ಲೋಕಸಭೆ ಚುನಾವಣೆಗೆ ಸಿದ್ಧತೆ; ಖುದ್ದು ಮೋದಿ ಅಖಾಡಕ್ಕೆ

PM Narendra Modi Preparation for Loksabha Election 2018
Highlights

ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿ ಇರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈಗಲೇ ಅಖಾಡಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. ದೇಶದ ತಳಮಟ್ಟದಲ್ಲಿ ಯಾವ ಪರಿಸ್ಥಿತಿ ಇದೆ ಎಂಬ ಮಾಹಿತಿಯನ್ನು ಗ್ರಹಿಸಲು ಉದ್ದೇಶಿಸಿರುವ ಅವರು, ಚುನಾವಣಾ ಸಿದ್ಧತೆಯನ್ನು ಖುದ್ದು ಪರಿಶೀಲಿಸಲು ಮುಂದಾಗಿದ್ದಾರೆ.
 

ನವದೆಹಲಿ (ಜೂ. 03):  ಸಾರ್ವತ್ರಿಕ ಲೋಕಸಭೆ ಚುನಾವಣೆಗೆ ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿ ಇರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈಗಲೇ ಅಖಾಡಕ್ಕೆ ಇಳಿಯಲು ಸಜ್ಜಾಗುತ್ತಿದ್ದಾರೆ. ದೇಶದ ತಳಮಟ್ಟದಲ್ಲಿ ಯಾವ ಪರಿಸ್ಥಿತಿ ಇದೆ ಎಂಬ ಮಾಹಿತಿಯನ್ನು ಗ್ರಹಿಸಲು ಉದ್ದೇಶಿಸಿರುವ ಅವರು, ಚುನಾವಣಾ ಸಿದ್ಧತೆಯನ್ನು ಖುದ್ದು ಪರಿಶೀಲಿಸಲು ಮುಂದಾಗಿದ್ದಾರೆ.

ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಜಾರಿಗೆ ತಂದಿರುವ ಯೋಜನೆಗಳ ಸ್ಥಿತಿಗತಿಯನ್ನು ಅರಿಯಲು ಶೀಘ್ರದಲ್ಲೇ ಬಿಜೆಪಿ ಶಾಸಕರ ಜತೆಗೆ ನೇರ ಸಮಾಲೋಚನೆಯನ್ನು ಅವರು ಆರಂಭಿಸಲಿದ್ದಾರೆ. ಜತೆಗೆ ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷದಿಂದ ಯಾರಿಗೆ ಟಿಕೆಟ್‌ ನೀಡಬೇಕು ಎಂಬ ಪ್ರಕ್ರಿಯೆಯಲ್ಲೂ ಅವರು ಖುದ್ದು ಭಾಗಿಯಾಗಲಿದ್ದಾರೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ದೊರೆಯುತ್ತಿರುವ ಯಶಸ್ಸಿನಿಂದ ಬೀಗುತ್ತಿರುವ ಪ್ರತಿಪಕ್ಷಗಳ ಪಾಳಯ, 2019ರ ಚುನಾವಣೆಯಲ್ಲೂ ಒಗ್ಗೂಡಿದರೆ ಮೋದಿ ನೇತೃತ್ವದ ಬಿಜೆಪಿಯನ್ನು ಮಣಿಸಬಹುದು ಎಂಬ ವಿಶ್ವಾಸದಲ್ಲಿದೆ. ಅಂತಹ ತಮ್ಮನ್ನು ಮಣಿಸುವ ಯಾವುದೇ ಸಾಧ್ಯತೆಗೂ ಅವಕಾಶ ನೀಡದೇ ಇರಲು ಮೋದಿ ಅವರು ತಮ್ಮದೇ ಆದ ರೀತಿಯಲ್ಲಿ ತಂತ್ರ ಹೆಣೆಯಲು ಆರಂಭಿಸಿದ್ದಾರೆ. ಅದರ ಒಂದು ಭಾಗವೇ ಶಾಸಕರ ಜತೆಗಿನ ಸಮಾಲೋಚನೆ ಐಡಿಯಾ ಎಂದು ಹೇಳಲಾಗುತ್ತಿದೆ.

‘ನಮೋ ಆ್ಯಪ್‌’ ಮೂಲಕ ದೇಶಾದ್ಯಂತ ಇರುವ ಬಿಜೆಪಿ ಶಾಸಕರ ಜತೆಗೆ ಸಂವಹನ ನಡೆಸಲಿರುವ ಮೋದಿ ಅವರು, ಆಯಾ ಶಾಸಕರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ತಮ್ಮ ಬಳಿ ಇರುವ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ. ಕೇಂದ್ರದ ಯೋಜನೆಗಳ ಬಗ್ಗೆ ವಿಚಾರಿಸಲಿದ್ದಾರೆ. ಅಲ್ಲದೆ, ಶಾಸಕರು ಪ್ರತಿನಿಧಿಸುತ್ತಿರುವ ರಾಜ್ಯಗಳಲ್ಲಿರುವ ಪ್ರಮುಖ ನಾಯಕರ ಬಗ್ಗೆ ವಿವರ ಪಡೆದುಕೊಳ್ಳಲಿದ್ದಾರೆ. ಶಾಸಕರು ಮಾತ್ರವೇ ಅಲ್ಲದೆ, ದೇಶದ ಜನರ ಜತೆಗೂ ಸಮಾಲೋಚನೆ ನಡೆಸಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಕುರಿತು ಜನರಿಂದ ಪ್ರತಿಕ್ರಿಯೆ ಬಯಸಲಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರ ನಾಲ್ಕು ವರ್ಷ ಪೂರೈಸಿದ ಸಂದರ್ಭದಲ್ಲೂ ಜನರೊಂದಿಗೆ ಬೆರೆತು ಅವರಿಂದ ಪ್ರತಿಕ್ರಿಯೆಯನ್ನು ಮೋದಿ ಪಡೆದಿದ್ದರು. ಸರ್ಕಾರ ಕೈಗೊಂಡಿರುವ ಕೆಲಸಗಳ ಬಗ್ಗೆ ಸಂತೋಷವಿದೆಯೇ? ನಿಮ್ಮ ರಾಜ್ಯಗಳಲ್ಲಿ ಹಾಗೂ ಕ್ಷೇತ್ರಗಳಲ್ಲಿ ಇರುವ ಮೂವರು ಜನಪ್ರಿಯ ನಾಯಕರು ಯಾರು? ಸರ್ಕಾರದ ಕೆಲಸಗಳು ವೇಗ ಪಡೆದುಕೊಂಡಿವೆ ಎಂಬ ಭಾವನೆ ಇದೆಯೇ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿದ್ದರು.

ಕುತೂಹಲಕಾರಿ ಸಂಗತಿ ಎಂದರೆ, ಆಯಾ ರಾಜ್ಯಗಳಲ್ಲಿ ಇರುವ ಜನಪ್ರಿಯ ನಾಯಕರ ಕುರಿತಂತೆ ಮೋದಿ ಅವರು ಮಾಹಿತಿಯನ್ನು ಸಂಗ್ರಹಿಸುತ್ತಿರುವುದು. 2014ರ ಲೋಕಸಭೆ ಚುನಾವಣೆಯಲ್ಲಿ ಹಲವು ಹೊಸಮುಖಗಳಿಗೆ ಮೋದಿ ಅವರು ಟಿಕೆಟ್‌ ಕೊಡಿಸಿದ್ದರು. ಆ ಪೈಕಿ ಬಹುತೇಕ ಮಂದಿ ವಿಜಯಶಾಲಿಗಳಾಗಿದ್ದರು. ಹೀಗಾಗಿ ಜಾತಿ ಲೆಕ್ಕಾಚಾರದೊಂದಿಗೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಲು ಹೊರಟಿರುವ ಪ್ರತಿಪಕ್ಷಗಳ ತಂತ್ರವನ್ನು ವಿಫಲಗೊಳಿಸಲು ಆಯಾ ಭಾಗದ ಜನಪ್ರಿಯ ನಾಯಕರಿಗೆ ಟಿಕೆಟ್‌ ನೀಡುವ ಉದ್ದೇಶವೇನಾದರೂ ಮೋದಿ ಅವರಿಗೆ ಇದೆಯೇ ಎಂಬ ಅನುಮಾನ ಮೂಡುವಂತಾಗಿದೆ.

ಮೋದಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಒಗ್ಗೂಡುತ್ತಿರುವ ಬೆಳವಣಿಗೆಯನ್ನು ಲಘುವಾಗಿ ಪರಿಗಣಿಸಲು ಆಗದು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರಾದರೂ, ಉಪಚುನಾವಣೆಗಳು ದೇಶದ ಜನರ ಭಾವನೆಯನ್ನು ಪ್ರತಿಬಿಂಬಿಸಲಾರವು ಎಂಬುದು ಬಿಜೆಪಿ ವಾದ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಉಪಚುನಾವಣೆ ನೋಡಿ ಹೇಳಲಾಗದು ಎಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ಈಗಾಗಲೇ ಹೇಳಿದ್ದಾರೆ.

 

ಮೋದಿ ತಯಾರಿ

1. ‘ನಮೋ ಆ್ಯಪ್‌’ ಮೂಲಕ ಬಿಜೆಪಿ ಶಾಸಕರ ಜತೆ ಸಂವಾದ. ಆಯಾ ರಾಜ್ಯಗಳಲ್ಲಿರುವ ಪ್ರಮುಖ ವ್ಯಕ್ತಿಗಳ ಮಾಹಿತಿ ಸಂಗ್ರಹ.

2. ಜನರ ಜತೆಗೂ ಸಮಾಲೋಚನೆ ನಡೆಸಿ ಕೇಂದ್ರದ ಯೋಜನೆಗಳ ಅನುಷ್ಠಾನ ಕುರಿತು ಮಾಹಿತಿ ಸಂಗ್ರಹ.

3. ಆಯಾ ರಾಜ್ಯ, ಕ್ಷೇತ್ರದಲ್ಲಿನ ಜನಪ್ರಿಯ ನಾಯಕರ ಕುರಿತು ಸಾರ್ವಜನಿಕರಿಂದ ವಿವರ ಯಾಚನೆ.

4. ಲೋಕಸಭೆ ಚುನಾವಣೆಯ ಟಿಕೆಟ್‌ ಹಂಚಿಕೆಯಲ್ಲಿ ಖುದ್ದು ಭಾಗಿ.

5. ಜನರು, ಶಾಸಕರಿಂದ ಪ್ರಮುಖ- ಜನಪ್ರಿಯ ನಾಯಕರ ಬಗ್ಗೆ ಮಾಹಿತಿ ಸಂಗ್ರಹಿಸಿ ಅಂತಹ ವ್ಯಕ್ತಿಗಳಿಗೆ ಟಿಕೆಟ್‌ ನೀಡುವ ಸಂಭವ

loader