ಉಪಚುನಾವಣೆ ಫಲಿತಾಂಶ: ಇಂದಿರಾ ನೆನಪಿಸಿದ ಮೋದಿ ಸ್ಥಿತಿ..!

PM Narendra Modi Facing a Situation Like Indira Gandhi in 1977
Highlights

ದೇಶದ 10 ರಾಜ್ಯಗಳಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರತ್ತ ವಿಪಕ್ಷಗಳು ಮತ್ತು ರಾಜಕೀಯ ವಿಶ್ಲೇಷಕರು ಹಲವು ಬಾಣಗಳನ್ನು ಬಿಡುತ್ತಿದ್ದಾರೆ.

ನವದೆಹಲಿ(ಮೇ 31): ದೇಶದ 10 ರಾಜ್ಯಗಳಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರತ್ತ ವಿಪಕ್ಷಗಳು ಮತ್ತು ರಾಜಕೀಯ ವಿಶ್ಲೇಷಕರು ಹಲವು ಬಾಣಗಳನ್ನು ಬಿಡುತ್ತಿದ್ದಾರೆ.

ಪ್ರಮುಖವಾಗಿ 2014ರ ಲೋಕಸಭೆ ಚುನಾವಣೆ ಹಾಗೂ ಅದರ ನಂತರ, ನರೇಂದ್ರ ಮೋದಿ ದೇಶದ ಜನತೆಯ ಏಕೈಕ ನೇತಾರರಾಗಿ ಬೆಳೆದು ಬಂದ ಪರಿ ಮತ್ತು ಸದ್ಯದ ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಕರು ಗಣನೆಗೆ ತೆಗೆದುಕೊಂಡು ತುಲನೆ ಮಾಡುತ್ತಿದ್ದಾರೆ. ಮೋದಿ ನೇತೃತ್ವದಲ್ಲಿ ಇಡೀ ದೇಶವೇ ಕೇಸರಿಮಯವಾಗುತ್ತಿರುವ ಈ ಸಂದರ್ಭದಲ್ಲಿ ಅಲ್ಲಲ್ಲಿ ಕೆಲವು ವಿರೋಧದ ಧ್ವನಿಗಳೂ ಕೇಳುತ್ತಿರುವುದು ಹಲವು ಅಂತೆ ಕಂತೆಗಳಿಗೆ ಸ್ಥಾನ ನೀಡಿದೆ.

2014ರಲ್ಲಿ ನರೇಂದ್ರ ಮೋದಿ ಪ್ರಧಾನಿ ಆದೊಡನೆ ದೇಶದಲ್ಲಿ ಹೊಸ ರಾಜಕೀಯ ಗಾಳಿ ಬೀಸತೊಡಗಿತು. ಇದಕ್ಕೂ ಮೊದಲು ಕೇಂದ್ರದಲ್ಲಿ ಮತ್ತು ಬಹುಥೇಕ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮೋದಿ ಎಂಬ ಸುನಾಮಿ ಮುಂದೆ ಕೊಚ್ಚಿಕೊಂಡು ಹೋಗಿತ್ತು. ಲೋಕಸಭೆ ಚುನಾವಣೆ ಗುಂಗಿನಲ್ಲೇ ಇದ್ದ ಜನ ನಂತರ ನಡೆದ ಎಲ್ಲಾ ವಿಧಾನಸಭೆ[ಪಂಜಾಬ್ ಹೊರತುಪಡಿಸಿ]ಚುನಾವಣೆಯಲ್ಲಿ ಮೋದಿ ಗೆ ಜೈ ಎಂದಿದ್ದರು.

ಮೋದಿ ಅಲೆಯಿಂದಾಗಿ ಒಂದೊಂದೇ ರಾಜ್ಯ ಕಳೆದುಕೊಳ್ಳುತ್ತಾ ಬಂದ ಕಾಂಗ್ರೆಸ್ ಪಕ್ಷಕ್ಕೆ ಪಂಜಾಬ್ ವಿಧಾನಸಭೆ ಚುನಾವಣೆ ತುಸು ನೆಮ್ಮದಿ ನೀಡಿತ್ತು. ಆ ನಂತರ ಬಂದ ಕರ್ನಾಟಕ ವಿಧಾನಸಭೆ ಚುನಾವಣೆ ಇಡೀ ದೇಶದ ರಾಜಕೀಯ ದಿಕ್ಕನ್ನು ಸೂಚಿಸುವ ಮಹತ್ವ ಪಡೆದುಕೊಂಡಿತ್ತು. ಮೋದಿ ಅಬ್ಬರದಿಂದ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತಾದರೂ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಲಿಲ್ಲ.

ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಾಶಸ್ವಿಯಾದ ಕಾಂಗ್ರೆಸ್, ಜೆಡಿಎಸ್ ಜೊತೆ ಕೈ ಜೋಡಿಸಿ ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ನೇತೃತ್ವದ ತೃತೀಯ ರಂಗ ರಚನೆ ಸಾಧ್ಯತೆಗೆ ಇಂಬು ನೀಡಿತು. ಈ ಪ್ರಯತ್ನ ದೇಶಾದ್ಯಂತ ಯಶಸ್ವಿಗೊಳಿಸುವ ಪ್ರಯತ್ನಗಳೂ ನಡೆಯುತ್ತಿವೆ. ಒಂದು ವೇಳೆ ಈ ಪ್ರಯತ್ನ ಯಶಸ್ವಿಯಾದಲ್ಲಿ ಪ್ರಾದೇಶಿಕ ಪಕ್ಷಗಳು ಮತ್ತೆ ಮಹತ್ವ ಪಡೆದುಕೊಳ್ಳುವುದು ಶತಸಿದ್ದ.   

ಸದ್ಯದ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ, ಲೋಕಸಭೆ ಮತ್ತು ವಿಧಾನಸಭೆಗೆ ಜರುಗಿದ ಉಪಚುನಾವಣೆ ಮತ್ತು ಮುಂಬರುವ ರಾಜಸ್ಥಾನ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಅವರ ರಾಜಕೀಯ ಭವಿಷ್ಯದ ಕುರಿತು ಚರ್ಚೆ ಪ್ರಾರಂಭವಾಗಿದೆ. ವಿಶೇಷವಾಗಿ 1977ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಎದುರಿಸಿದ ಪರಿಸ್ಥಿತಿಯನ್ನೇ ಮೋದಿ ಎದುರಿಸಲಿದ್ದಾರಾ ಎಂಬುದರ ಕುರಿತು ಬಿಸಿಬಿಸಿ ಚರ್ಚೆ ಶುರುವಾಗಿದೆ.

ಪ್ರಮುಖವಾಗಿ ಇಂದಿನ ಕೈರಾನಾ ಲೋಕಸಭೆ ಉಪಚುನಾವಣೆ ಫಲಿತಾಂಶ ದೇಶಕ್ಕೆ ಬೇರೊಂದು ಸಂದೇಶ ಕಳುಹಿಸಿದೆ ಎನ್ನುತ್ತಾರೆ ತಜ್ಞರು. ಕಾರಣ ಬಿಜೆಪಿಯ ಬಿಗಿ ಹಿಡಿತವಿರುವ ಕ್ಷೇತ್ರಗಳಲ್ಲಿ ಕೈರಾನಾ ಕೂಡ ಒಂದಾಗಿತ್ತು. ಅಲ್ಲದೇ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ[ಮೋದಿ] ವಿರುದ್ದ ಎಲ್ಲ ವಿಪಕ್ಷಗಳು ಒಂದಾಗಿದ್ದು ಈ ಉಪಚುನಾವಣೆಯ ವಿಶೇಷವಾಗಿತ್ತು. ಎಸ್ ಪಿ, ಬಿಎಸ್ ಪಿ, ಆರ್ ಎಲ್ ಡಿ, ಕಾಂಗ್ರೆಸ್ ಹೀಗೆ ಬಹುತೇಕ ಪ್ರಾದೇಶಿಕ ಮತ್ತು ರಾಷ್ಟ್ರೀಯ ಪಕ್ಷಗಳು ಮೋದಿ ವಿರುದ್ದ ತೊಡೆ ತಟ್ಟಿ ಯಶಸ್ವಿಯಾಗಿವೆ.

ಈ ಫಲಿತಾಂಶ ೧೯೭೭ ರ ಇಂದಿರಾ ಗಾಂಧಿ ಅವರ ಪರಿಸ್ಥಿತಿ ನೆನಪಿಸುತ್ತಿದೆ. ಅಂದು ಕೂಡ ಇಂದಿರಾ ಗಾಂಧಿ ಅವರನ್ನು ಮಣಿಸಲು ಇದೇ ರೀತಿ ಎಲ್ಲಾ ವಿಪಕ್ಷಗಳು ಒಂದಾಗಿದ್ದನ್ನು ಸ್ಮರಿಸಬಹುದಾಗಿದೆ. ಒಟ್ಟಿನಲ್ಲಿ ಇಂದಿನ ಉಪಚುನಾವಣೆ ಫಲಿತಾಂಶ ಮತ್ತು ಪ್ರಸಕ್ತ ರಾಜಕೀಯ ಸನ್ನಿವೇಶ 2019ರಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಅಷ್ಟು ಸುಲಭದ ಯುದ್ದವಾಗಿರುವುದಿಲ್ಲ ಎಂಬುದು ಸ್ಪಷ್ಟಪಡಿಸಿದೆ.      

loader