ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣ ಯತ್ನ ಪ್ರಕರಣ ಸಂಬಂಧ ಪೊಲೀಸರು ನೋಟಿಸ್ ನೀಡಿದ್ದರೂ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ಅವರು ವಿಚಾರಣೆಗೆ ಗೈರು ಹಾಜರಾಗಿದ್ದಾರೆ.

ಬೆಂಗಳೂರು(ಜು.18): ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣ ಯತ್ನ ಪ್ರಕರಣ ಸಂಬಂಧ ಪೊಲೀಸರು ನೋಟಿಸ್ ನೀಡಿದ್ದರೂ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ ಅವರು ವಿಚಾರಣೆಗೆ ಗೈರು ಹಾಜರಾಗಿದ್ದಾರೆ.

ಅಪಹರಣ ಯತ್ನ ಪ್ರಕರಣ ಸಂಬಂಧ ಸೋಮವಾರ ಬೆಳಗ್ಗೆ 10.30ಕ್ಕೆ ತನಿಖಾಧಿಕಾರಿ ಎ.ಆರ್. ಬಡಿಗೇರ್ ಅವರ ಮುಂದೆ ಹಾಜರಾಗಲು ಕೋರಲಾಗಿತ್ತು. ಆದರೆ, ಸಂತೋಷ್ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ, ಅವರಿಗಾಗಿ ಶೋಧ ಕಾರ್ಯ ಮುಂದುವರಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಈ ನಡುವೆ ಸಂತೋಷ್ ಅವರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ. ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯಲ್ಲಿರುವ ಸಂತೋಷ ಅವರ ಮನೆಗೆ ತೆರಳಿ ಭಾನುವಾರ ನೋಟಿಸ್ ನೀಡಿದ್ದರು. ಈ ವೇಳೆ ಮನೆಯಲ್ಲಿ ಸಂತೋಷ್ ಇರಲಿಲ್ಲ. ಹೀಗಾಗಿ ಪೊಲೀಸರು ಸಂತೋಷ್ ತಂದೆ ವೀರಭದ್ರಯ್ಯ ಅವರಿಗೆ ನೋಟಿಸ್ ನೀಡಲು ಮುಂದಾಗಿದ್ದರು. ಆದರೆ, ತಂದೆ ನೋಟಿಸ್ ಸ್ವೀಕರಿಸದ ಕಾರಣ ಮನೆಯ ಬಾಗಿಲಿಗೆ ನೋಟಿಸ್ ಅಂಟಿಸಿದ ಪೊಲೀಸರು ನಗರಕ್ಕೆ ವಾಪಸ್ ಆಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಕ್ರಿಮಿನಲ್ ಕೇಸ್:

ಅಪಹರಣ ಯತ್ನ ಒಂದು ಕ್ರಿಮಿನಲ್ ಕೇಸ್. ಹೀಗಾಗಿ, ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ನಡೆದಿತ್ತು. ಅಪಹರಣಕ್ಕೆ ಯತ್ನಿಸಿದ ಪ್ರಶಾಂತ್ ಸೇರಿದಂತೆ ಇತರ ಆರೋಪಿಗಳ ಬಂಧಿಸಲಾಗಿದೆ. ಶಂಕಿತರ ವಿಚಾರಣೆ ನಡೆಸಲಾಗಿದೆ. ಅವರು ನೀಡಿದ ಮಾಹಿತಿ ಆಧರಿಸಿ ವಿನಯ್ ಅಪಹರಣಕ್ಕೆ ಸೂತ್ರಧಾರಿ ಎಂದು ಹೇಳಲಾಗುತ್ತಿರುವ ಸಂತೋಷ್‌ಗೆ ಶೋಧ ನಡೆಸಲಾಗುತ್ತಿದೆ ಎಸಿಪಿ ಎ.ಆರ್. ಬಡಿಗೇರ್ ತಿಳಿಸಿದರು.

ಕಳೆದ ಮೇ 11ರಂದು ಕಾರಿನಲ್ಲಿ ಬಂದ ಎಂಟು ಆರೋಪಿಗಳು ಇಸ್ಕಾನ್ ದೇವಸ್ಥಾನದ ಬಳಿ ತನ್ನ ಕಾರು ನಿಲ್ಲಿಸಿ ಅಪಹರಣಕ್ಕೆ ಯತ್ನಿಸಿದರು. ತಾನು ವಿರೋಧ ವ್ಯಕ್ತಪಡಿಸಿ ಚೀರಾಡಿದಾಗ ಆರೋಪಿಗಳು ಸ್ಥಳದಿಂದ ಪರಾರಿಯಾದರು ಎಂದು ವಿನಯ್, ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಅರಸ್ ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ರಾಜೇಂದ್ರ ಪ್ರಕರಣದಲ್ಲಿ ಯಡಿಯೂರಪ್ಪ ಅವರ ಆಪ್ತ ಸಂತೋಷ್ ಪಾತ್ರವಿರುವ ಬಗ್ಗೆ ಬಾಯ್ಬಿಟ್ಟಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.