ಕುಡಿವ ನೀರಿನ ಪೈಪ್‌ಗೆ ವಿಷ, 1100 ಜನ ಪಾರು!
ಕುಡಿವ ನೀರಿನ ಪೈಪ್‌ಗೆ ವಿಷ, 1100 ಜನ ಪಾರು!| ಚಿಕ್ಕಬಳ್ಳಾಪುರದಲ್ಲಿ ಯಾದಗಿರಿ ಮಾದರಿ ಪ್ರಕರಣ| ವಿಷದ ವಾಸನೆ ಬಂದಿದ್ದರಿಂದ ನೀರು ಕುಡಿಯದೇ ಜೀವ ಉಳಿಸಿಕೊಂಡ ಗ್ರಾಮಸ್ಥರು| ತಪ್ಪಿದ ಭಾರೀ ಅನಾಹುತ| ಚಿಕ್ಕಬಳ್ಳಾಪುರ ತಾಲೂಕಿನ ತಾಲಹಳ್ಳಿಯ 300 ಮನೆಗಳಿಗೆ ಗ್ರಾ.ಪಂ.ನಿಂದ ನೀರು ಪೂರೈಕೆಯಾಗುತ್ತದೆ| ಭಾನುವಾರ ವಾಟರ್‌ಮ್ಯಾನ್ ನೀರು ಬಿಟ್ಟಬಳಿಕ ರಸ್ತೆ ಪಕ್ಕದ ನಲ್ಲಿಯಲ್ಲಿ ಮಹಿಳೆಯರು ನೀರು ಹಿಡಿಯಲು ಆರಂಭಿಸಿದ್ದಾರೆ| ಈ ವೇಳೆ ಕುಡಿಯುವ ನೀರಿನಲ್ಲಿ ವಿಚಿತ್ರ ವಾಸನೆ ಬಂದಿದೆ. ದ್ರಾಕ್ಷಿ ತೋಟಕ್ಕೆ ಹಾಕುವ ಕೀಟನಾಶಕದಂತಿರುವುದು ಪತ್ತೆಯಾಗಿದೆ| ವಾಟರ್‌ಮ್ಯಾನ್‌ಗೆ ಕೂಡಲೇ ವಿಷಯ ತಿಳಿಸಿ ನೀರು ನಿಲ್ಲಿಸಿದ್ದಾರೆ. ಟ್ಯಾಂಕ್ ಬದಲು ಗೇಟ್ ವಾಲ್‌್ವಗೆ ವಿಷ ಬೆರೆಸಿರುವುದು ಪತ್ತೆಯಾಗಿದೆ
ಚಿಕ್ಕಬಳ್ಳಾಪುರ[ಮಾ.25]: ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನಲ್ಲಿ ಕುಡಿಯುವ ನೀರು ಪೂರೈಕೆ ಪೈಪ್‌ಗೆ ಕ್ರಿಮಿನಾಶಕ ಬೆರೆಸಿ ಒಬ್ಬ ವೃದ್ಧೆ ಮೃತಪಟ್ಟು, 20 ಜನ ಅಸ್ವಸ್ಥರಾದ ಘಟನೆ ಜನವರಿಯಲ್ಲಿ ನಡೆದಿತ್ತು. ಆ ಘಟನೆ ಮರೆಯುವ ಮುನ್ನವೇ ಚಿಕ್ಕಬಳ್ಳಾಪುರ ತಾಲೂಕಿನ ತಾಲಹಳ್ಳಿಯಲ್ಲಿಯೂ ಭಾನುವಾರ ಅಂತಹದ್ದೇ ಘಟನೆ ಮರುಕಳಿಸಿದೆ. ಆದರೆ, ಅದೃಷ್ಟವಶಾತ್ ನೀರು ವಾಸನೆ ಬರುತ್ತಿದ್ದರಿಂದ ಆ ನೀರನ್ನು ಯಾರೂ ಕುಡಿದಿಲ್ಲ. ಹೀಗಾಗಿ 1100 ಜನರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.
ಸುಮಾರು 300 ಮನೆ, 1100 ಜನಸಂಖ್ಯೆ ಇರುವ ತಾಳಹಳ್ಳಿ ಗ್ರಾಮಕ್ಕೆ ಭಾನುವಾರ ಎಂದಿನಂತೆ ವಾಟರ್‌ಮ್ಯಾನ್ ನೀರು ಬಿಟ್ಟಿದ್ದಾರೆ. ರಸ್ತೆಯ ಅಕ್ಕ ಪಕ್ಕ ಇರುವ ನಲ್ಲಿಯಲ್ಲಿ ಮಹಿಳೆಯರು ನೀರು ಹಿಡಿಯುವ ಸಂದರ್ಭದಲ್ಲಿ ನೀರು ವಿಚಿತ್ರ ವಾಸನೆ ಬರುತ್ತಿರುವುದನ್ನು ಗಮನಿಸಿದ್ದಾರೆ. ದ್ರಾಕ್ಷಿ ತೋಟಗಳಿಗೆ ಹಾಕುವ ಕೀಟನಾಶಕದ ವಾಸನೆ ಬಂದಿರುವುದರಿಂದ ಗ್ರಾಮಸ್ಥರು ಕೂಡಲೇ ವಾಟರ್‌ಮ್ಯಾನ್‌ಗೆ ವಿಷಯ ತಿಳಿಸಿ ನೀರು ನಿಲ್ಲಿಸಿದ್ದಾರೆ.
ನಂತರ ಗ್ರಾಮದಲ್ಲಿರುವ ಓವರ್ ಹೆಡ್ ಟ್ಯಾಂಕಿನಲ್ಲಿ ಶೇಖರಣೆಯಾಗಿದ್ದ ನೀರು ಪರಿಶೀಲನೆ ಮಾಡಿದ್ದಾರೆ. ಆದರೆ, ಟ್ಯಾಂಕ್‌ನಲ್ಲಿರುವ ನೀರಿಗೆ ವಿಷ ಬೆರೆತಿಲ್ಲ. ಆದರೆ, ಊರಿನ ಸಮೀಪ ಇರುವ ಗೇಟ್‌ವಾಲ್ ತೆಗೆದು ಪೈಪ್ ಒಳಗಡೆ ವಿಷ ಹಾಕಿರುವುದು ಬೆಳಕಿಗೆ ಬಂದಿದೆ.
ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಗ್ರಾಮಕ್ಕೆ ಭೇಟಿ ನೀಡಿ ವಿಷಪೂರಿತ ವಾಸನೆ ಬರುತ್ತಿರುವ ನೀರನ್ನು ಬಾಟಲ್‌ನಲ್ಲಿ ಸಂಗ್ರಹಿಸಿ ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲು ತೆಗೆದುಕೊಂಡು ಹೋಗಿದ್ದಾರೆ. ಕೆಲವರ ಮನೆಗಳ ಸಂಪ್‌ಗಳಲ್ಲಿ ತುಂಬಿದ್ದ ನೀರು ಕೂಡ ವಾಸನೆ ಬಂದಿರುವುದರಿಂದ ಸಂಪಿನಲ್ಲಿದ್ದ ನೀರನ್ನು ಹೊರ ಹಾಕಿ ಸ್ವಚ್ಛ ಮಾಡಲಾಗಿದೆ.
ಒತ್ತುವರಿ ದಾರರಿಂದ ಕೃತ್ಯ?:
ಗ್ರಾಮದಲ್ಲಿ 22 ಎಕರೆ ಸರ್ಕಾರಿ ಜಾಗ ಇದ್ದು, ಇದನ್ನು ಪ್ರಭಾವಿಗಳಾದ 9 ಮಂದಿ ಒತ್ತುವರಿ ಮಾಡಿಕೊಂಡಿದ್ದಾರೆ. ಇದೇ ಜಾಗದಲ್ಲಿ ಗ್ರಾಮ ಪಂಚಾಯಿತಿಯಿಂದ ಕೊಳವೆ ಬಾವಿ ಕೊರೆದು ಸುಮಾರು 300 ಮನೆಗೆ ನೀರು ಸರಬರಾಜು ಮಾಡಲಾಗುತ್ತಿದೆ. ಸರ್ಕಾರಿ ಕೊಳವೆ ಬಾವಿಯಿಂದ ಒತ್ತುವರಿ ಜಾಗಕ್ಕೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಕುಡಿಯುವ ನೀರಿನ ಪೈಪ್‌ಗೆ ಒತ್ತುವರಿದಾರರೇ ವಿಷ ಬೆರೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಹಿಂದೆ ಕೂಡ ದುಷ್ಕರ್ಮಿಗಳು ಕಬ್ಬಿಣದ ರಾಡ್‌ಗಳನ್ನು ಕೊಳವೆ ಬಾವಿಗೆ ತುಂಬಿಸಿ ನೀರು ಬಾರದಂತೆ ಮಾಡಿದ್ದ ಘಟನೆಯೂ ನಡೆದಿತ್ತು. ಈ ಜಾಗಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.