ಗುರು ಹಾಕಿರುವ ಮಾರ್ಗದಲ್ಲಿಯೇ ಸಾಗುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಇದೀಗ ಗುರು ಅಟಲ್ ಬಿಹಾರಿ ವಾಜಪೇಯಿ ಅವರನ್ನು ಕಳೆದುಕೊಂಡು, ಅನಾಥರಾದಂತೆ ಭಾವಿಸುತ್ತಿದ್ದಾರೆ. ನೆಚ್ಚಿನ ಗುರುವಿಗೆ ಶಿಷ್ಯ ಭಾವಪೂರ್ಣ ವಿದಾಯ ಹೇಳಿದ್ದು ಹೀಗೆ.

ನರೇಂದ್ರ ಮೋದಿ, ಪ್ರಧಾನಿ

ಪ್ರಕ್ಷುಬ್ಧ ಹಾಗೂ ಅಡೆತಡೆಯ ಸಂದರ್ಭ ಎದುರಾದಾಗ ತನ್ನ ನೈತಿಕ ದಿಕ್ಸೂಚಿ, ಮಾರ್ಗದರ್ಶಕ ಶಕ್ತಿಯಾಗಬಲ್ಲ, ಜನರಿಗೆ ದೂರದೃಷ್ಟಿ, ಹೊಂದಾಣಿಕೆಯ ಹಾಗೂ ನಿರ್ದೇಶನಗಳನ್ನು ನೀಡಬಲ್ಲ ನಾಯಕನೊಬ್ಬನನ್ನು ಹೊಂದಲು ಯಾವುದೇ ದೇಶ ಬಯಸುತ್ತದೆ. ಅಂತಹ ಸನ್ನಿವೇಶ ಶತಮಾನದ ತಿರುವಿನಲ್ಲಿ ಸೃಷ್ಟಿಯಾದಾಗ ಭಾರತವು ಉತ್ಸಾಹ, ಅಂತಃಕರಣ ಹಾಗೂ ಉತ್ತಮ ಮನಸ್ಸು ಹೊಂದಿದ ಅಟಲ್‌ ಬಿಹಾರಿ ವಾಜಪೇಯಿ ಅವರನ್ನು ಕಂಡುಕೊಂಡಿತು.

ಅವರನ್ನು ಬಲ್ಲ ನಮ್ಮಗಳ ಪ್ರಕಾರ, ಅವರೊಬ್ಬ ಅತಿ ಅಪರೂಪದ ಮಾನವ. ತಮ್ಮನ್ನು ಭೇಟಿ ಮಾಡಿದ ಎಲ್ಲರ ಮನಮುಟ್ಟಿದ ಹಾಗೂ ಎಲ್ಲರಿಗೂ ಪ್ರೇರಣೆಯಾದವರು. ಅವರು ದಯಾಮಯಿ ಆಗಿದ್ದರು. ಉದಾರ ಉತ್ಸಾಹ ಹೊಂದಿದ್ದರು. ಅಳತೆಗೆ ನಿಲುಕದ ಮಮಕಾರ ಹೊಂದಿದ್ದರು. ಬಹಳ ಕರುಣಾಮಯಿ. ಬೇರೆಯವರ ಬಗ್ಗೆ ಅಪಾರ ಗೌರವ ಹೊಂದಿರುತ್ತಿದ್ದರು. ಅಪರೂಪದ ಹಾಸ್ಯಪ್ರಜ್ಞೆ ಹೊಂದಿದ್ದರು. ತಮ್ಮನ್ನು ತಾವೇ ಹಾಸ್ಯ ಮಾಡಿಕೊಳ್ಳುತ್ತಿದ್ದರು.

ಭಾಷಣದಲ್ಲಿ ಅವರಿಗೆ ಸರಿಸಮನಾದವರು ಇರಲಿಲ್ಲ. ಯಾರಿಗೂ ನೋಯಿಸದ ಹಾಸ್ಯದ ಜತೆಗೇ ಉದಾತ್ತ ದೂರದೃಷ್ಟಿಯತ್ತ ಹೊರಳಿಕೊಳ್ಳುವ ಚಾಕಚಕ್ಯತೆ ಹೊಂದಿದ್ದರು. ಸ್ವಾಭಾವಿಕವಾಗಿ ಜನರ ಜತೆ ಸಂಪರ್ಕ ಸಾಧಿಸುವ ವಿರಳ ಸಾಮರ್ಥ್ಯ ಹೊಂದಿದ್ದರು. ತೀಕ್ಷ$್ಣ ಗ್ರಹಣ ಶಕ್ತಿ ಹೊಂದಿದ್ದರು. ಸಂಕೀರ್ಣ ವಿಷಯಗಳು, ಸಂವಾದಗಳು ಅಥವಾ ಪ್ರಶ್ನೆಗಳನ್ನು ಒಂದೇ ವಾಕ್ಯ ಅಥವಾ ಪ್ರಶ್ನೆಯಲ್ಲಿ ಮಾಡುತ್ತಿದ್ದರು.

ಆದರ್ಶಪ್ರಾಯ ಸಾಮಾನ್ಯ ಹೊಂದಿದ ಕುಟುಂಬದಲ್ಲಿ ಜನಿಸಿದ ಅವರು ಮಧ್ಯಪ್ರದೇಶದ ಒಂದು ಸಣ್ಣ ಪಟ್ಟಣದವರು. ಜನಸಂಘದ ಸಾಮಾನ್ಯ ಕಾರ್ಯಕರ್ತನಾಗಿ ಜೀವನ ಆರಂಭಿಸಿದ ಅವರು, ಸ್ವತಂತ್ರ ಭಾರತದಲ್ಲಿ ಬಿಜೆಪಿ ಎಂಬ ಏಕೈಕ ನೈಜ ರಾಷ್ಟ್ರ ಮಟ್ಟದ ಪಕ್ಷವೊಂದು ಸ್ಥಾಪನೆಯಾಗುವಂತೆ ಮಾಡಿದರು. ಶ್ಯಾಮಪ್ರಸಾದ ಮುಖರ್ಜಿ ಹಾಗೂ ಪಂಡಿತ್‌ ದೀನ್‌ದಯಾಳ್‌ ಉಪಾಧ್ಯಾಯ ಅವರ ನಿಧನದ ನಂತರ ಸಂಘಟನೆ ಕೆಲಸದ ಹೊಣೆಗಾರಿಕೆ ಹೊತ್ತುಕೊಂಡಿದ್ದರು.

ನಾಲ್ಕು ದಶಕಗಳ ಸಂಸದೀಯ ನಾಯಕತ್ವ, ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ (ದೆಹಲಿಯ ರಾಮಲೀಲಾ ಮೈದಾನದಲ್ಲಿ ಅವರು ಮಾಡುತ್ತಿದ್ದ ಭಾಷಣ ದೇಶದ ಬೋರ್ಗರೆತವಾಗಿದ್ದನ್ನು ಯಾರು ಮರೆಯಲು ಸಾಧ್ಯ?)ದ ಮೂಲಕ ಅವರು ಭಾರತದ ಪ್ರಜಾಸತ್ತೆಯ ಚೈತನ್ಯವನ್ನು ವ್ಯಾಖ್ಯಾನಿಸಿದರು. ತಮ್ಮ ರಾಜಕೀಯ ನಂಬಿಕೆಗಳಿಗೆ ಅವರು ಅಚಲರಾಗಿದ್ದರು. ಆದರೆ ಬೇರೆಯವರ ಅಭಿಪ್ರಾಯಗಳಿಗೆ ಆಸ್ಪದ ನೀಡುತ್ತಿದ್ದರು. ಗೌರವಿಸುತ್ತಿದ್ದರು. ಸಂಸತ್ತಿನ ಚರ್ಚೆಗೆ ಒಂದು ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟರು. ಸರಳತೆ ಹಾಗೂ ದೇಶಭಕ್ತಿ, ಗೌರವದ ತುಡಿತ, ಕುರ್ಚಿಗೆ ಗಂಟುಬೀಳದ ವೈಯಕ್ತಿಕ ಭಾವದ ಮೂಲಕ ಅವರು ಯುವಕರ ದೇಶಕ್ಕೆ ಸ್ಪೂರ್ತಿಯಾಗಿದ್ದಾರೆ.

"

ದೇಶದಲ್ಲಿನ ರಾಜಕೀಯ ಅಸ್ಥಿರತೆ ಹಾಗೂ ಜಾಗತಿಕವಾಗಿ ಇದ್ದ ಅನಿಶ್ಚಿತತೆಗಳು 1990ರ ಮಧ್ಯಭಾಗದಲ್ಲಿ ಶೈಶವಾಸ್ಥೆಯಲ್ಲಿದ್ದ ಆರ್ಥಿಕ ಸುಧಾರಣೆಗೆ ಹಳಿ ತಪ್ಪಿಸುವ ಬೆದರಿಕೆ ತಂದೊಡ್ಡಿದಾಗ ಅಟಲ್‌ ಅವರು ಸಂಕಷ್ಟದಿಂದ ಆರ್ಥಿಕತೆಯನ್ನು ಪಾರು ಮಾಡಿದರು. ಕಳೆದ ಎರಡು ದಶಕಗಳಿಂದ ನಾವು ಅನುಭವಿಸುತ್ತಿರುವ ಆರ್ಥಿಕ ಯಶಸ್ಸಿನ ಬೀಜಗಳನ್ನು ಅವರು ಬಿತ್ತಿದ್ದರು. ಅವರ ಪ್ರಕಾರ ಅಭಿವೃದ್ಧಿ ಎಂದರೆ, ದುರ್ಬಲರನ್ನು ಸಬಲರನ್ನಾಗಿಸುವ ಹಾಗೂ ಕಡೆಗಣಿಸಲ್ಪಟ್ಟವರನ್ನು ಮುಖ್ಯವಾಹಿನಿಗೆ ತರುವುದಾಗಿತ್ತು. ಆ ದೂರದೃಷ್ಟಿಯೇ ನಮ್ಮ ಸರ್ಕಾರದ ನೀತಿಗಳನ್ನು ಮುನ್ನಡೆಸಿಕೊಂಡು ಹೋಗುತ್ತಿದೆ.

21ನೇ ಶತಮಾನದಲ್ಲಿ ಜಾಗತಿಕ ನಾಯಕತ್ವದ ಹೊಣೆಗಾರಿಕೆಯನ್ನು ಹೊತ್ತುಕೊಳ್ಳುವಷ್ಟುಭಾರತ ಸಜ್ಜಾಗಿದ್ದಕ್ಕೆ ಬುನಾದಿ ಸಿದ್ಧಪಡಿಸಿದ್ದು ಅಟಲ್‌ಜೀ. ಅವರ ಸರ್ಕಾರದ ಭವಿಷ್ಯದ ಆರ್ಥಿಕ ನೀತಿ ಹಾಗೂ ಸುಧಾರಣೆಗಳು ಹಲವಾರು ಭಾರತೀಯರನ್ನು ಸಂಪದ್ಭರಿತರನ್ನಾಗಿಸಿತು. ಅವರ ಭವಿಷ್ಯದ ಪೀಳಿಗೆಯ ಮೂಲಸೌಕರ್ಯ ಅದರಲ್ಲೂ ವಿಶೇಷವಾಗಿ ರಸ್ತೆ ಹಾಗೂ ದೂರಸಂಪರ್ಕ ನಮ್ಮ ದೇಶದ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕೆ ಕೊಡುಗೆ ನೀಡಿತು.

ಜಗತ್ತಿನಲ್ಲಿ ಭಾರತದ ಸ್ಥಾನವನ್ನು ಅಟಲ್‌ಜೀ ಅವರು ಯಾರೂ ಬದಲಿಸಿದ ರೀತಿ ಬದಲಾವಣೆ ಮಾಡಿದರು. ನಮ್ಮ ದೇಶದ ಹಿಂಜರಿಕೆ, ವಿಶ್ವದ ಪ್ರತಿರೋಧ, ಮೂಲೆಗುಂಪು ಮಾಡುವ ಬೆದರಿಕೆಗಳನ್ನೆಲ್ಲಾ ಬದಿಗೊತ್ತಿ ಭಾರತವನ್ನು ಅಣ್ವಸ್ತ್ರ ಶಕ್ತಿಯುಳ್ಳ ರಾಷ್ಟ್ರವನ್ನಾಗಿ ಮಾಡಿದರು. ಅದು ಅವರು ಹಗುರವಾಗಿ ತೆಗೆದುಕೊಂಡ ನಿರ್ಧಾರವಾಗಿರಲಿಲ್ಲ. ಭಾರತದ ಭದ್ರತೆಗೆ ಸವಾಲುಗಳು ಎದುರಾಗುತ್ತಿದ್ದ ಹಿನ್ನೆಲೆಯಲ್ಲಿ ಸರ್ವೋತ್ಕೃಷ್ಟಮಹತ್ವ ಅರಿತಿದ್ದವರು ಅವರಾಗಿದ್ದರು. ಆ ಕ್ರಮದಿಂದಾಗಿ ಇನ್ನಾವತ್ತಿಗೂ ಭಾರತದ ಭದ್ರತೆ ಭೇದ್ಯಗೊಳಿಸಬಹುದಂತಹದ್ದಲ್ಲ. ರಾಷ್ಟ್ರೀಯ ಹೆಮ್ಮೆಯ ಭಾವ ಹೆಚ್ಚಾಗಿದ್ದ ಆ ಸಂದರ್ಭದಲ್ಲಿ ಅವರ ಧ್ವನಿ ನಿರ್ಬಂಧಿತವಾಗಿತ್ತು. ಹೊಣೆಗಾರಿಕೆಯಿಂದ ಕೂಡಿತ್ತು. ಶಾಂತಿ ಮಾನವನ ವಿವೇಕದ ನುಡಿಯನ್ನು ಇಡೀ ವಿಶ್ವವೇ ಕೇಳಿಸಿಕೊಂಡಿತ್ತು.

ಐದು ದಶಕಗಳ ಕಾಲ ಅಮೆರಿಕದ ಜತೆಗಿನ ಮುನಿಸನ್ನು ಅವರು ಐದೇ ವರ್ಷಗಳಲ್ಲಿ ವ್ಯೂಹಾತ್ಮಕ ಪಾಲುದಾರಿಕೆಯನ್ನಾಗಿ ಪರಿವರ್ತಿಸಿದರು. 2000ನೇ ಇಸ್ವಿಯಲ್ಲಿ ವ್ಯೂಹಾತ್ಮಕ ಪಾಲುದಾರಿಕೆ ಮೂಲಕ ಸೋವಿಯತ್‌ ನಂತರದ ರಷ್ಯಾ ಜತೆಗೆ ಆಳವಾದ ಸ್ನೇಹ ಮೂಡುವಂತೆ ಮಾಡಿದರು. 2001ರ ನವೆಂಬರ್‌ನಲ್ಲಿ ಅವರ ಜತೆ ರಷ್ಯಾಕ್ಕೆ ತೆರಳುವ ಭಾಗ್ಯ ನನ್ನದಾಗಿತ್ತು. ಆ ಸಂದರ್ಭದಲ್ಲಿ ನಾವು ಗುಜರಾತ್‌ ಹಾಗೂ ಅಸ್ಟ್ರಾಖಾನ್‌ ರಾಜ್ಯಗಳ ನಡುವೆ ಸೋದರ ಪ್ರಾಂತ್ಯ ಒಪ್ಪಂದ ಮಾಡಿಕೊಂಡಿದ್ದೆವು.

ಚೀನಾ ಜತೆಗೂ ಶಾಂತಿಗಾಗಿ ಅವರು ದಿಟ್ಟಕ್ರಮವನ್ನು ತೆಗೆದುಕೊಂಡರು. ಗಡಿ ವಿವಾದದ ಮಾತುಕತೆಗಾಗಿ ವಿಶೇಷ ಪ್ರತಿನಿಧಿಗಳ ವ್ಯವಸ್ಥೆಯನ್ನು ಸೃಷ್ಟಿಸಿದರು. ಬೆಳೆಯುತ್ತಿರುವ ಶಕ್ತಿಗಳಾಗಿರುವ ಎರಡು ಪುರಾತನ ನಾಗರಿಕತೆಗಳು ಜತೆಯಾಗಿ ಕೆಲಸ ಮಾಡುವ ಮೂಲಕ ಜಾಗತಿಕ ಭವಿಷ್ಯವನ್ನು ರೂಪುಗೊಳಿಸಬಹುದು ಎಂಬ ಅಟಲ್‌ಜೀ ಅವರ ಬದ್ಧತಿ ನನ್ನ ಆಲೋಚನೆಗೆ ಮಾರ್ಗದರ್ಶನ ಮಾಡುತ್ತಲೇ ಇದೆ.

ತಳಮಟ್ಟದ ವ್ಯಕ್ತಿಯಾಗಿದ್ದ ಅವರಿಗೆ ನೆರೆಹೊರೆಯವರೇ ಆದ್ಯತೆಯಾಗಿದ್ದರು. ಹಲವಾರು ವಿಧದಲ್ಲಿ ಅವರು ನೆರೆಹೊರೆಯವರು ಮೊದಲು ಎಂಬ ನೀತಿಗೆ ಅವರು ಪ್ರೇರಣೆಯಾಗಿದ್ದರು ಹಾಗೂ ಪ್ರವರ್ತಕರೂ ಆಗಿದ್ದರು. ಪ್ರತಿಪಕ್ಷದ ನಾಯಕರಾಗಿ ಬಾಂಗ್ಲಾದೇಶದ ವಿಮೋಚನೆಗೆ ದೃಢವಾಗಿ ಬೆಂಬಲ ನೀಡಿದ್ದರು. ಶಾಂತಿ ಅರಸುತ್ತಾ ಲಾಹೋರ್‌ಗೆ ಹೋಗಿದ್ದರು. ನಿರಂತರ ಪ್ರಯತ್ನ ಹಾಗೂ ಆಶಾವಾದ ಅವರ ಸ್ವಭಾವವಾಗಿತ್ತು. ಶಾಂತಿ ಹುಡುಕುವ ಹಾಗೂ ಜಮ್ಮು-ಕಾಶ್ಮೀರದ ಗಾಯ ವಾಸಿ ಮಾಡುವ ಪ್ರಯತ್ನವನ್ನು ಮುಂದುವರಿಸಿದರು. ಕಾರ್ಗಿಲ್‌ ಸಮರ ಗೆಲ್ಲುವ ವಿಚಾರದಲ್ಲಿ ಅವರು ದೃಢನಿಶ್ಚಯ ಹೊಂದಿದ್ದರು. ನಮ್ಮ ಸಂಸತ್ತಿನ ಮೇಲೆ ದಾಳಿ ನಡೆದಾಗ ಭಾರತ ವಿರುದ್ಧ ನಡೆಯುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯ ನೈಜ ಬಣ್ಣ ಹಾಗೂ ಮೂಲವನ್ನು ವಿಶ್ವವೇ ಗುರುತಿಸುವಂತೆ ಮಾಡಿದರು.

ವೈಯಕ್ತಿಕವಾಗಿ ಅಟಲ್‌ಜೀ ಅವರು ನನಗೆ ಆದರ್ಶ ವ್ಯಕ್ತಿ, ಗುರು ಹಾಗೂ ಮಾದರಿ ವ್ಯಕ್ತಿಯಾಗಿದ್ದರು. ಅವರು ನನ್ನನ್ನು ಆಳವಾಗಿ ಪ್ರಭಾವಿಸಿದ್ದರು. ಗುಜರಾತ್‌ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೊಣೆಗಾರಿಕೆ ವಹಿಸಿದವರು ಅವರೇ. 2001ರ ಅಕ್ಟೋಬರ್‌ನಲ್ಲಿ ಒಂದು ಸಂಜೆ ಅವರು ನನ್ನನ್ನು ಕರೆಸಿಕೊಂಡರು. ಮುಖ್ಯಮಂತ್ರಿಯಾಗಿ ಗುಜರಾತಿಗೆ ಹೋಗು ಎಂದರು. ನಾನು ಯಾವಾಗಲೂ ಸಂಘಟನೆಯಲ್ಲೇ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದಾಗ, ‘ಜನರ ಆಶೋತ್ತರಗಳನ್ನು ಈಡೇರಿಸುವ ವಿಶ್ವಾಸ ನನಗಿದೆ’ ಎಂದು ಹೇಳಿದ್ದರು. ಅವರು ನನ್ನಲ್ಲಿ ಇಟ್ಟಿದ್ದ ನಂಬಿಕೆ ವಿನಮ್ರವಾಗಿತ್ತು.

ಇಂದು ನಾವು ಸ್ವಾವಲಂಬಿ ದೇಶವಾಗಿದ್ದೇವೆ. ಯುವಶಕ್ತಿ ಹಾಗೂ ಜನರ ನಿಶ್ಚಯ, ಬದಲಾವಣೆಗಾಗಿ ತುಡಿತ ತುಂಬಿ ತುಳುಕುತ್ತಿದೆ. ಅದನ್ನು ಸಾಧಿಸುವ ವಿಶ್ವಾಸವನ್ನೂ ಹೊಂದಿದ್ದೇವೆ. ಶುದ್ಧ ಹಾಗೂ ಹೊಣೆಗಾರಿಕೆಯ ಆಡಳಿತಕ್ಕಾಗಿ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಸರ್ವ ಭಾರತೀಯರಿಗೂ ಅವಕಾಶ ಹಾಗೂ ಸಮಗ್ರತೆಯ ಭವಿಷ್ಯವನ್ನು ನಿರ್ಮಿಸುತ್ತಿದ್ದೇವೆ. ವಿಶ್ವದ ಸಮಾನ ಹಾಗೂ ಶಾಂತಿಯುತ ರೀತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇವೆ. ಸಿದ್ಧಾಂತಗಳನ್ನು ಮಾತನಾಡುತ್ತೇವೆ, ಇತರರ ಆಶೋತ್ತರಗಳನ್ನು ಬೆಂಬಲಿಸುತ್ತೇವೆ. ಅಟಲ್‌ಜೀ ಅವರು ನಮ್ಮನ್ನು ತೆಗೆದುಕೊಂಡು ಹೋಗಲು ಬಯಸಿದ್ದ ಮಾರ್ಗದಲ್ಲಿ ನಾವಿದ್ದೇವೆ. ಅವರು ಕಾಲಕ್ಕಿಂತ ಮುಂದೆ ಇದ್ದರು. ಏಕೆಂದರೆ ಅವರಿಗೆ ಇತಿಹಾಸದ ಆಳವಾದ ಜ್ಞಾನ ಇತ್ತು. ನಾಗರಿಕತೆಯ ಮೌಲ್ಯಗಳನ್ನು ಗ್ರಹಿಸುವ ಮೂಲಕ ಭಾರತದ ಆತ್ಮವನ್ನು ಇಣುಕಿ ನೋಡುವವರು ಅವರಾಗಿದ್ದರು.

ದೀಪ ಆರಿದ ಬಳಿಕ ಯಾವ ಪ್ರಮಾಣದಲ್ಲಿ ದುಃಖವಾಗುತ್ತದೋ ಅದನ್ನಷ್ಟೇ ಆಧರಿಸಿ ಜೀವನವನ್ನು ಅಳೆಯುವುದಲ್ಲ. ಜನರ ಜೀವನದ ಮೇಲೆ ಆದ ಪರಿಣಾಮ ಹಾಗೂ ಸಮಯದ ಮೇಲೂ ಅಳೆಯಲಾಗುತ್ತದೆ. ಆ ಕಾರಣಕ್ಕೆ ಅಟಲ್‌ಜೀ ಅವರು ಭಾರತದ ನೈಜ ರತ್ನ. ಅಟಲ್‌ಜೀ ಅವರ ಕನಸಿನ ನವಭಾರತವನ್ನು ನಿರ್ಮಾಣ ಮಾಡುತ್ತಿರುವುದರಿಂದ ಅವರ ಚೈತನ್ಯ ನಮಗೆ ಮುಂದೆಯೂ ಮಾರ್ಗದರ್ಶನ ಮಾಡುತ್ತದೆ.

ವಾಜಪೇಯಿ ಅವರಿಗೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ