ಬೆಂಗಳೂರು(ಸೆ. 19): ಬಹಳ ಮಹತ್ವದ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ಇಂದು ನಡೆಯುತ್ತಿದ್ದು ಕರ್ನಾಟಕ ಈ ಬಾರಿ ಪ್ರಬಲ ವಾದ ಮಂಡಿಸಲು ಸಜ್ಜಾಗಿದೆ. ಕರ್ನಾಟಕದ ಭಾಗದಲ್ಲಿರುವ ಕಾವೇರಿ ಕೊಳ್ಳದ ಬರ ಪರಿಸ್ಥಿತಿ, ತಮಿಳುನಾಡಿನಲ್ಲಿರುವ ವಾಸ್ತವ ಸ್ಥಿತಿಯನ್ನು ಮೇಲುಸ್ತುವಾರಿ ಸಮಿತಿಗೆ ಮನವರಿಕೆ ಮಾಡಲು ಕರ್ನಾಟಕ ತಯಾರಿ ಮಾಡಿಕೊಂಡಿದೆ.
ಕರ್ನಾಟಕದ ವಾದಗಳೇನು?
* ಕರ್ನಾಟಕದಲ್ಲಿ ಕಾವೇರಿ ಕೊಳ್ಳದ ವ್ಯಾಪ್ತಿಗೆ 34,273 ಚದರ ಕಿ.ಮೀ. ಪ್ರದೇಶ ಬರುತ್ತದೆ. ಈ ಪೈಕಿ ಮೂರನೇ ಎರಡರಷ್ಟು ಭಾಗವು ಬರಪೀಡಿತವಾಗಿದೆ.
* ತಮಿಳುನಾಡಿನಲ್ಲಿರುವ ಕಾವೇರಿ ಕೊಳ್ಳದ ಮೂರನೇ ಒಂದರಷ್ಟು ಪ್ರದೇಶ ಮಾತ್ರ ಬರಪೀಡಿತವಾಗಿದೆ.
* ಕರ್ನಾಟಕದ ಬರಪೀಡಿತ ಪ್ರದೇಶಗಳಲ್ಲಿ ಕಾವೇರಿ ನದಿ ನೀರಿನಿಂದಲೇ ಕೃಷಿ ಚಟುವಟಿಕೆ ನಡೆಸುವ ಅನಿವಾರ್ಯತೆ
* ಕಾವೇರಿ ಕೊಳ್ಳ ವ್ಯಾಪ್ತಿಯ ಕರ್ನಾಟಕದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ತಮಿಳುನಾಡಿನಲ್ಲಿ ಅಂತರ್ಜಲಮಟ್ಟ ಉತ್ತಮವಾಗಿದೆ
* ಕರ್ನಾಟಕದಲ್ಲಿ ಮಳೆಗಾಲ ಮುಗಿದಿದೆ. ತಮಿಳುನಾಡಿನಲ್ಲಿ ಮಳೆಗಾಲ ಆರಂಭವಾಗುತ್ತಿದೆ
* ತಮಿಳುನಾಡಿನ ಡ್ಯಾಂಗಳಲ್ಲಿರುವ ನೀರನ್ನು ಕೃಷಿ ಚಟುವಟಿಕೆಗಳಿಗೆ ಒದಗಿಸಲಾಗಿದೆ. ಹೀಗಾಗಿ ಸದ್ಯಕ್ಕೆ ತಮಿಳುನಾಡಿಗೆ ಕಾವೇರಿ ನದಿಯಿಂದ ಹೆಚ್ಚಿನ ನೀರು ಬೇಕಾಗಿಲ್ಲ
* ಮುಂದೆ ಬರಲಿರುವ ಮಳೆಯನ್ನು ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲು ಮನವಿ
ಕರ್ನಾಟಕವು ಮೇಲ್ಕಂಡ ಅಂಶಗಳನ್ನು ಮುಂದಿಟ್ಟುಕೊಂಡು ಮೇಲುಸ್ತುವಾರಿ ಸಮಿತಿಗೆ ಮನವರಿಕೆ ಮಾಡಿಕೊಡುವ ಸಾಧ್ಯತೆ ಇದೆ. ಸಮಿತಿ ಕೈಗೊಳ್ಳುವ ತೀರ್ಮಾನ ನಿರ್ಣಾಯಕ. ನಾಳೆ ಸುಪ್ರೀಂಕೋರ್ಟ್'ನಲ್ಲಿ ನಡೆಯಲಿರುವ ವಿಚಾರಣೆಯಲ್ಲಿ ಸಮಿತಿ ನಿರ್ಧಾರಗಳು ಬಹಳ ಮಹತ್ವ ಪಡೆದುಕೊಳ್ಳಲಿದೆ.
