ನವದೆಹಲಿ [ಆ.30]: ಸಂಪುಟ ಸಹೋದ್ಯೋಗಿಗಳಿಗೆ ಮತ್ತೆ ಶಿಸ್ತಿನ ಪಾಠ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಎಲ್ಲಾ ಸಚಿವರು ಬೆಳಿಗ್ಗೆ 9.30ಕ್ಕೆ ಕಚೇರಿಯಲ್ಲಿ ಹಾಜರಿರಬೇಕು ಎಂದು ಕಟ್ಟಾಜ್ಞೆ ಹೊರಡಿಸಿದ್ದಾರೆ.

ಅಲ್ಲದೇ ಸಲಹೆಗಾರ, ಆಪ್ತ ಕಾರ್ಯದರ್ಶಿ ಮುಂತಾದ ಆಯಕಟ್ಟಿನ ಸ್ಥಳದಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರನ್ನು ನೇಮಕ ಮಾಡಕೂಡದು ಎಂದು ಸೂಚನೆ ನೀಡಿದ್ದಾರೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಪ್ರಧಾನಿ ಈ ಕಟ್ಟಪ್ಪಣೆ ಹೊರಡಿಸಿದ್ದು, ಸಾರ್ವಜನಿಕ ಹೇಳಿಕೆ ನೀಡುವಾಗಲೂ ಎಚ್ಚರಿಕೆ ವಹಿಸಬೇಕು. ಈಡೇರಿಸಲು ಆಗುವಂತಹ ಭರವಸೆಗಳನ್ನು ಮಾತ್ರವೇ ನೀಡಬೇಕು ಎಂದು ಹೇಳಿದ್ದಾರೆ.

ಸಚಿವರು ಹಾಗೂ ರಾಜ್ಯ ಖಾತೆ ಸಚಿವರು ಸಮನ್ವಯ ಸಾಧಿಸಿಕೊಂಡು ಹೋಗಬೇಕು. ಇಲಾಖೆಯ ಎಲ್ಲಾ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಬೇಕು ಎಂದು ಸಲಹೆ ನೀಡಿದ್ದಾರೆ. ನಿಮ್ಮ ಕ್ಷೇತ್ರಗಳಲ್ಲಿರುವ ಕಾಶ್ಮೀರಿಗಳೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಪರಿಹರಿಸಬೇಕು. ಅಲ್ಲದೇ ಪ್ಲಾಸ್ಟಿಕ್‌ ನಿಯಂತ್ರಣದ ಕುರಿತು ಆಂದೋಲನ ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.