Asianet Suvarna News Asianet Suvarna News

ಪೆಟ್ರೋಲ್ ಬೆಲೆ ಇಳಿಸಲು ಮೋದಿ ಹೊಸ ಪ್ಲಾನ್ ಏನು?

ಕಚ್ಚಾತೈಲದ ಬೆಲೆ ಇಳಿಕೆಗೆ ಹಾಗೂ ಡಾಲರ್ ಬದಲು ರುಪಾಯಿಯಲ್ಲಿ ಹಣ ಪಾವತಿಗೆ ಕೇಂದ್ರ ಸರ್ಕಾರ ಒಪೆಕ್ ರಾಷ್ಟ್ರಗಳ ಜೊತೆ ಸಾಮ, ದಾನ, ಭೇದದ ತಂತ್ರ ಪ್ರಯೋಗಿಸಲು ಆರಂಭಿಸಿದೆ. ಪ್ರಧಾನಿ ಮೋದಿ ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕಲು ಹೊಸತೊಂದು ಮಾರ್ಗ ಹುಡುಕಿದ್ದಾರೆ.

PM Narendra Modi new plan to decrease petrol price
Author
Bengaluru, First Published Oct 18, 2018, 10:15 AM IST
  • Facebook
  • Twitter
  • Whatsapp

ಬೆಂಗಳೂರು (ಅ. 18): ಕೆಲ ತಿಂಗಳಿನಿಂದ ಏರುತ್ತಲೇ ಸಾಗಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮೋದಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಒಂದೆಡೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಬರುತ್ತಿದೆ.

ಅದಾಗುತ್ತಿದ್ದಂತೆ ಲೋಕಸಭೆ ಚುನಾವಣೆ. ಏರುತ್ತಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಸದೆ ಜನರ ಬಳಿ ಮತ ಕೇಳುವುದು ಹೇಗೆ? ಇನ್ನೊಂದೆಡೆ ರುಪಾಯಿ ಮೌಲ್ಯ ಕುಸಿಯುತ್ತಿದೆ. ರುಪಾಯಿ ಮೌಲ್ಯಕ್ಕೂ ತೈಲ ಬೆಲೆಗೂ ಅನ್ಯೋನ್ಯ ಸಂಬಂಧ. ರುಪಾಯಿ ಬೆಲೆ ಕುಸಿದಷ್ಟೂ ತೈಲಬೆಲೆ ಏರುತ್ತದೆ. ತೈಲಬೆಲೆ ಏರಿದಷ್ಟೂ ರುಪಾಯಿ ಕುಸಿಯುತ್ತಲೇ ಹೋಗುತ್ತದೆ!

ಹೀಗಾಗಿ ಪ್ರಧಾನಿ ಮೋದಿ ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕಲು ಹೊಸತೊಂದು ಮಾರ್ಗ ಹುಡುಕಿದ್ದಾರೆ. ಅದು - ತೈಲ ರಫ್ತುದಾರ ದೇಶಗಳ ಒಕ್ಕೂಟ (ಒಪೆಕ್)ದ ಮನವೊಲಿಸಿ ಅಥವಾ ಅದರ ಮೇಲೆ ಒತ್ತಡ ಹೇರಿ ಕಚ್ಚಾತೈಲ ಬೆಲೆಯನ್ನೇ ಇಳಿಕೆ ಮಾಡಿಸುವುದು. ಅದು ಸಾಧ್ಯವಾಗದಿದ್ದರೆ ಭಾರತಕ್ಕೆ ಆಮದು ಮಾಡಿಕೊಳ್ಳುವ ತೈಲಬೆಲೆಯಲ್ಲಿ ಚೌಕಾಸಿ ಮಾಡಿ ದರ ಇಳಿಕೆ ಮಾಡಿಸುವುದು.

ಇದರ ಮಧ್ಯೆ, ಸದ್ಯ ಡಾಲರ್ ಅಥವಾ ಯುರೋದಲ್ಲಿ ಪಾವತಿ ಪಡೆಯುತ್ತಿರುವ ಒಪೆಕ್ ರಾಷ್ಟ್ರಗಳಿಗೆ ಭಾರತೀಯ ರುಪಾಯಿಯಲ್ಲಿ ಹಣ ಪಾವತಿಸುವುದು.  ಈ ಉಪಾಯಗಳು ಫಲ ಕೊಟ್ಟರೆ ಪೆಟ್ರೋಲ್ ಬೆಲೆ ಇಳಿಕೆಯಾಗಬಹುದು. ಆದರೆ, ಇವು ಫಲ ಕೊಡುತ್ತವೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ರುಪಾಯಿಗೂ ತೈಲಕ್ಕೂ ಏನು ಸಂಬಂಧ?

ನಮ್ಮ ದೇಶ ಶೇ.83 ರಷ್ಟು ತೈಲವನ್ನು ಬೇರೆ ದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಈ ವರ್ಷ ಆಮದು ಮಾಡಿಕೊಳ್ಳುವ ಕಚ್ಚಾತೈಲದ ಮೌಲ್ಯ ಸುಮಾರು 6.7 ಲಕ್ಷ ಕೋಟಿ ರು. ಆಗುತ್ತದೆ. ಕಚ್ಚಾತೈಲ
ಆಮದು ಮಾಡಿಕೊಳ್ಳುವ ಭಾರತದ ಕಂಪನಿಗಳು ಈ ಹಣವನ್ನು ಡಾಲರ್ ಅಥವಾ ಯುರೋದಲ್ಲಿ ಪಾವತಿ ಮಾಡುತ್ತವೆ. ರುಪಾಯಿ ಮೌಲ್ಯ ಕುಸಿತಗೊಂಡಾಗ ತೈಲ ಕಂಪನಿಗಳು ಡಾಲರ್ ಅಥವಾ ಯುರೋ ಖರೀದಿಸಲು ಹೆಚ್ಚು ರುಪಾಯಿ ಪಾವತಿ ಮಾಡಬೇಕಾಗುತ್ತದೆ. ಆಗ ತೈಲ ಬೆಲೆ ಮತ್ತಷ್ಟು ದುಬಾರಿಯಾಗುತ್ತದೆ. ಈ ವರ್ಷ ರುಪಾಯಿ ಮೌಲ್ಯ ಶೇ.15 ರಷ್ಟು ಕುಸಿದಿರುವುದರಿಂದ ತೈಲ ಬೆಲೆ ಯದ್ವಾತದ್ವಾ ಏರಿಕೆಯಾಗಿದೆ.

ಒಂದೇ ಏಟಿಗೆ ಎರಡು ಹಕ್ಕಿ!

ಹೀಗಾಗಿ ಡಾಲರ್‌ನಿಂದಾಗಿ ಆಗುತ್ತಿರುವ ಸಮಸ್ಯೆಗೆ ಭಾರತ ರುಪಾಯಿ ಮೂಲಕ ಪರಿಹಾರ ಕಂಡುಕೊಳ್ಳಲು ಹೊರಟಿದೆ. ಒಪೆಕ್ ರಾಷ್ಟ್ರಗಳ ಬಳಿ ಭಾರತ ತಾನು ಖರೀದಿಸುವ ಕಚ್ಚಾತೈಲಕ್ಕೆ ಡಾಲರ್ ಅಥವಾ ಯುರೋ ಬದಲು ರುಪಾಯಿಯಲ್ಲೇ ಪಾವತಿ ಮಾಡುತ್ತೇನೆ ಎಂದು ಹೇಳಿದೆ. ಇದಕ್ಕಿನ್ನೂ ಅವು ಒಪ್ಪಿಲ್ಲ. ಒಪೆಕ್‌ನಿಂದ ನಮ್ಮ ದೇಶ ಶೇ.60 ರಷ್ಟು ಕಚ್ಚಾತೈಲ ಆಮದು ಮಾಡಿಕೊಳ್ಳುತ್ತದೆ. ಅವು ರುಪಾಯಿ ಸ್ವೀಕರಿಸಲು ಒಪ್ಪಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರುಪಾಯಿಯ ಶಕ್ತಿ ಹೆಚ್ಚುತ್ತದೆ.

ಭಾರತದಲ್ಲಿ ತೈಲ ಬೆಲೆ ಕಡಿಮೆಯಾಗುತ್ತದೆ. ರುಪಾಯಿ ಕುಸಿತವೂ ಕಡಿಮೆಯಾಗುತ್ತದೆ. ಜೊತೆಗೆ, ದೇಶದ ಚಾಲ್ತಿ ಖಾತೆ ಕೊರತೆ ಸಮಸ್ಯೆ ಕೂಡ ನೀಗುತ್ತದೆ. ಸೌದಿ ಜೊತೆ ಇರಾನ್ ಮಾದರಿ ತಂತ್ರ ಹಿಂದೊಮ್ಮೆ ಇರಾನ್ ಮೇಲೆ ಅಮೆರಿಕ ನಿರ್ಬಂಧ ಹೇರಿತ್ತು. ಆಗ ಭಾರತವು ಇರಾನ್‌ನಿಂದ ಆಮದು ಮಾಡಿಕೊಳ್ಳುವ ತೈಲಕ್ಕೆ ರುಪಾಯಿಯಲ್ಲಿ ಹಣ ಪಾವತಿಸುತ್ತಿತ್ತು. ಅದಕ್ಕೆ ಪ್ರತಿಯಾಗಿ ಇರಾನ್ ಅದೇ ರುಪಾಯಿ ಬಳಸಿ ಭಾರತದಿಂದ ಔಷಧ, ಆಹಾರ ಹಾಗೂ ಇತರ ಅಗತ್ಯ ವಸ್ತುಗಳನ್ನು ಖರೀದಿಸುತ್ತಿತ್ತು.

ಇದರಿಂದ ಎರಡೂ ದೇಶಗಳು ಡಾಲರ್‌ನ ಅಗತ್ಯವಿಲ್ಲದೆ ಪರಸ್ಪರ ಸಹಕಾರದಲ್ಲಿ ವ್ಯಾಪಾರ ಮಾಡಿಕೊಂಡು ಲಾಭ ಗಳಿಸಿದ್ದವು. ಈಗ ಮತ್ತೆ ಇರಾನ್ ಮೇಲೆ ಅಮೆರಿಕವು ನಿರ್ಬಂಧ ಹೇರಲು ಹೊರಟಿದೆ. ಆದರೆ, ಸದ್ಯ ಇರಾನ್‌ನಿಂದ ಕೊಳ್ಳುವ ತೈಲಕ್ಕೆ ಭಾರತವು ಯುರೋದಲ್ಲಿ ಹಣ ಪಾವತಿಸುತ್ತಿದೆ. ಹೀಗಾಗಿ ಹಳೆಯ ಉಪಾಯವನ್ನೇ ಮತ್ತೊಮ್ಮೆ ಬಳಸಿ, ಇರಾನ್‌ಗೆ ರುಪಾಯಿಯಲ್ಲಿ ಹಣ ಪಾವತಿಸುವ ಬಗ್ಗೆ ಭಾರತ
ಮಾತುಕತೆ ನಡೆಸುತ್ತಿದೆ.

ಚಿನ್ನದ ಮೊಟ್ಟೆಯ ಕೋಳಿ ಕತೆ

ನಮ್ಮ ದೇಶ ಜಗತ್ತಿನಲ್ಲೇ 3 ನೇ ಅತಿದೊಡ್ಡ ತೈಲ ಆಮದುದಾರ ದೇಶ. ಹೀಗಾಗಿ ಅಂತಾರಾಷ್ಟ್ರೀಯ ಕಚ್ಚಾತೈಲದ ಮಾರುಕಟ್ಟೆಯಲ್ಲಿ ಭಾರತದ ಬೇಡಿಕೆಗೆ ಮಹತ್ವದ ಸ್ಥಾನವಿದೆ. ಭಾರತದ ತೈಲ ಖರೀದಿಯಿಂದಾಗಿ ಅಲ್ಲಿ ಆಮದು ಹಾಗೂ ಪೂರೈಕೆಯ ಅಂಕಿಅಂಶಗಳು ಏರಿಳಿತವಾಗುತ್ತವೆ. ಭಾರತವೇನಾದರೂ ಪರ್ಯಾಯ ತೈಲಮೂಲ ಹುಡುಕಿಕೊಂಡರೆ ಒಪೆಕ್ ಸಂಕಷ್ಟಕ್ಕೆ ಸಿಲುಕುತ್ತದೆ.

ಆಗ ತೈಲೋತ್ಪಾದಕ ರಾಷ್ಟ್ರಗಳಿಗೆ ನಷ್ಟವಾಗಿ, ತೈಲ ಬೆಲೆಯೂ ಕುಸಿಯಬಹುದು. ಆದ್ದರಿಂದಲೇ ಪ್ರಧಾನಿ ಮೋದಿ ಮೊನ್ನೆಯ ತೈಲೋದ್ಯಮಿಗಳ ಸಭೆಯಲ್ಲಿ ಚಿನ್ನದ ಮೊಟ್ಟೆಯಿಡುವ ಕೋಳಿಯ ಕತೆ ಹೇಳಿ ಒಪೆಕ್‌ಗೆ ಎಚ್ಚರಿಕೆ ನೀಡಿದ್ದಾರೆ. ಕೊಲ್ಲಿ ರಾಷ್ಟ್ರಗಳಿಗೆ ಭಾರತ ಚಿನ್ನದ ಮೊಟ್ಟೆ ಇಡುವ ಕೋಳಿ. ಹಾಗಂತ ನೀವು ಅತಿಯಾಗಿ ನಮ್ಮನ್ನು ಶೋಷಿಸಿದರೆ ಕೋಳಿಯನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದು ಸೌದಿ ಅರೇಬಿಯಾದ ಇಂಧನ ಸಚಿವರ ಸಮ್ಮುಖದಲ್ಲೇ ಎಚ್ಚರಿಸಿದ್ದಾರೆ.

ಹಿಂದೆ ವಿಫಲವಾಗಿದ್ದು ಈಗ ಫಲ ಕೊಡುತ್ತಾ?

ಹಿಂದೆ 2013 ರಲ್ಲೂ ಒಮ್ಮೆ ರುಪಾಯಿ ಮೌಲ್ಯ ದೊಡ್ಡ ಪ್ರಮಾಣದಲ್ಲಿ ಕುಸಿದಾಗ ಭಾರತ ಇದೇ ಮಾರ್ಗದಲ್ಲಿ ಪ್ರಯತ್ನ ಮಾಡಿತ್ತು. ರುಪಾಯಿಯಲ್ಲೇ ಹಣ ಸ್ವೀಕರಿಸುವಂತೆ ತನ್ನ ವ್ಯಾಪಾರಿ ಸ್ನೇಹಿತ ರಾಷ್ಟ್ರಗಳನ್ನು ಭಾರತ ಕೇಳಿತ್ತು. ಆದರೆ ಅದು ಫಲ ನೀಡಿರಲಿಲ್ಲ. ಇನ್ನು, ತೈಲೋತ್ಪಾದಕ ದೇಶಗಳು ಏಷ್ಯಾದ ದೇಶಗಳಿಗೆಂದೇ ಪ್ರತ್ಯೇಕ ತೈಲ ಬೆಲೆ ನಿಗದಿಪಡಿಸುತ್ತವೆ. ಇದನ್ನು ಏಷ್ಯನ್ ಪ್ರೀಮಿಯಂ ಎನ್ನುತ್ತಾರೆ.

ಇದು ಬೇರೆ ದೇಶಗಳಿಗೆ ಮಾರಾಟ ಮಾಡುವ ಕಚ್ಚಾತೈಲದ ಬೆಲೆಗಿಂತ ಹೆಚ್ಚಿರುತ್ತದೆ. ಇದನ್ನು ಕಡಿಮೆ ಮಾಡಬೇಕೆಂದು ಭಾರತ ಕೇಳಿತ್ತು. ಅದಕ್ಕೂ ತೈಲೋತ್ಪಾದಕ ದೇಶಗಳು ಒಪ್ಪಿರಲಿಲ್ಲ. ಇನ್ನು, ತೈಲ ರಫ್ತು ಮಾಡುವ ದೇಶಗಳು ಹೇಗೆ ಒಕ್ಕೂಟ ರಚಿಸಿಕೊಂಡಿವೆಯೋ ಹಾಗೆಯೇ ತೈಲ ಆಮದು ಮಾಡಿಕೊಳ್ಳುವ ಪ್ರಮುಖ ರಾಷ್ಟ್ರಗಳು ಕೂಡ ಒಕ್ಕೂಟ ರಚಿಸಿಕೊಳ್ಳಬೇಕೆಂದು ಮೋದಿ ಪ್ರಯತ್ನ ಆರಂಭಿಸಿದ್ದಾರೆ. ಆಗ
ಎಲ್ಲರೂ ಒಟ್ಟಾಗಿ ಒಪೆಕ್ ರಾಷ್ಟ್ರಗಳ ಜೊತೆ ಚೌಕಾಸಿ ಮಾಡಬಹುದು. ವಾಸ್ತವವಾಗಿ ಈ ಪ್ರಯತ್ನ ಕೂಡ 2005 ರಲ್ಲಿ ಒಮ್ಮೆ ವಿಫಲವಾಗಿದೆ.

ಈ ಬಾರಿ ಯಶಸ್ವಿಯಾಗುತ್ತದೆಯೇ?

ಕಚ್ಚಾತೈಲ ಬೆಲೆ ಇಳಿಕೆಗೆ ಮೋದಿ ಹಲವಾರು ಪ್ರಯತ್ನಗಳನ್ನೇನೋ ಆರಂಭಿಸಿದ್ದಾರೆ. ಅವು ಫಲ ಕೊಟ್ಟರೆ ಮುಂದಿನ ಚುನಾವಣೆ ಎದುರಿಸಲು ಬಿಜೆಪಿಗೂ ಸುಲಭ, ಮುಂದಿನ ದಿನಗಳನ್ನು ಎದುರಿಸಲು ಜನರಿಗೂ ಅನುಕೂಲ. 

- ಸುಹಾಸ್ ಹೆಗಡೆ, ಬೆಂಗಳೂರು 

Follow Us:
Download App:
  • android
  • ios