Asianet Suvarna News Asianet Suvarna News

ಪ್ರಧಾನಿ ಮೋದಿಯಿಂದ 3ಬಿ, 4ಪಿ ಮಂತ್ರ : ಏನಿದು..?

ಪ್ರಧಾನಿ ನರೇಂದ್ರ ಮೋದಿ ಅವರು, ಗಾಂಧಿ ಜಯಂತಿಯಂದು ಸ್ವಚ್ಛತೆಯ ವ್ಯಾಖ್ಯಾನವನ್ನು ಜಗತ್ತಿಗೆ ವಿಸ್ತರಿಸಿದ್ದು, ಸ್ವಚ್ಛ ವಿಶ್ವಕ್ಕೆ ‘4ಪಿ’ ಹಾಗೂ ಸ್ವಚ್ಛ ಇಂಧನಕ್ಕೆ ‘3ಬಿ’ ಮಂತ್ರಗಳನ್ನು ಪಠಿಸಿದ್ದಾರೆ.

PM Modi Speeches About Clean India
Author
Bengaluru, First Published Oct 3, 2018, 7:21 AM IST

ನವದೆಹಲಿ :  ಸ್ವಚ್ಛ ಭಾರತ ಹಾಗೂ ಸ್ವಚ್ಛ ಇಂಧನಕ್ಕೆ ಈಗಾಗಲೇ ಪಣ ತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಗಾಂಧಿ ಜಯಂತಿಯಂದು ಸ್ವಚ್ಛತೆಯ ವ್ಯಾಖ್ಯಾನವನ್ನು ಜಗತ್ತಿಗೆ ವಿಸ್ತರಿಸಿದ್ದು, ಸ್ವಚ್ಛ ವಿಶ್ವಕ್ಕೆ ‘4ಪಿ’ ಹಾಗೂ ಸ್ವಚ್ಛ ಇಂಧನಕ್ಕೆ ‘3ಬಿ’ ಮಂತ್ರಗಳನ್ನು ಪಠಿಸಿದ್ದಾರೆ.

ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಆರಂಭದ ಸಂದರ್ಭದಲ್ಲಿ ನಡೆದ ‘ಮಹಾತ್ಮಾ ಗಾಂಧಿ ಸ್ವಚ್ಛತಾ ಸಮಾವೇಶ’ದ ಸಮಾರೋಪದಲ್ಲಿ ಮೋದಿ ಮಾತನಾಡಿ, ಮಾಲಿನ್ಯ ನಿಯಂತ್ರಣ ಹಾಗೂ ಕೊಳೆಯದ ತ್ಯಾಜ್ಯ ನಿಯಂತ್ರಣಕ್ಕೆ ವಿಶ್ವ ಸಮುದಾಯ ಕೈಜೋಡಿಸುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

‘ಮಹಾತ್ಮಾ ಗಾಂಧೀಜಿ ಅವರು ದೇಶಾದ್ಯಂತ ನಾನು ಸ್ವಚ್ಛತಾ ಆಂದೋಲನ ಕೈಗೊಳ್ಳಲು ಸ್ಫೂರ್ತಿಯ ಸೆಲೆಯಾದರು. ಈಗ ನಾನು ಹೇಳುತ್ತಿರುವ ‘4ಪಿ’ ಇದರ ವಿಸ್ತರಿತ ಭಾಗ. ವಿಶ್ವವು ಸ್ವಚ್ಛವಾಗಲು ಪೊಲಿಟಿಕಲ್‌ ಲೀಡರ್‌ಶಿಪ್‌ (ರಾಜಕೀಯ ನಾಯಕತ್ವ), ಪಬ್ಲಿಕ್‌ ಫಂಡಿಂಗ್‌ (ಸರ್ಕಾರಿ ಅನುದಾನ), ಪಾಟ್ರ್ನರ್‌ಶಿಪ್‌ (ಸಹಭಾಗಿತ್ವ) ಹಾಗೂ ಪೀಪಲ್ಸ್‌ ಪಾರ್ಟಿಸಿಪೇಶನ್‌ (ಜನರ ಭಾಗವಹಿಸುವಿಕೆ) ಅಗತ್ಯವಾಗಿವೆ’ ಎಂದರು.

‘125 ಕೋಟಿ ಭಾರತೀಯರ ನಮ್ಮ ದೇಶದ ಬಗ್ಗೆ ಇಂದು ನನಗೆ ಹೆಮ್ಮೆ ಎನ್ನಿಸುತ್ತದೆ. ಏಕೆಂದರೆ ಗಾಂಧೀಜಿ ಸ್ಫೂರ್ತಿಯಿಂದ ಆರಂಭವಾದ ಸ್ವಚ್ಛ ಭಾರತ ಆಂದೋಲನವು ಇಂದು ಪ್ರಪಂಚದ ಆಂದೋಲನವಾಗಿ ಮಾರ್ಪಡುತ್ತಿದೆ’ ಎಂದು ಹರ್ಷಿಸಿದರು.

ಇದೇ ವೇಳೆ ಮಂಗಳವಾರ ಸಂಜೆ ನಡೆದ 121 ರಾಷ್ಟ್ರಗಳು ಸದಸ್ಯರಾಗಿರುವ ಅಂತಾರಾಷ್ಟ್ರೀಯ ಸೋಲಾರ್‌ ಒಕ್ಕೂಟದ ಮೊದಲ ಸಭೆಯಲ್ಲಿ ಮಾತನಾಡಿದ ಮೋದಿ ಸ್ವಚ್ಛ ಇಂಧನಕ್ಕೂ ಒತ್ತು ನೀಡಿ, ‘ಬಿ3’ ಮಂತ್ರವನ್ನು ಒತ್ತಿ ಹೇಳಿದರು. ‘ಬಯೋಮಾಸ್‌ (ಜೈವಿಕ ಗೊಬ್ಬರ), ಬಯೋ ಫ್ಯೂಯೆಲ್(ಜೈವಿಕ ಇಂಧನ) ಹಾಗೂ ಬಯೋ ಎನರ್ಜಿ (ಜೈವಿಕ ಶಕ್ತಿ) ಕಡೆಗೆ ಭಾರತ ಗಮನ ನೀಡಿದೆ. ಸಾರ್ವಜನಿಕ ಸಾರಿಗೆಯನ್ನು ಜೈವಿಕ ಇಂಧನದ ಮೂಲಕ ನಡೆಸಲು ಗಂಭೀರ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಸವಾಲನ್ನು ಜೈವಿಕ ತ್ಯಾಜ್ಯದಿಂದ ಜೈವಿಕ ಇಂಧನ ಉತ್ಪಾದಿಸಿ ಅವಕಾಶವನ್ನಾಗಿ ಪರಿವರ್ತಿಸುತ್ತಿದ್ದೇವೆ ಎಂದು ನುಡಿದರು.

ಇಂದು ಇಂಧನ ಕ್ಷೇತ್ರದಲ್ಲಿ ತೈಲ ಸಂಪದ್ಭರಿತ ‘ಒಪೆಕ್‌ ದೇಶಗಳು’ ಮಹತ್ವದ ಪಾತ್ರ ವಹಿಸುವ ರೀತಿ ಮುಂದೊಂದು ದಿನ ‘ಸೌರ ಒಕ್ಕೂಟ’ದ ದೇಶಗಳು ಸ್ವಚ್ಛ ಇಂಧನಕ್ಕೆ ಸಂಬಂಧಿಸಿದಂತೆ ಮಹತ್ತರ ಪಾತ್ರ ವಹಿಸಲಿವೆ. ಇಂದು ತೈಲ ಬಾವಿಗಳು ಅನುಸರಿಸುತ್ತಿರುವ ಪಾತ್ರವನ್ನು ಮುಂದೊಂದು ದಿನ ಸೂರ್ಯನ ಕಿರಣಗಳು ವಹಿಸಲಿವೆ ಎಂದು ಮೋದಿ ಮಾರ್ಮಿಕವಾಗಿ ಹೇಳಿದರು.

ಈ ಸಂದರ್ಭದಲ್ಲಿ ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರ್ರಸ್‌ ಇದ್ದರು.

Follow Us:
Download App:
  • android
  • ios