ನವದೆಹಲಿ(ಆ.10): ಅಪರೂಪದಲ್ಲಿ ಅಪರೂಪದ ಪ್ರಕರಣ ಎಂಬಂತೆ ಕಾಂಗ್ರೆಸ್ ಹಿರಿಯ ಮುಖಂಡ, ಬಿ.ಕೆ ಹರಿಪ್ರಸಾದ್ ಕುರಿತು ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಯನ್ನು ರಾಜ್ಯಸಭೆಯ ಕಡತದಿಂದ ಅಳಿಸಿ ಹಾಕಲಾಗಿದೆ.

ನಿನ್ನೆ ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ ಕೆ ಹರಿಪ್ರಸಾದ್ ಎನ್ ಡಿಎ ಅಭ್ಯರ್ಥಿ ಹರಿವಂಶ್ ನಾರಾಯಣ್ ಸಿಂಗ್ ಅವರ ವಿರುದ್ಧ ಸೋತಿದ್ದರು. ಹರಿವಂಶ್ ಸುಲಭ ಗೆಲುವಿನ ನಂತರ ಸದನದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಹರಿವಂಶ್ ಅವರಿಗೆ ಅಭಿನಂದನೆ ಹೇಳಿದ್ದರು.

ಇಂದಿನ ಚುನಾವಣೆ ಇಬ್ಬರು ಹರಿಗಳ ನಡುವಿನದಾಗಿತ್ತು ಎಂದು ಹೇಳಿದ ಪ್ರಧಾನಿ, ನಂತರ ಹರಿಪ್ರಸಾದ್ ಅವರ ಹೆಸರಿನ ಮೊದಲಿಗೆ ಇರುವ ಬಿ ಕೆ ಮೊದಲಕ್ಷರವನ್ನು ಟೀಕಿಸಿ ಮಾತನಾಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್, ಪ್ರಧಾನಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿತ್ತು.

ಪ್ರಧಾನಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದ ಬಿಕೆ ಹರಿಪ್ರಸಾದ್, ಮೋದಿ ತಮ್ಮ ಸ್ಥಾನದ ಮತ್ತು ಸದನದ ಗೌರವಕ್ಕೆ ಚ್ಯುತಿ ತಂದಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಬಿಕೆ ಹರಿಪ್ರಸಾದ್ ಅವರ ಹೆಸರಿನ ಬಗ್ಗೆ ಮಾತನಾಡಿದ್ದ ಪ್ರಧಾನಿ ಮಾತುಗಳನ್ನು ಕಡತದಿಂದ ತೆಗೆದುಹಾಕಲಾಗಿದೆ ಎಂದು ರಾಜ್ಯಸಭೆಯ ಕಾರ್ಯದರ್ಶಿಗಳು ಖಚಿತಪಡಿಸಿದ್ದಾರೆ.

ಪ್ರಧಾನಿಯವರು ಸದನದಲ್ಲಿ ಮಾತನಾಡಿದ ಮಾತುಗಳನ್ನು ಅಳಿಸಿಹಾಕಿರುವುದು ಅಪರೂಪದ ಪ್ರಕರಣ. 2013ರಲ್ಲಿ ಇದೇ ರೀತಿ ಸದನದಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಹಿರಿಯ ಸಚಿವ ಅರುಣ್ ಜೇಟ್ಲಿ ನಡುವಿನ ವಾಗ್ವಾದದ ಅಸಮಂಜಸ ಮಾತುಗಳನ್ನು ಕಡತಗಳಿಂದ ತೆಗೆದುಹಾಕಲಾಗಿತ್ತು.