ಬಿಹಾರದಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ| ಏರ್ ಸ್ಟ್ರೈಕ್ ಪುರಾವೆ ಕೇಳಿದ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ| ‘ವಿಪಕ್ಷಗಳು ತಮ್ಮ ಹೇಳಿಕೆಗಳ ಮೂಲಕ ಪಾಕಿಸ್ತಾನವನ್ನು ಮೆಚ್ಚಿಸಲು ಹೊರಟಿವೆ’|‘ವಿಪಕ್ಷಗಳು ಭಾರತೀಯ ಸೇನೆ ಆತ್ಮಬಲವನ್ನು ಕುಗ್ಗಿಸಲು ಪ್ರಯತ್ನಿಸುತ್ತಿವೆ’|
ಪಾಟ್ನಾ(ಮಾ.03): ನಾನು ಭಯೋತ್ಪಾದನೆಯನ್ನು ತೊಡೆದು ಹಾಕಲು ಯತ್ನಿಸುತ್ತಿದ್ದರೆ, ಪ್ರತಿಪಕ್ಷಗಳು ನನ್ನನ್ನೇ ಮುಗಿಸಲು ಯತ್ನಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಗಂಭೀರ ಆರೋಪ ಮಾಡಿದ್ದಾರೆ.
ಬಿಹಾರ ರಾಜಧಾನಿ ಪಾಟ್ನಾದಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ಭಯೋತ್ಪಾದಕ ತರಬೇತಿ ಶಿಬಿರದ ಮೇಲಿನ ವಾಯುದಾಳಿ ಬಳಿಕವೂ ವಿಪಕ್ಷಗಳು ತಮ್ಮ ಹೇಳಿಕೆಗಳ ಮೂಲಕ ಪಾಕಿಸ್ತಾನವನ್ನು ಮೆಚ್ಚಿಸಲು ಹೊರಟಿವೆ ಎಂದು ಹರಿಹಾಯ್ದರು.
ವಿರೋಧ ಪಕ್ಷಗಳು ಮೊನ್ನೆ ನಡೆದ ಏರ್ ಸ್ಟ್ರೈಕ್ ನ ಪುರಾವೆ ಕೇಳುವ ಮೂಲಕ, ಭಾರತೀಯ ಸೇನೆ ಆತ್ಮಬಲವನ್ನು ಕುಗ್ಗಿಸಲು ಪ್ರಯತ್ನಿಸುತ್ತಿವೆ ಎಂದು ಪ್ರಧಾನಿ ಕಿಡಿಕಾರಿದರು.
ಭಾರತೀಯರೆಲ್ಲಾ ಒಂದಾಗಿ ಗಟ್ಟಿ ದನಿಯಲ್ಲಿ ನಮ್ಮ ಯೋಧರಿಗೆ ಸಲಾಂ ಎನ್ನುತ್ತಿರುವಾಗ 21 ವಿರೋಧ ಪಕ್ಷಗಳ ನಾಯಕರು ಅದನ್ನು ಖಂಡಿಸಿ ನಿರ್ಣಯ ಕೈಗೊಳ್ಳಲು ದೆಹಲಿಯಲ್ಲಿ ಸಭೆ ಸೇರುತ್ತಿದ್ದಾರೆ ಎಂದು ಮೋದಿ ವ್ಯಂಗ್ಯವಾಡಿದರು.
ಪಾಟ್ನಾದ ರ್ಯಾಲಿಯಲ್ಲಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸಹ ಭಾಗವಹಿಸಿದ್ದರು.
