ನವದೆಹಲಿ(ಆ.08): ಮಹತ್ವದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ಮೋದಿ ಇಂದು ಸಂಜೆ 4 ಗಂಟೆಗೆ ಮಾಡಲಿದ್ದ ರೆಡಿಯೋ ಭಾಷಣವನ್ನು ರದ್ದುಗೊಳಿಸಿದ್ದಾರೆ. ಬದಲಾಗಿ ಇಂದು ಸಂಜೆ 8 ಗಂಟೆಗೆ ಪ್ರಧಾನಿ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಈ ಕುರಿತು ಖುದ್ದು ಪ್ರಧಾನಿ ಕಚೇರಿ ಸ್ಪಷ್ಟನೆ ನೀಡಿದ್ದು, ಇಂದು ಸಂಜೆ 8 ಗಂಟೆಗೆ ತಾವು ದೇಶವನ್ನುದ್ದೇಶಿಸಿ ಮಾತನಾಡಲಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ ರೆಡಿಯೋ ಭಾಷಣವನ್ನು ರದ್ದುಪಡಿಸಿದ್ದೇಕೆ ಎಂಬುದರ ಕುರಿತು ಸ್ಪಷ್ಟನೆ ನೀಡಿಲ್ಲ.

ಪ್ರಧಾನಿ ಮೋದಿ ಈ ಮೊದಲಿನ ರೆಡಿಯೋ ಭಾಷಣ ರದ್ದುಗೊಳಿಸಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸಿದ್ದು, ಮೋದಿ ಇಂದು ಸಂಜೆ 8 ಗಂಟೆಗೆ ಏನು ಘೋಷಣೆ ಮಾಡಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿಯಿಂದಾಗಿ ದಿಕ್ಕೆಟ್ಟಿರುವ ಪಾಕಿಸ್ತಾನ, ಭಾರತದೊಂದಿಗಿನ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧವನ್ನು ಕಡಿದುಕೊಂಡಿದೆ. ಅಲ್ಲದೇ ಭಾರತಕ್ಕೆ ಸಮ್ಜೋತಾ ಎಕ್ಸಪ್ರೆಸ್ ರೈಲು ಸೇವೆಯನ್ನೂ ಸ್ಥಗಿತಗೊಳಿಸಿದೆ.

ಈ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಪ್ರಧಾನಿ ಮೋದಿ ಯೋಜನೆ ರೂಪಿಸಿದ್ದಾರಾ ಎಂಬ ಕುತೂಹಲ ಮನೆ ಮಾಡಿದ್ದು, ಇಡೀ ದೇಶದ ಗಮನ ಮೋದಿ ಅವರ ಇಂದಿನ 8 ಗಂಟೆಯ ಭಾಷಣದ ಮೇಲೆ ನೆಟ್ಟಿದೆ.