ನವದೆಹಲಿ[ಫೆ.25]: ದೇಶದ ಪ್ರಥಮ ರಾಷ್ಟ್ರೀಯ ಯುದ್ಧ ಸ್ಮಾರಕವನ್ನು ಪ್ರಧಾನಿ ನರೇಂದ್ರ ಮೋದಿ ಫೆ.25ರ ಸೋಮವಾರ ಉದ್ಘಾಟಿಸಲಿದ್ದಾರೆ. ದೆಹಲಿಯ ಇಂಡಿಯಾ ಗೇಟ್‌ ಮತ್ತು ಅಮರ್‌ ಜವಾನ್‌ ಜ್ಯೋತಿ ಬಳಿ ಸುಮಾರು 40 ಎಕರೆ ಪ್ರದೇಶದಲ್ಲಿ, ಚಕ್ರವ್ಯೂಹ ಮಾದರಿಯಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ಚೌಕಾಕಾರದ ಕಂಬದ ಬಳಿ ಇಡಲಾಗಿರುವ ಜ್ಯೋತಿಯನ್ನು ಬೆಳಗಿಸುವ ಮೂಲಕ ಪ್ರಧಾನಿ ಮೋದಿ ಸಂಜೆ 5.30ಕ್ಕೆ ಸ್ಮಾರಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

176 ಕೋಟಿ ರು. ವೆಚ್ಚದಲ್ಲಿ ವಿಶ್ವದರ್ಜೆಯಲ್ಲಿ ನಿರ್ಮಿಸಿರುವ ಈ ಸ್ಮಾರಕದಲ್ಲಿ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ದೇಶಕ್ಕಾಗಿ ಇಲ್ಲಿಯವರೆಗೆ ಪ್ರಾಣತ್ಯಾಗ ಮಾಡಿದ 25,942 ಯೋಧರ ಹೆಸರನ್ನು ಸ್ಮರಿಸಿಕೊಳ್ಳಲಾಗಿದೆ. 16 ಗ್ರಾನೈಟ್‌ ಗೋಡೆಗಳ ಮೇಲೆ ಯೋಧರ ಹೆಸರನ್ನು ಬರೆಯಲಾಗಿದೆ. ಯೋಧರ ಹೆಸರಿನ ಜೊತೆಗೆ ಅವರ ಹುದ್ದೆ, ಅವರು ಸೇರಿದ್ದ ಪಡೆಯನ್ನೂ ದಾಖಲಿಸಲಾಗಿದೆ.

ಚಕ್ರವ್ಯೂಹದಿಂದ ಪ್ರೇರಣೆ ಪಡೆದು 4 ವೃತ್ತಾಕಾರದಲ್ಲಿ ಸ್ಮಾರಕವನ್ನು ನಿರ್ಮಿಸಲಾಗಿದ್ದು, ಮೊದಲ ವೃತ್ತಕ್ಕೆ ಅಮರ ಚಕ್ರ, ಎರಡನೇ ವೃತ್ತಕ್ಕೆ ವೀರತಾ ಚಕ್ರ, ಮೂರನೇ ವೃತ್ತಕ್ಕೆ ತ್ಯಾಗ ಚಕ್ರ ಮತ್ತು ನಾಲ್ಕನೇ ವೃತ್ತಕ್ಕೆ ರಕ್ಷಕ್‌ ಚಕ್ರ ಎಂದು ಹೆಸರಿಡಲಾಗಿದೆ. ಈ ನಾಲ್ಕು ವೃತ್ತಾಕಾರದ ಸ್ಥಳದ ನಡುವೆ 15 ಅಡಿ ಎತ್ತರದ ಸ್ತಂಭವನ್ನು ಅಳವಡಿಸಲಾಗಿದ್ದು, ಅದರಲ್ಲಿ ಜ್ಯೋತಿಯನ್ನು ಇಡಲಾಗಿದೆ. ಸ್ತಂಭದ ಕೆಳ ಭಾಗದಲ್ಲಿ ಶಹೀದ್‌ ಕಿ ಮಜ್ರೋಂ ಪರ್‌ ಎಂಬ ಖ್ಯಾತ ಕವಿ ಜಗದಂಬಾ ಮಿಶ್ರಾ ಅವರ ವಾಣಿಯನ್ನು ಬರೆಯಲಾಗಿದೆ. ಇನ್ನು ಖ್ಯಾತ ಶಿಲ್ಪಿ ರಾಮ್‌ ಸುತರ್‌ ಅವರು ನಿರ್ಮಿಸಿರುವ 6 ಕಂಚಿನ ಪುತ್ಥಳಿಗಳನ್ನು ಸ್ಮಾರಕ ಸ್ಥಳದಲ್ಲಿ ಅಳವಡಿಸಲಾಗಿದೆ.

ಬೆಂಗಳೂರಿನಲ್ಲಿ ದೇಶದ ಮೊದಲ ರಾಷ್ಟ್ರೀಯ ಸೈನಿಕ ಸ್ಮಾರಕ ಕೆಲವು ವರ್ಷಗಳ ಹಿಂದೆಯೇ ನಿರ್ಮಾಣವಾಗಿದೆ. ಆದರೆ, ಇದಕ್ಕೊಂದು ವೀರಗಲ್ಲು ಅಗತ್ಯವಿದ್ದು, ಇನ್ನೂ ಕೆಲಸ ಬಾಕಿ ಇದೆ. ಆ ಕಾರಣದಿಂದ ಈ ಸ್ಮಾರಕವಿನ್ನೂ ಉದ್ಘಾಟನೆಯಾಗಿಲ್ಲ.