ಬೆಂಗಳೂರು :  ಲೋಕಸಭಾ ಚುನಾವಣೆ ಹೊಸ್ತಿನಲ್ಲಿ ಭಾರೀ ಸಿದ್ಧತೆ ಕೈಗೊಂಡಿರುವ ಬಿಜೆಪಿ ತನ್ನ ಶಕ್ತಿ ಪ್ರದರ್ಶನಗೊಳಿಸಲು ಸಜ್ಜಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ರಾಜ್ಯ ಪ್ರವಾಸದ ದಿನಾಂಕ ನಿಗದಿಗೊಳಿಸಿದೆ.

ಪ್ರಧಾನಿ ಮೋದಿ ಅವರು ಫೆಬ್ರವರಿ 10, 19 ಮತ್ತು 27ರಂದು ಮೂರು ದಿನ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. 10ರಂದು ಮುಂಬೈ ಕರ್ನಾಟಕ ಭಾಗದ ಹುಬ್ಬಳ್ಳಿ-ಧಾರವಾಡ, 19ರಂದು ಹೈದ್ರಾಬಾದ್‌ ಕರ್ನಾಟಕದ ಕಲಬುರ್ಗಿಯಲ್ಲಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 27ರಂದು ಎಲ್ಲಿ ಎಂಬುದು ಇನ್ನೂ ಅಂತಿಮಗೊಂಡಿಲ್ಲ.

ಅದೇ ರೀತಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಫೆ.14 ಹಾಗೂ 21ರಂದು ರಾಜ್ಯಕ್ಕೆ ಭೇಟಿ ನೀಡುವುದು ನಿಶ್ಚಿತವಾಗಿದ್ದು, ಯಾವ ಸ್ಥಳ ಎಂಬುದು ಮಾತ್ರ ನಿರ್ಧಾರವಾಗಬೇಕಿದೆ.

ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರಿಬ್ಬರ ಫೆಬ್ರವರಿಯ ಎಲ್ಲ ಕಾರ್ಯಕ್ರಮಗಳು ಬಹುತೇಕ ರಾಜಧಾನಿ ಬೆಂಗಳೂರಿನಿಂದ ಹೊರಗೆ ನಿಗದಿಯಾಗುವ ಸಾಧ್ಯತೆಯಿದೆ. ಫೆಬ್ರವರಿ ತಿಂಗಳಲ್ಲಿ ಪ್ರತ್ಯೇಕವಾಗಿ ರಾಜ್ಯಕ್ಕೆ ಆಗಮಿಸುವ ಮೋದಿ ಹಾಗೂ ಅಮಿತ್‌ ಶಾ ಕಳೆದ ನಾಲ್ಕು ವರ್ಷದ ಅವಧಿಯಲ್ಲಿನ ಕೇಂದ್ರ ಸರ್ಕಾರದ ಸಾಧನೆಯನ್ನು ಜನತೆಯ ಮುಂದಿಡಲಿದ್ದಾರೆ. ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರನ್ನು ಬರಮಾಡಿಕೊಳ್ಳಲು ರಾಜ್ಯದ ನಾಯಕರು ಸರ್ವಸನ್ನದ್ಧರಾಗುವಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೋದಿ ಸಮಾವೇಶದ ಉಸ್ತುವಾರಿ ಜವಾಬ್ದಾರಿ ಅಶೋಕ್‌ಗೆ

ನರೇಂದ್ರ ಮೋದಿ ಅವರ ಕಾರ್ಯಕ್ರಮದ ಉಸ್ತುವಾರಿಯನ್ನು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಅವರ ಹೆಗಲಿಗೆ ವಹಿಸಲಾಗಿದೆ.

ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಲೋಕಸಭಾ ಚುನಾವಣಾ ಸಿದ್ಧತಾ ಸಭೆಯ ಸಮಾರೋಪದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಈ ಕುರಿತು ಮಾಹಿತಿ ನೀಡಿದರು.

ಫೆ.10ರಂದು ಹುಬ್ಬಳ್ಳಿ-ಧಾರವಾಡದಲ್ಲಿ ಬೃಹತ್‌ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ, ಬೆಳಗಾವಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯ ನಾಯಕರು, ಕಾರ್ಯಕರ್ತರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಫೆ.19 ರಂದು ಮೋದಿ ಕಲಬುರ್ಗಿಗೆ ಭೇಟಿ ನೀಡಲಿದ್ದಾರೆ. 27ರಂದು ಸಹ ರಾಜ್ಯಕ್ಕೆ ಭೇಟಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಸ್ಥಳ ನಿಗದಿಗೊಳಿಸಿಲ್ಲ. ಶೀಘ್ರದಲ್ಲಿಯೇ ಚರ್ಚಿಸಿ ಸಮಾವೇಶದ ಸ್ಥಳವನ್ನು ನಿಗದಿ ಮಾಡಲಾಗುವುದು. ನರೇಂದ್ರ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಕಾರ್ಯಕ್ರಮಗಳ ಸಂಪೂರ್ಣ ಉಸ್ತುವಾರಿಯನ್ನು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಅವರಿಗೆ ನೀಡಲಾಗಿದೆ ಎಂದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಫೆ. 14 ಮತ್ತು ಫೆ.21ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಕಾರ್ಯಕ್ರಮ ಎಲ್ಲಿ ಮಾಡಬೇಕು ಎಂಬುದರ ಬಗ್ಗೆ ಶೀಘ್ರದಲ್ಲಿಯೇ ನಿಶ್ಚಯ ಮಾಡಲಾಗುವುದು. ಅಮಿತ್‌ ಶಾ ಅವರು ರಾಜ್ಯಕ್ಕೆ ಆಗಮಿಸಿದ ವೇಳೆ ಚುನಾವಣಾ ರಣತಂತ್ರದ ಕುರಿತು ಚರ್ಚಿಸಿ ರೂಪುರೇಷೆಯನ್ನು ರೂಪಿಸಲಾಗುವುದು ಎಂದು ಹೇಳಿದರು.