ನವದೆಹಲಿ: ಸ್ವಚ್ಛ ಭಾರತ ಆಂದೋಲ ನದ ಹರಿಕಾರರಾದ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 15 ರಿಂದ ‘ಸ್ವಚ್ಛತೆಯೇ ಸೇವೆ’ (ಸ್ವಚ್ಛ ತಾ ಹೀ ಸೇವಾ ಹೈ) ಆಂದೋಲನವನ್ನು ಅರಂಭಿಸಲು ನಿರ್ಧರಿಸಿದ್ದಾರೆ. ಮಹಾತ್ಮಾ ಗಾಂಧೀಜಿ ಅವರ 150 ನೇ ಜನ್ಮದಿನದ ಹಿನ್ನೆಲೆಯಲ್ಲಿ ಮೋದಿ ಅವರು ಹೊಸ ಆಂದೋಲನಕ್ಕೆ ಕರೆ ನೀಡಿದ್ದಾರೆ.

‘ಸ್ವಚ್ಛ ಭಾರತಕ್ಕೆ ಶ್ರಮಿಸಿದವರ ಜತೆ ಇದೇ ಶನಿವಾರ ಸಂವಾದ ನಡೆಸಲು ಬಯಸಿರುವೆ. ಇದಾದ ನಂತರ ಸ್ವಚ್ಛತೆಯೇ ಸೇವೆ ಆಂದೋಲನ ಆರಂಭವಾಗಲಿದೆ. ಸ್ವಚ್ಛತೆಯೇ ಸೇವೆ ಆಂದೋಲವನ್ನು ಮಹಾತ್ಮಾ ಗಾಂಧೀಜಿ ಅವರಿಗೆ ನೀಡುವ ಬಹುದೊಡ್ಡ ಶ್ರದ್ಧಾಂಜಲಿ’ ಎಂದು ಬುಧವಾರ ವಿಡಿಯೋ ಸಂದೇಶವೊಂದರಲ್ಲಿ ಮೋದಿ ಹೇಳಿದ್ದಾರೆ.

‘ಅಕ್ಟೋಬರ್ 2 ಮಹಾತ್ಮಾ ಗಾಂಧೀಜಿ ಅವರ 150 ನೇ ಜನ್ಮದಿನವಾಗಿದ್ದು, ಅಂದಿಗೆ ಸ್ವಚ್ಛ ಭಾರತ ಆಂದೋಲನ 4 ವರ್ಷ ಪೂರೈಸಲಿದೆ. ಬಾಪು ಅವರ ಸ್ವಚ್ಛ ಭಾರತದ ಕನಸು ಸಾಕಾರಗೊಳಿಸಲು ಕೈಗೊಂಡ ಐತಿಹಾಸಿಕ ಜನಾಂದೋಲನವದು’ ಎಂದೂ ಮೋದಿ ಬಣ್ಣಿಸಿದ್ದಾರೆ.