ವಿಶ್ವಸಂಸ್ಥೆಯಿಂದ ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನವದೆಹಲಿ, [ಅ.03]: ವಿಶ್ವಸಂಸ್ಥೆ ನೀಡುವ ಅತ್ಯುನ್ನತ ಪರಿಸರ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ಪ್ರಶಸ್ತಿಯನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದರು.
ಇಂದು ದೆಹಲಿಯಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ವಿಶ್ವಸಂಸ್ಥೆಯ ಜನರಲ್ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಅವರು ಮೋದಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಪರಿಸರ ಕ್ಷೇತ್ರಕ್ಕೆ ಅತ್ಯುತ್ತಮ ಕೊಡುಗೆ ನೀಡಿ ಬದಲಾವಣೆಯ ಹರಿಕಾರರಾಗಿರುವ ವಿಶ್ವದ ಒಟ್ಟು ಆರು ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಅದರಂತೆ ವಿಶ್ವಸಂಸ್ಥೆ ಇಂದು ನರೇಂದ್ರ ಮೋದಿ ಅವರಿಗೆ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿ ನೀಡಿ ಗೌರವಿಸಿತು.
ಮೋದಿಗೆ ವಿಶ್ವಸಂಸ್ಥೆಯ ಅತಿ ದೊಡ್ಡ ಗೌರವ
''ನಮ್ಮ ಕಾಲದ ಕೆಲವೊಂದು ಗಂಭೀರ ಪರಿಸರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಿರತ ಶ್ರಮವನ್ನು ಧೈರ್ಯದಿಂದ ನಡೆಸುತ್ತಿರುವವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ'' ಎಂದು ವಿಶ್ವ ಸಂಸ್ಥೆ ಹೇಳಿದೆ.
ಅಂತಾರಾಷ್ಟ್ರೀಯ ಸೋಲಾರ್ ಅಲಾಯನ್ಸ್ ಗೆ ಅವರು ಒದಗಿಸಿರುವ ನಾಯಕತ್ವ ಹಾಗೂ ಒಂದು ಬಾರಿ ಮಾತ್ರ ಬಳಕೆ ಮಾಡಬಹುದಾದಂತಹ ಪ್ಲಾಸ್ಟಿಕ್ ಬಳಕೆಯನ್ನು ಭಾರತದಲ್ಲಿ 2022ರೊಳಗಾಗಿ ಅಂತ್ಯಗೊಳಿಸುವ ಅವರ ಬದ್ಧತೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.
