ರವಾಹ ಪೀಡಿತ ಪತ್ತನಂತಿಟ್ಟ ಜಿಲ್ಲೆಯ ತಿರುಮೂಲಪುರಂ ಎಂಬಲ್ಲಿನ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಆಶ್ರಯ ಪಡೆದಿದ್ದ ಮಹಿಳೆಯರು ತಮ್ಮ ಗೋಳನ್ನು ಹಂಚಿಕೊಂಡಿದ್ದಾರೆ. ಅತ್ಯವಶ್ಯಕ ವಸ್ತುಗಳ ನೆರವನ್ನು ಕೇಳಿದ್ದಾರೆ. ಮಹಿಳೆಯರು ಮನೆಯಿಂದ ಉಟ್ಟ ಬಟ್ಟೆಯಲ್ಲೇ ಬರಿಗೈ ಬಂದಿದ್ದು, ಉಡಲು ಒಳ ಉಡುಪುಗಳ ಕೊರತೆಯಿದೆ ಎಂದು ತಿಳಿಸಿದ್ದಾರೆ. 

ಕೈಲಾದಷ್ಟು ಸಹಾಯ ಮಾಡಿ ಹಿಂತಿರುಗಿದ ರಘು, ಫೇಸ್ಬುಕ್ ಪೋಸ್ಟ್‌ನಲ್ಲಿ ಮಹಿಳೆಯರ ವ್ಯಥೆ ಮತ್ತು ಅವಶ್ಯಕತೆಗಳನ್ನು ವಿವರಿಸಿದ್ದಾರೆ. ಮಹಿಳೆಯರಿಗೆ ಒಳ ಒಡುಪು ಕೊರತೆಯಿರುವುದಾಗಿ, ಅದನ್ನು ಒದಗಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕರ್ನಾಟಕ ಪ್ರವಾಹದ ಕ್ಷಣ-ಕ್ಷಣದ ಅಪ್ಡೇಟ್ಸ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಂದೇ ಬಿಟ್ರು ಪೊಲೀಸರು, ಬಂಧಿಸಿಯೇ ಬಿಟ್ರು!

ಪೋಸ್ಟ್ ಹಾಕಿದ್ದೇ ತಡ, ಪರಿಹಾರ ಕೇಂದ್ರವಿರುವ ವಾರ್ಡ್‌ನ ಸದಸ್ಯೆಯೊಬ್ಬರು ಪೊಲೀಸರಿಗೆ ದೂರು ಕೊಟ್ಟುಬಿಟ್ಟಿದ್ದಾರೆ. ರಘು ಒಳ ಒಡುಪುಗಳ ಬಗ್ಗೆ ಪೋಸ್ಟ್ ಹಾಕಿರುವುದು ಮಹಿಳೆಯರಿಗೆ ಮಾಡಿದ ಅವಮಾನ ಎಂದು ಆಕೆ ತಗಾದೆ ತೆಗೆದಿದ್ದಾರೆ. 

ಕೇರಳ ಪೊಲೀಸ್ ಆ್ಯಕ್ಟ್‌ನ ಸೆಕ್ಷನ್ 119(1) (a) ಯನ್ವಯ ಮಹಿಳೆಯರ ವಿರುದ್ಧ ದೌರ್ಜನ್ಯ ನಡೆಸಿರುವ ದೂರು ದಾಖಲಿಸಿರುವ ಪೊಲೀಸರು ರಘುರನ್ನು ಬಂಧಿಸಿದ್ದಾರೆ. ಪೋಸ್ಟನ್ನು ಡಿಲೀಟ್ ಮಾಡಿಸಿದ್ದಾರೆ.

ಬಂಧಿಸುವಂತಹ ದೊಡ್ಡ ಅಪರಾಧ ನಾನೇನು ಮಾಡಿದ್ದೇನೆ? ಎಂದು ಜಾಮೀನಿನ ಮೇಲೆ ಹೊರಬಂದಿರುವ ರಘು ಈಗ ಕೇಳುತ್ತಿರುವ ಪ್ರಶ್ನೆ. ಒಳ ಒಡುಪು - ಪ್ರಸ್ತಾಪಿಸಬಾರದಂತಹ ಕೆಟ್ಟ ವಸ್ತುವೆ? ಈಗಲೂ ಕೆಲ ಮಹಿಳೆಯರು ಮತ್ತು ಪೊಲೀಸರು ಆ ರೀತಿ ಭಾವಿಸುತ್ತಿರುವುದು ದುರ್ದೈವ ಎಂದು ರಘು ಅಂಬೋಣ.

 

ಕೇರಳ ಪೊಲೀಸರ ಈ ನಡೆಗೆ ರಾಜ್ಯಾದ್ಯಂತ ಬಹಳ ಆಕ್ರೋಶ ವ್ಯಕ್ತವಾಗಿದೆ. ಸೋಶಿಯಲ್ ಮೀಡಿಯಾ ರಘು ಬೆನ್ನಿಗೆ ನಿಂತಿದೆ.

2018ರಲ್ಲಿ ಭಾರೀ ಪ್ರವಾಹದಿಂದ ತತ್ತರಿಸಿ ಹೋಗಿದ್ದ ಕೇರಳದಲ್ಲಿ ಈ ಬಾರಿಯೂ ವರುಣ ಆರ್ಭಟಿಸಿದ್ದಾನೆ. ಈವರೆಗೆ ಸುಮಾರು ನೂರು ಮಂದಿ ಮೃತಪಟ್ಟಿದ್ದು, 10 ಸಾವಿರಕ್ಕಿಂತ ಹೆಚ್ಚು ಕುಟುಂಬಗಳು ಮನೆ ಮಠ ಕಳೆದುಕೊಂಡಿದ್ದಾರೆ.