ನವದೆಹಲಿ: ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೇ ನಡೆಸುವ ಕುರಿತಂತೆ ಪ್ರಯತ್ನಗಳು ನಡೆಯುತ್ತಿವೆ. ಆ ಬಗ್ಗೆ ಚರ್ಚೆ ನಡೆಯುತ್ತಿರುವುದು ಪ್ರಜಾಪ್ರಭುತ್ವದ ಆರೋ ಗ್ಯದ ಸಂಕೇತ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. ತನ್ಮೂಲಕ ಏಕಕಾಲದ ಚುನಾವಣೆ ನಡೆಸಲು ಸರ್ಕಾರ ಉತ್ಸುಕವಾಗಿ ರುವುದನ್ನು ಅವರು ಮತ್ತೊಮ್ಮೆ ಒಪ್ಪಿಕೊಂಡಿದ್ದಾರೆ. 

ಹೀಗಾಗಿ 2019 ರ ಲೋಕಸಭೆ ಚುನಾವಣೆ ಜತೆಗೆ ಕನಿಷ್ಠ 11 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆಗೆ ಬಲ ಬಂದಂತಾಗಿದೆ. ಮಾಸಿಕ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದ 47 ನೇ ಸಂಚಿಕೆಯಲ್ಲಿ ಭಾನುವಾರ ಮಾತನಾಡಿದ ಮೋದಿ ಅವರು, ಏಕಕಾಲಕ್ಕೆ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ನಡೆಸುವ ಸಂಬಂಧ ಪ್ರಯತ್ನ ಗಳು ಹಾಗೂ ಚರ್ಚೆಗಳು ನಡೆಯುತ್ತಿವೆ.

ಸರ್ಕಾರಹಾಗೂ ವಿಪಕ್ಷಗಳು ತಮ್ಮ ಅಭಿಪ್ರಾಯ ಗಳನ್ನು ವ್ಯಕ್ತಪಡಿಸುತ್ತಿವೆ. ಇದು ಪ್ರಜಾಸತ್ತೆಯಲ್ಲಿ ಉತ್ತಮ ಬೆಳವಣಿಗೆ ಹಾಗೂ ಆರೋಗ್ಯದ ಸಂಕೇತ. ಸದೃಢ ಪ್ರಜಾಸತ್ತೆಗಾಗಿ ಆರೋಗ್ಯಯುತ ಸಂಪ್ರದಾಯ ಅಭಿವೃದ್ಧಿ ಪಡಿಸುವುದು, ಪ್ರಜಾಪ್ರಭುತ್ವವನ್ನು ಬಲಗೊ ಳಿಸಲು ನಿರಂತರ ಪ್ರಯತ್ನಗಳನ್ನು ಮಾಡುವುದು, ಮುಕ್ತ ಮನಸ್ಸಿನ ಸಂವಾದಗಳಿಗೆ ಪ್ರೋತ್ಸಾಹ ನೀಡುವುದು ಕೂಡ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲಿಸುವ ಗೌರವವಾಗಿರುತ್ತದೆ ಎಂದು ಹೇಳಿದರು.

ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಅವಧಿಯಲ್ಲಿ ಮಾರ್ಪಾಡು ಮಾಡಿ, 2019 ರ ಲೋಕಸಭೆ ಚುನಾವಣೆ ಜತೆಗೆ 11 ರಾಜ್ಯಗಳ ಚುನಾವಣೆಯನ್ನು ನಡೆಸಲು ಕೇಂದ್ರ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂಬ ವರದಿಗಳು ಕೆಲ ದಿನಗಳ ಹಿಂದೆ ಬಂದಿದ್ದವು. ಆದರೆ ಅಂತಹ ಸಾಧ್ಯತೆಯನ್ನು ಮೂರ‌್ನಾಲ್ಕು ದಿನಗಳ ಹಿಂದಷ್ಟೇ ಚುನಾವಣಾ ಆಯೋಗ ತಳ್ಳಿ ಹಾಕಿತು.