ನವದೆಹಲಿ(ಜೂ.25): 2014ರ ಲೋಕಸಭೆ ಚುನಾವಣೆಯನ್ನು ಈ ದೇಶದ ಜನತೆ ಒಂದು ಪ್ರಯೋಗವನ್ನಾಗಿ ಸ್ವೀಕರಿಸಿದ್ದರು. ಆದರೆ 2019ರ ಚುನಾವಣೆಯನ್ನು ಆ ಪ್ರಯೋಗದ ಸದುಪಯೋಗ ಕಂಡರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಮೋದಿ, ಮತದಾರ ಒಂದು ಸುಭದ್ರ ಸರ್ಕಾರ ಅಸ್ತಿತ್ವಕ್ಕೆ ತರುವ ಮೂಲಕ ಭವಿಷ್ಯದ ಭಾರತಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಹೇಳಿದರು.

ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಲೋಕಸಭೆಯಲ್ಲಿ ಮಾತನಾಡಿದ ಮೋದಿ, 17ನೇ ಲೋಕಸಭೆಯ ಮೊದಲ ಅಧಿವೇಶನ ನಡೆದ ಬಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಆಡಳಿತ ಪಕ್ಷ, ವಿಪಕ್ಷಗಳ ಎಲ್ಲಾ ಸಂಸದರು ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯದ ಮೇಲೆ ಶಿಸ್ತುಬದ್ಧವಾಗಿ ಮಾತನಾಡಿದ್ದು,  ಇದಕ್ಕಾಗಿ ತಾವು ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸುವುದಾಗಿ ಪ್ರಧಾನಿ ತಿಳಿಸಿದರು.

ಸರ್ಕಾರ ದೇಶದ ಜನತೆಯ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ಬದ್ಧವಾಗಿದ್ದು, ನವಭಾರತದ ನಿರ್ಮಾಣದ ತನ್ನ ಸಂಕಲ್ಪದಿಂದ ಹಿಂದೆ ಸರಿಯುವದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.

ಇದೇ ವೇಳೆ ಪ್ರತಿಪಕ್ಷಗಳನ್ನು ತಮ್ಮ ವ್ಯಂಗ್ಯಭರಿತ ಧಾಟಿಯಲ್ಲಿ ತರಾಟೆಗೆ ತೆಗೆದುಕೊಂಡ ಪ್ರಧಾನಿ, ನೀವು ಅದೆಷ್ಟು ಎತ್ತರಕ್ಕೆ ಬೆಳೆಯುತ್ತೀರೋ ಬೆಳೆಯಿರಿ ನಾವು ಮಾತ್ರ ಜನರ ಮಧ್ಯೆ ಇದ್ದು ಅವರ ಮನಸ್ಸಿನಲ್ಲಿ ಉಳಿಯುತ್ತೇವೆ ಎಂದು ಚುಚ್ಚಿದರು.

ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಎಲ್ಲಾ ಅಂಶಗಳ ಮೇಲೆ ಕೆಲಸ ನಿರ್ವಹಿಸಲು ಸರ್ಕಾರ ಬದ್ಧವಾಗಿದ್ದು, ಇದಕ್ಕಾಗಿ ಸದನದ ಸಹಾಯ ಕೋರುತ್ತೇನೆ ಎಂದು ಮೋದಿ ಹೇಳಿದರು.