ನವದೆಹಲಿ: ಬೆಂಗಳೂರಿನ ಪ್ರತಿಷ್ಠೆ ಎಂದೇ ಹೇಳಲಾಗಿರುವ 2019ನೇ ಸಾಲಿನ ಏರೋ ಇಂಡಿಯಾ ಶೋ ಫೆಬ್ರವರಿ 20-24ರವರೆಗೂ ನಡೆಯಲಿದೆ. ಏರೋ ಇಂಡಿಯಾ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡುವ ಸಾಧ್ಯತೆಯಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್‌ ಅಮನ್‌ ಆನಂದ್‌ ಅವರು ಹೇಳಿದ್ದಾರೆ. ಅಲ್ಲದೆ, ಯುದ್ಧ ವಿಮಾನಗಳ ಪ್ರದರ್ಶನದಲ್ಲಿ ಅಮೆರಿಕದಲ್ಲಿರುವ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಅವರು ಪಾಲ್ಗೊಳ್ಳುತ್ತಿದ್ದಾರೆ.

ಈ ಬಗ್ಗೆ ಶುಕ್ರವಾರ ಮಾತನಾಡಿದ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್‌ ಅಮನ್‌ ಆನಂದ್‌ ಅವರು, ‘ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಯಲಿರುವ ಏರೋ ಪ್ರದರ್ಶನದ ಹಾಲಿ ವರ್ಷದ ಶೋನ ಎರಡನೇ ದಿನ ಸ್ಟಾರ್ಟ್‌ ಅಪ್‌ ಡೇ ಏರ್ಪಡಿಸಲಾಗುತ್ತದೆ. 

ಅಲ್ಲದೆ, ಶೋನ ನಾಲ್ಕನೇ ದಿನ ಮಹಿಳೆಯರ ದಿನಾಚರಣೆ ಆಚರಣೆ ಹಮ್ಮಿಕೊಳ್ಳಲಾಗಿದ್ದು, ಅಂದಿನ ದಿನ ಅಮೆರಿಕದಲ್ಲಿರುವ ಭಾರತದ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಅವರು ಆಗಮಿಸಲಿದ್ದಾರೆ. ಅಲ್ಲದೆ, ವಿಮಾನಯಾನ ಕ್ಷೇತ್ರದಲ್ಲಿ ಸಾಧನೆಗೈದ ಹಲವು ಮಹಿಳೆಯರು ಪಾಲ್ಗೊಳ್ಳಲಿದ್ದಾರೆ’ ಎಂದರು.