ಸತ್ಯದ ರಾಜಕಾರಣವನ್ನು ಭೂಗತ ಮಾಡಿ ಅದರ ಮೇಲೆ ಮಿಥ್ಯದ ರಾಜಕಾರಣ ರಾರಾಜಿಸುವುದೇ ಇಂದು ಸತ್ಯೋತ್ತರ ರಾಜಕಾರಣ ಎನಿಸಿಬಿಟ್ಟಿದ್ದು, ಇದನ್ನು ಕಂಡ ನಾನು ತತ್ತರಿಸಿ ಹೋದೆ. ಇದು ಮಾನವಕುಲದ ದುರಂತ ಅನಿಸಿದೆ ಎಂದು ಸಾಹಿತಿ ದೇವನೂರ ಮಹಾದೇವ ಕಳವಳ ವ್ಯಕ್ತಪಡಿಸಿದರು.
ಮೈಸೂರು (ನ.06): ಸತ್ಯದ ರಾಜಕಾರಣವನ್ನು ಭೂಗತ ಮಾಡಿ ಅದರ ಮೇಲೆ ಮಿಥ್ಯದ ರಾಜಕಾರಣ ರಾರಾಜಿಸುವುದೇ ಇಂದು ಸತ್ಯೋತ್ತರ ರಾಜಕಾರಣ ಎನಿಸಿಬಿಟ್ಟಿದ್ದು, ಇದನ್ನು ಕಂಡ ನಾನು ತತ್ತರಿಸಿ ಹೋದೆ. ಇದು ಮಾನವಕುಲದ ದುರಂತ ಅನಿಸಿದೆ ಎಂದು ಸಾಹಿತಿ ದೇವನೂರ ಮಹಾದೇವ ಕಳವಳ ವ್ಯಕ್ತಪಡಿಸಿದರು.
ಮೈಸೂರಿನ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಭಾನುವಾರ ನಡೆದ ‘ಜನಾಂದೋಲನಗಳ ಮಹಾಮೈತ್ರಿ ಘೋಷಣಾ ಸಮಾವೇಶ’ ಉದ್ಘಾಟಿಸಿ ಅವರು ಮಾತನಾಡಿದರು.
ಹುಸಿಯ ಮೇಲೆ ನಿಂತಿರುವ ಇಂತ ಮಿಥ್ಯ ರಾಜಕಾರಣವನ್ನು ಪಾಶ್ಚಿಮಾತ್ಯ ಚಿಂತಕರು ‘ಪೋಸ್ಟ್- ಟ್ರೂತ್ ಪಾಲಿಟಿಕ್ಸ್’ ಅಂದರೆ ‘ಸತ್ಯೋತ್ತರ ರಾಜಕಾರಣ’ ಎಂದು ವಿಶ್ಲೇಷಣೆ ಮಾಡುತ್ತಿದ್ದಾರೆ. ಜಗತ್ತಿನ ಮುಕ್ಕಾಲು ಭಾಗದ ರಾಜಕಾರಣ ಈ ರೀತಿಯೇ ಜರಗುತ್ತಿದೆಯಂತೆ ಎಂದು ‘ಕನ್ನಡಪ್ರಭ’ ಸಂಪಾದಕ ಸುಗತ ಶ್ರೀನಿವಾಸರಾಜು ಅವರು ಸಂಪಾದಕೀಯದಲ್ಲಿ ಬರೆದಿದ್ದಾರೆ. ಪ್ರಜಾಪ್ರಭುತ್ವ ಮತ್ತು ಸಮಾನತೆ ಅವಳಿಗಳು ಇದ್ದಂತೆ. ಒಂದಕ್ಕ ಏಟಾದರೆ ಇನ್ನೊಂದಕ್ಕೂ ಅದು ಪರಿಣಾಮ ಬೀರುತ್ತದೆ. ಈ ನಿಜವನ್ನು ಹಿಡಿದು ನಮ್ಮ ಸುತ್ತಲಿನ ಜಗತ್ತನ್ನು ನಾವು ನೋಡಬೇಕಾಗಿದೆ ಎಂದರು.
ಇಂದು ಸಂಪತ್ತಿನ ಕೇಂದ್ರೀಕರಣ ಕೆಲವೇ ವ್ಯಕ್ತಿಗಳಲ್ಲಿ ಎಂದೂ ಇಲ್ಲದಷ್ಟು ಕೇಂದ್ರೀಕರಿಸಲ್ಪಿಟ್ಟಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಹಾಗೂ ಸಂಪತ್ತನ್ನು ದೋಚಿ ಕೇಂದ್ರೀಕರಿಸಿಕೊಂಡು ಅದರ ಮೇಲೆ ಕೂ ವ್ಯಕ್ತಿಗೂ ಇರುವ ಅಂತರ ಎಂದೂ ಇಲ್ಲದಷ್ಟು ಅಂದರೆ ಪಾತಾಳ ಆಕಾಶದಷ್ಟು ಹೆಚ್ಚಿದೆ. ಈ ಅಸಮಾನತೆಯ ಅಬ್ಬರದಲ್ಲಿ ಪ್ರಜಾಪ್ರಭುತ್ವದ ಉಳಿವು ಹೇಗೆ? ಸಮಾನತೆಯನ್ನೇ ಅವಲಂಬಿಸಿ ಜೀವ ಪಡೆಯುವ ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವವನ್ನೇ ಅವಲಂಬಿಸಿ ಜೀವ ಪಡೆಯುವ ನ್ಯಾಯ, ಸ್ವಾತಂತ್ರ್ಯ, ಸಹೋದರತೆಗಳು ಅಸಮಾನತೆಯ ಹೊಡೆತಕ್ಕೆ ತತ್ತರಿಸುತ್ತಿವೆ. ಇಂದು ಬಂಡವಾಳ ಸೃಷ್ಟಿಸಿರುವ ಸಂಬಂಧ ಎಷ್ಟು ಕ್ರೂರವಾಗಿದೆ ಎಂದರೆ, ‘ಮನುಷ್ಯರನ್ನು ಪ್ರೀತಿಸು, ವಸ್ತುಗಳನ್ನು ಬಳಸು, ಎನ್ನುವ ಬದಲು ವಸ್ತುಗಳನ್ನು ಪ್ರೀತಿಸಿ, ಮನುಷ್ಯರನ್ನು ಬಳಸಿಕೊಳ್ಳುತ್ತಿದ್ದೇವೆ’ ಎಂಬ ಮಾತು ನನೆಪಾಗುತ್ತದೆ ಎಂದು ಮಹಾದೇವ ತಿಳಿಸಿದರು.
ಜನಾಂದೋಲನಗಳಿಗೆ ತುಕ್ಕು ಹಿಡಿದಿದೆ
ಜನತೆಯ ಆಶೋತ್ತರಗಳಿಗೆ ಧ್ವನಿ ಆಗುವ, ಸಮಸ್ಯೆಗಳಿಗೆ ಸ್ಪಂದಿಸುವ ಜನಾಂದೋಲನಗಳಿಗೂ ತುಕ್ಕು ಹಿಡಿದಿದೆ. ಬಹುತೇಕ ಜನಾಂದೋಲನಗಳು ಟ್ರೇಡ್ ಯೂನಿಯನ್ ಸ್ವಭಾವ ಪಡೆದುಕೊಂಡು ಬಾವಿಕಪ್ಪೆಗಳಂತಾಗಿಬಿಟ್ಟಿವೆ. ಜತೆಗೆ ಈ ಕಾಲದ ಚಲನಗೆ ನುಡಿ ಕಂಡುಕೊಂಡಿಲ್ಲ. ಒಂಟಿ ಕಾಲಲ್ಲಿ ಕುಂಟುತ್ತಿವೆ. ಈಗಲಾದರೂ ಇಡಿಯಾಗಿ ನೋಡುವ ಕಣ್ನೋಟ ಮತ್ತು ಗ್ರಹಿಕೆಗಳನ್ನು ಜನಾಂದೋಲನಗಳು ಪಡೆದುಕೊಳ್ಳಬೇಕಾಗಿದೆ. ದಾಯಾದಿಯಂತಿರುವ ಜನಾಂದೋಲನಗಳು ಸೋದರತೆ ಪಡೆದುಕೊಂಡಾಗ ಮಾತ್ರವೇ ಖಾಸಗಿ ಮಿಥ್ಯ ರಾಜಕಾರಣಕ್ಕೆ ಮುಖಾಮುಖಿಯಾಗುವ ತ್ರಾಣ ಜನಾಂದೋಲನಗಳಿಗೆ ದಕ್ಕಬಹುದು ಎಂದು ಅವರು ವಿಶ್ಲೇಷಿಸಿದರು.
ಜನಸಂಗ್ರಾಮ ಪರಿಷತ್‌ನ ಎಸ್.ಆರ್. ಹಿರೇಮಠ್, ಲಂಚಮುಕ್ತ ಕರ್ನಾಟಕದ ಸಂಚಾಲಕ ರವಿಕೃಷ್ಣಾ ರೆಡ್ಡಿ, ಜನಸಂಗ್ರಾಮ ಪರಿಷತ್‌ನ ರಾಘವೇಂದ್ರ ಕುಷ್ಟಗಿ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಸಮಾನತೆಗಾಗಿ ಜನಾಂದೋಲನದ ನೂರ್ ಶ್ರೀಧರ್, ಚುಕ್ಕಿ ನಂಜುಂಡಸ್ವಾಮಿ, ರೂಪ ಹಾಸನ, ಎಂ. ಉಮಾದೇವಿ, ಬೆಟ್ಟಯ್ಯ ಕೋಟೆ ಮತ್ತಿತರರು ಹಾಜರಿದ್ದರು.
ಸಂಗಾತಿಗಳ ತಪ್ಪನ್ನು ವಿಮರ್ಶಿಸಿ- ರೆಹಮತ್
ಜನಾಂದೋಲನಗಳ ಮಹಾಮೈತ್ರಿ ಏರ್ಪಟ್ಟಿದ್ದು, ಮೈತ್ರಿ- ಮಿತ್ರ ಸೇರಿ ಮೈತ್ರೇಯಿ ಆಗಿದೆ. ಬುದ್ಧನ ಆಶಯದಲ್ಲಿ ಸೇರಿರುವ ಮಹಾಮೈತ್ರಿಯವರು ಸಂಗಾತಿಗಳ ತಪ್ಪನ್ನು ವಿಮರ್ಶಿಸಿ ಒಟ್ಟುಗೂಡಿಸಿಕೊಳ್ಳಬೇಕೆ ಹೊರತು ಹೊರಗಿಡುವುದಲ್ಲ. ಮಹಾಮೈತ್ರಿಯಲ್ಲಿ ರೈತ, ಕಾರ್ಮಿಕ, ಮಹಿಳೆಯರು, ಒಬಿಸಿ, ದಲಿತ, ಮುಸ್ಲಿಮರನ್ನು ಸೇರಿಸಿಕೊಳ್ಳಬೇಕು. ಒಂದು ಕಡೆ ದುಷ್ಟ ರಾಜಕಾರಣ ಮತ್ತು ಮತ್ತೊಂಡೆದೆ ಜಡತ್ವದ ರಾಜಕಾರಣದ ನಡುವೆ ಮಹಾಮೈತ್ರಿಯ ಕನಸಿನ ರಾಜಕಾರಣ ಸಾಧ್ಯ ಆಗಲಿ ಎಂದು ಚಿಂತಕ ಪ್ರೊ. ರೆಹಮತ್ ತರೀಕೆರೆ ಅಭಿಪ್ರಾಯಪಟ್ಟರು.
ಮಹಾಮೈತ್ರಿಯು ಯಾವುದೇ ಜನಮುಖಿ ಹೋರಾಟದ ನೋವಿನಲ್ಲೂ ತಾನೂ ಒಂದು ಎಂಬ ಅರಿವಿನಲ್ಲಿ ಹೋರಾಟ ಮಾಡುತ್ತದೆ. ಉಳಿದ ಜನಾಂದೋಲನಗಳು ಸ್ಪಂದಿಸುವಂತಾಗಲು ವೇಗವರ್ಧಕದಂತೆ ಕೆಲಸ ಮಾಡುತ್ತದೆ.
- ದೇವನೂರ ಮಹಾದೇವ, ಸಾಹಿತಿ
