ಇಂಡಿಯಾ ಟುಡೇ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮೋದಿಯವರು ನೋಟ್ ಅಪಮೌಲ್ಯ ನಿರ್ಧಾರದ ಉದ್ದೇಶಗಳ ಬಗ್ಗೆ ವಿವರಣೆ ನೀಡಿದ್ದಾರೆ.
ನವದೆಹಲಿ(ಡಿ. 30): ನೋಟ್ ಅಪಮೌಲ್ಯ ನಿರ್ಧಾರವಾದ ನ.8ರ ನಂತರ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಟೀವಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಪ್ರಧಾನಿ ಮಾತನಾಡುತ್ತಿಲ್ಲ ಎಂದು ದೂರುತ್ತಿದ್ದ ಟೀಕಾಕಾರರ ಬಾಯಿ ಮುಚ್ಚಿಸಲು ಮೋದಿ ಯತ್ನಿಸಿದ್ದಾರೆ. ಇಂಡಿಯಾ ಟುಡೇ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮೋದಿಯವರು ನೋಟ್ ಅಪಮೌಲ್ಯ ನಿರ್ಧಾರದ ಉದ್ದೇಶಗಳ ಬಗ್ಗೆ ವಿವರಣೆ ನೀಡಿದ್ದಾರೆ. ಇಂಡಿಯಾ ಟುಡೇ ಗ್ರೂಪ್'ನ ಸಂಪಾದಕೀಯ ನಿರ್ದೇಶದ ರಾಜ್ ಚೆಂಗಪ್ಪ ನಡೆಸಿದ ಅವರ ಸಂದರ್ಶನದ ಕೆಲ ಪ್ರಮುಖ ಅಂಶಗಳು ಈ ಕೆಳಕಂಡಂತಿದೆ.
1) ಭಾರತವು ಮುಂದುವರಿದ ರಾಷ್ಟ್ರ ಹಾಗೂ ಜಾಗತಿಕ ನಾಯಕನಾಗುವ ಒಂದು ಅಪೂರ್ವ ಘಳಿಗೆಯ ಸನಿಹದಲ್ಲಿದೆ. ಎಲ್ಲಾ ಕೊಳಕುಗಳೂ ನಾಶವಾಗಿ ಸ್ವಚ್ಛವಾದ ಭಾರತ ನಿರ್ಮಾಣವಾಗುವ ಸಂದರ್ಭ ಬಂದಿದೆ.
2) ನೋಟ್ ಬ್ಯಾನ್ ಆದ ನಂತರ ಮಾಡಲಾದ ಹಲವು ನೀತಿ ಬದಲಾವಣೆಗಳ ವಿಚಾರದಲ್ಲಿ ಒಂದು ಸ್ಪಷ್ಟನೆ ನೀಡಬಯಸುತ್ತೇನೆ. ನೀತಿ ಹಾಗೂ ರಣನೀತಿ ಎಂಬುದು ಬೇರೆ ಬೇರೆ, ಎರಡನ್ನೂ ಒಂದೇ ತಕ್ಕಡಿಯಲ್ಲಿ ತೂಗಬಾರದು. ನೋಟು ಅಪಮೌಲ್ಯದ ನಿರ್ಧಾರವು ನಮ್ಮ 'ನೀತಿ'ಯಾಗಿದ್ದು, ಅದು ಬಹಳ ಸ್ಪಷ್ಟವಾಗಿದೆ. ಆದರೆ, ರಣನೀತಿಯ ಕಲ್ಪನೆಯೇ ಬೇರೆ. ಶತ್ರುಗಳ ಯೋಚನೆಯನ್ನು ಮೀರುವಂತೆ ನಮ್ಮ ನಿರ್ಧಾರವನ್ನು ಬದಲಿಸುವುದು ರಣನೀತಿಯಾಗಿರುತ್ತದೆ.
3) ಬಹಳ ಸದುದ್ದೇಶದಿಂದ ಹಾಗೂ ಸ್ಪಷ್ಟ ವಿಚಾರದಿಂದ ಕೆಲಸ ಮಾಡಿದರೆ ಅದರ ಪರಿಣಾಮ ಬಹಳ ಸ್ಪಷ್ಟವಾಗಿಯೇ ಇರುತ್ತದೆ. ನನ್ನ ಟೀಕಾಕಾರರು ಏನೇ ಹೇಳಲಿ, ಈ ನಿರ್ಧಾರಗಳಿಂದ ನನಗೆ ಯಾವುದೇ ವೈಯಕ್ತಿಕ ಲಾಭವಿಲ್ಲ. ಸಮಾಜದ ಒಳಿತಿಗಾಗಿ ಇದೆಲ್ಲಾ ಮಾಡಿದ್ದೇನೆನಿಸುತ್ತದೆ.
4) ನೋಟ್ ಅಪಮೌಲ್ಯದ ನಿರ್ಧಾರ ಎಷ್ಟು ಅಗಾಧವಾಗಿದೆ ಎಂದರೆ ನಮ್ಮ ಅತ್ಯುತ್ತಮ ಅರ್ಥಶಾಸ್ತ್ರಜ್ಞರೂ ಕೂಡ ತಮ್ಮ ಲೆಕ್ಕಾಚಾರಗಳಲ್ಲಿ ಗೊಂದಲಗೊಂಡಿದ್ದಾರೆ. ಆದರೆ, ಭಾರತದ ನೂರಿಪ್ಪತ್ತೈದು ಕೋಟಿ ನಾಗರಿಕರು ಮಾತ್ರ ಎಂಥದ್ದೇ ವೈಯಕ್ತಿಕ ತೊಂದರೆಗಳು ಎದುರಾದರೂ ಮನಃಪೂರ್ವಕವಾಗಿ ಈ ನಿರ್ಧಾರವನ್ನು ಸ್ವಾಗತಿಸಿ ಬೆಂಬಲಿಸಿದ್ದಾರೆ. ಜನಸಾಮಾನ್ಯರಿಗೆ ಈ ನಿರ್ಧಾರದ ಮಹತ್ವ ಚೆನ್ನಾಗಿ ಅರಿವಾಗಿದೆ.
5) ನಮ್ಮ ಕೆಲ ವಿಪಕ್ಷಗಳು, ಅದರಲ್ಲೂ ಕಾಂಗ್ರೆಸ್ ನಾಯಕರು ಅತೀವ ಹತಾಶರಾಗಿರುವುದನ್ನು ಕಂಡು ಮರುಗಬೇಕನಿಸುತ್ತದೆ. ನಾನು ರಾಜಕೀಯ ಲಾಭಕ್ಕೋಸ್ಕರ ಈ ನಿರ್ಧಾರ ಕೈಗೊಂಡೆ ಎಂದವರು ಒಮ್ಮೆ ಹೇಳಿದರೆ, ಜನರಿಗೆ ತೊಂದರೆಯಾಗಿದೆ ಎಂದು ಮಗದೊಮ್ಮೆ ಹೇಳುತ್ತಾರೆ. ಈ ವೈರುದ್ಧ್ಯ ಹೇಗೆ ಸಾಧ್ಯ?
6) ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಸರಕಾರ ಸಾಕಷ್ಟು ಪ್ರಯತ್ನಿಸಿತು. ಸಂಸತ್'ನ ಎರಡೂ ಸದನಗಳಲ್ಲಿ ಮಾತನಾಡಲು ನಾನು ಉತ್ಸುಕನಾಗಿದ್ದೆ. ಆದರೆ ಸದನ ಸುಗಮ ರೀತಿಯಲ್ಲಿ ನಿರ್ವಹಿಸದೇ ಇರಲು ಕಾಂಗ್ರೆಸ್ ಚಿತಾವಣೆ ನಡೆಸಿತು.
7) ಭ್ರಷ್ಟಾಚಾರದ ಬಗ್ಗೆ ಏನೇ ಮಾತನಾಡಿದರೂ ಅದನ್ನು ರಾಜಕಾರಣಕ್ಕೆ ಇಳಿಸುವ ಧೂರ್ತತನ ಅಸ್ತಿತ್ವದಲ್ಲಿದೆ. ಇದರಿಂದ ಭ್ರಷ್ಟರು ಬಚಾವಾಗಲು ಅವಕಾಶ ಸಿಕ್ಕಂತಾಗುತ್ತದೆ. ಆದರೆ, ರಾಜಕಾರಣದಲ್ಲಿ ಭ್ರಷ್ಟಾಚಾರವನ್ನು ನಾನು ಬೆಂಬಲಿಸುತ್ತೇನೆಂದು ಇದರರ್ಥವಲ್ಲ.
8) ಬಹು ಚುನಾವಣೆಗಳಿರುವ ನಮ್ಮ ಈಗಿನ ವ್ಯವಸ್ಥೆಯು ಆರ್ಥಿಕತೆಯ ಮೇಲೆ ಹೇಗೆ ಪೆಟ್ಟುಕೊಡುತ್ತದೆ ಎಂಬುದನ್ನು ನಾನು ಬಾರಿ ಬಾರಿ ಹೇಳಿದ್ದೇನೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳೆಲ್ಲವನ್ನೂ ಏಕಕಾಲದಲ್ಲಿ ಮಾಡಬೇಕೆನ್ನುವ ಚುನಾವಣಾ ಆಯೋಗದ ಪ್ರಸ್ತಾವವನ್ನು ನಾನು ಸ್ವಾಗತಿಸುತ್ತೇನೆ.
9) ನೋಟ್ ಅಪಮೌಲ್ಯ ಕ್ರಮವು "ಅತ್ಯಂತ ಕೆಟ್ಟ ನಿರ್ವಹಣೆ" ಎಂದು ನಾಯಕರೊಬ್ಬರು ಬಣ್ಣಿಸಿದರು. ಇವರು(ಮನಮೋಹನ್ ಸಿಂಗ್) ಆರ್ಥಿಕ ವ್ಯವಹಾರ ಸಚಿವಾಲಯದ ಸಲಹೆಗಾರರಾಗಿ, ಆರ್'ಬಿಐ ಗವರ್ನರ್ ಆಗಿ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿ, ಹಣಕಾಸು ಸಚಿವರಾಗಿ ಹಾಗೂ ಪ್ರಧಾನಿಯಾಗಿ 45 ವರ್ಷಗಳ ಕಾಲ ಭಾರತದ ಆರ್ಥಿಕ ಪಯಣದ ಸೂತ್ರದಾರನ ಜಾಗದಲ್ಲಿದ್ದರು. ಇಷ್ಟಾದರೂ ನಮ್ಮ ಸಮಾಜದ ಬಹುಭಾಗದ ಜನರು ಬಡತನದಲ್ಲಿ ಬದುಕುವಂತಾಗಿರುವುದು ವಿಪರ್ಯಾಸವೇ ಸರಿ.
10) ಕಳೆದ ಎರಡೂವರೆ ವರ್ಷದಲ್ಲಿ ನನ್ನ ಸರಕಾರದ ಯೋಜನೆಗಳು ಹಾಗೂ ಆದ್ಯತೆಗಳನ್ನು ನಿಷ್ಪಕ್ಷ ರೀತಿಯಲ್ಲಿ ವಿಮರ್ಶಿಸಿದರೆ ಬಡವರು, ಶೋಷಿತರು, ನಿರ್ಗತಿಕರಿಗೆ ಒತ್ತು ನೀಡಿರುವುದು ಕಂಡುಬರುತ್ತದೆ.
