ಅಹಮದಾಬಾದ್[ಮಾ. 04]  ಪಾಕ್ ಪರ ಹೇಳಿಕೆ ನೀಡೋದು ಬಿಟ್ಟು ನಮ್ಮ ಸೈನಿಕರನ್ನು ಗೌರವಿಸಿ ಎಂದು ಕಾಂಗ್ರೆಸ್ ಸೇರಿ ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ನಮ್ಮ ಯೋಧರ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಇಡೀ ದೇಶ ಹೆಮ್ಮೆಪಡುತ್ತಿದೆ. ಪಾಕಿಸ್ತಾನದ ಬಾಲಕೋಟ್ ಉಗ್ರರ ನೆಲೆ ಮೇಲೆ ಭಾರತೀಯ ಸೇನೆ ದಾಳಿ ಮಾಡಿ ಉಗ್ರರ ದಮನ ಮಾಡಿದ್ದಕ್ಕೆ ಇಡೀ ದೇಶವೇ ಕೊಂಡಾಡುತ್ತಿದೆ. ನಮ್ಮ ಸೇನೆಯ ಸಾಹಸ, ಧೈರ್ಯ, ಶೌರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದ್ರೆ ನಮ್ಮ ವಿಪಕ್ಷಗಳ ನಾಯಕರಿಗೆ ಉಗ್ರರ ಸಾವಿನ ಲೆಕ್ಕ ಕೊಡಬೇಕಂತೆ ಎಂದು ವ್ಯಂಗ್ಯವಾಡಿದರು.

ಉಗ್ರರ ಮೇಲಿನ ದಾಳಿ ಬಗ್ಗೆ ಸಾಕ್ಷಿ ಕೇಳುತ್ತಿರುವ ವಿಪಕ್ಷಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ ಮೋದಿ ಇದು ನಮ್ಮ ಯೋಧರಿಗೆ ಮಾಡುತ್ತಿರುವ ಅವಮಾನ.  ಯೋಧರನ್ನು ಯಾವುದೇ ಕಾರಣಕ್ಕೂ ಅವಮಾನಿಸಬೇಡಿ. ಸೇನೆಯನ್ನು ಅವಮಾನಿಸಿದ್ರೆ ಇಡೀ ದೇಶವನ್ನೇ ಅವಮಾನಿಸಿದಂತೆ. ನನ್ನನ್ನು ಬೇಕಾದರೆ ಎಷ್ಟಾದ್ರೂ ಬೈಯಿರಿ ನಿಂದಿಸಿ, ಆದ್ರೆ ಸೇನೆಗೆ ಅಲ್ಲ ಎಂದು ಕಟುವಾಗಿ ನುಡಿದರು.

ನನಗೆ ಅಧಿಕಾರ ಮುಖ್ಯವಲ್ಲ, ದೇಶ ಮುಖ್ಯ. ಯಾರೇ ಆಗಲಿ ನಮ್ಮ ದೇಶದ ತಂಟೆಗೆ ಬಂದ್ರೆ ಸುಮ್ಮನಿರಲ್ಲ. ಭಯೋತ್ಪಾದನೆ, ಉಗ್ರರಿಗೆ ಕುಮ್ಮಕ್ಕು ನೀಡುವವರನ್ನು ಸುಮ್ಮನೆ ಬಿಡಲ್ಲ ಎಂದು ಪಾಕ್ ಹಾಗೂ ಭಯೋತ್ಪಾದಕರಿಗೆ ಮತ್ತೊಮ್ಮೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ ನೀಡಿದರು.