ನವದೆಹಲಿ: ಕುಟುಂಬವೇ ಮೊದಲು ಎಂಬ ಕಾಂಗ್ರೆಸ್‌ನ ಧೋರಣೆ ಮತ್ತು ಯುಪಿಎ ಸರ್ಕಾರದ ಕ್ರಿಮಿನಲ್ ನಿರ್ಲಕ್ಷ್ಯದಿಂದಾಗಿ ದೇಶದ ಭದ್ರತೆ ಅಪಾಯವನ್ನು ಎದುರಿಸುವಂತಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. 

ಮಾಜಿ ಯೋಧರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಬೋಪೋರ್ಸ್ ಹಗರಣ, ಅಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣ, ರಫೇಲ್ ಹಗರಣ ಗಳನ್ನು ಉಲ್ಲೇಖಿಸಿದರು. ಹಿಂದಿನ ಸರ್ಕಾರಗಳು ದೇಶಕ್ಕೆ ಅಗತ್ಯವಿದ್ದ ಮಿಲಿಟರಿ ಸಲಕರಣೆಗಳನ್ನು ಖರೀದಿಸುವಲ್ಲಿ ಅತ್ಯಂತ ನಿರ್ಲಕ್ಷ್ಯ ತೋರಿದ್ದವು ಎಂದರು. 

ಇದೇ ವೇಳೆ ದೇಶದ ಸೇನಾ ಶಕ್ತಿಯನ್ನು ಹೆಚ್ಚಿಸಲು ತಮ್ಮ ಸರ್ಕಾರ ಕೈಗೊಂಡ ಕ್ರಮಗಳನ್ನು ಹೆಸರಿಸಿದ ಮೋದಿ, ಭದ್ರತಾ ಪಡೆಗಳು ಮತ್ತು ಮಾಜಿ ಯೋಧರ ಕಲ್ಯಾಣ ವನ್ನು ತಮ್ಮ ಸರ್ಕಾರ ಖಾತರಿ ಪಡಿಸಿದೆ ಮತ್ತು ಹುತಾತ್ಮ ಯೋಧರನ್ನು ಗೌರವಿಸಿದೆ ಎಂದು ಹೇಳಿದರು. 

ನಮ್ಮ ಯೋಧರಿಗೆ ಏಕೆ ನ್ಯಾಯ ಸಲ್ಲಲಿಲ್ಲ. ಹುತಾತ್ಮ ಯೋಧ ರಿಗಾಗಿ ಸ್ಮಾರಕವೊಂದನ್ನು ನಿರ್ಮಿಸಲು ಗಮನ ನೀಡದೇ ಇರುವುದಕ್ಕೆ ಕಾರಣವೇನು? ಭಾರತ ಮುಖ್ಯವಾಗಿತ್ತೋ ಅಥವಾ ಕುಟುಂಬ ಮುಖ್ಯವಾಗಿತ್ತೋ? ಇದಕ್ಕೆಲ್ಲಾ ಉತ್ತರ ಭಾರತ ಮೊದಲು ಮತ್ತು ಕುಟುಂಬ ಮೊದಲು ಎಂಬುದರಲ್ಲಿದೆ ಎಂದು ಹೇಳುವ ಮೂಲಕ ಗಾಂಧಿ ಕುಟುಂಬದ ವಿರುದ್ಧ ಮೋದಿ ಹರಿಹಾಯ್ದರು.