ಮಹಾಘಟಬಂಧನ ಆಡಳಿತ ಶೈಲಿಗೆ ಕರ್ನಾಟಕವೇ ಟ್ರೇಲರ್‌

PM Modi Slams Karnataka Govt
Highlights

 ಬಿಜೆಪಿಯನ್ನು ಅಧಿಕಾರದಿಂದ ಹೊರದಬ್ಬುವ ಉದ್ದೇಶದಿಂದ ಮುಂದಿನ ಲೋಕಸಭೆ ಚುನಾವಣೆಗಾಗಿ ಮಹಾಘಟಬಂಧನ ರೂಪಿಸಲು ಪ್ರಯತ್ನ ಮಾಡುತ್ತಿರುವ ಪ್ರತಿಪಕ್ಷಗಳ ಪಾಳೆಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿನ ಜೆಡಿಎಸ್‌- ಕಾಂಗ್ರೆಸ್‌ ಪ್ರಯೋಗವನ್ನು ಉದಾಹರಣೆಯಾಗಿ ನೀಡಿ ಚಾಟಿ ಬೀಸಿದ್ದಾರೆ.

ನವದೆಹಲಿ :  ಬಿಜೆಪಿಯನ್ನು ಅಧಿಕಾರದಿಂದ ಹೊರದಬ್ಬುವ ಉದ್ದೇಶದಿಂದ ಮುಂದಿನ ಲೋಕಸಭೆ ಚುನಾವಣೆಗಾಗಿ ಮಹಾಘಟಬಂಧನ ರೂಪಿಸಲು ಪ್ರಯತ್ನ ಮಾಡುತ್ತಿರುವ ಪ್ರತಿಪಕ್ಷಗಳ ಪಾಳೆಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿನ ಜೆಡಿಎಸ್‌- ಕಾಂಗ್ರೆಸ್‌ ಪ್ರಯೋಗವನ್ನು ಉದಾಹರಣೆಯಾಗಿ ನೀಡಿ ಚಾಟಿ ಬೀಸಿದ್ದಾರೆ.

ಯಾವುದೇ ಚುನಾವಣೆಯಲ್ಲಿ ಸಿದ್ಧಾಂತರಹಿತ ಹಾಗೂ ಅವಕಾಶವಾದಿ ಮಿತ್ರಕೂಟದಿಂದ ಅರಾಜಕತೆ ಗ್ಯಾರಂಟಿ. ಮುಂದಿನ ಚುನಾವಣೆ ನಂತರ ಕಂಡುಬರುವ ಸಂಭಾವ್ಯತೆಗೆ ಕರ್ನಾಟಕವೇ ಟ್ರೇಲರ್‌. ಅಧಿಕಾರ ಹಿಡಿಯಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮಿತ್ರಕೂಟ ಜನಾದೇಶವನ್ನೇ ಕಸಿದುಕೊಂಡವು. ಆದರೆ ಈಗ ಅಲ್ಲಿ ಅಭಿವೃದ್ಧಿ ಹಿಂದಿನ ಸೀಟಿಗೆ ಜಾರಿದೆ. ಮಂತ್ರಿಗಳು ಅಭಿವೃದ್ಧಿ ಸಮಸ್ಯೆಗಳನ್ನು ಬಗೆಹರಿಸಲು ಪರಸ್ಪರ ಚರ್ಚೆ ಮಾಡಬೇಕು. ಆದರೆ ಕರ್ನಾಟಕದಲ್ಲಿ ಒಳಜಗಳ ಬಗೆಹರಿಸಲು ಮಂತ್ರಿಗಳು ಸಭೆ ಸೇರುವ ಸ್ಥಿತಿ ಇದೆ ಎಂದು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಾಘಟಬಂಧನ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ ಎಂದು ಮೋದಿ ಅವರು ಸೂಚ್ಯವಾಗಿ ಹೇಳಿದ್ದಾರೆ.

ಇತ್ತೀಚೆಗೆ ‘ಸ್ವರಾಜ್ಯ’ ನಿಯತಕಾಲಿಕೆಗೆ ಸಂದರ್ಶನ ನೀಡಿರುವ ಅವರು, ಮುಂದಿನ ಲೋಕಸಭೆ ಚುನಾವಣೆ ಎಂಬುದು ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಅರಾಜಕತೆ ನಡುವಣ ಹೋರಾಟವಾಗಲಿದೆ ಎಂದು ತಿಳಿಸಿದ್ದಾರೆ.

ನರೇಂದ್ರ ಮೋದಿ ಅವರನ್ನು ಕಿತ್ತೊಗೆಯಬೇಕು ಎಂಬುದನ್ನು ಬಿಟ್ಟರೆ ಪ್ರತಿಪಕ್ಷಗಳಿಗೆ ಯಾವುದೇ ಅಜೆಂಡಾ ಇಲ್ಲ. ಮೋದಿ ವಿರುದ್ಧದ ದ್ವೇಷವೇ ಅವೆರಲ್ಲರನ್ನು ಒಗ್ಗೂಡಿಸುವ ಶಕ್ತಿ. ವೈಯಕ್ತಿಕ ಅಸ್ತಿತ್ವ ಹಾಗೂ ಅಧಿಕಾರದ ರಾಜಕಾರಣದ ಆಸೆಯಿಂದ ಈ ಮಿತ್ರಕೂಟಗಳು ಪ್ರೇರಿತವಾಗಿವೆಯೇ ಹೊರತು ರಾಷ್ಟ್ರ ಹಿತಕ್ಕಾಗಿ ಅಲ್ಲ. ಮಹಾಘಟಬಂಧನ ಎಂಬುದು ಪ್ರಧಾನಿ ಕುರ್ಚಿಯೆಡೆಗಿನ ಮಹಾ ಓಟವಾಗಿದೆ ಎಂದು ಟೀಕಿಸಿದ್ದಾರೆ.

ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ದರ್ಪದ ಕಾರಣಕ್ಕೆ ಆ ಪಕ್ಷವನ್ನು ಜನರು ತಿರಸ್ಕರಿಸಿದ್ದರು. ಈಗ ಆ ಪಕ್ಷ ಮಿತ್ರಕೂಟಗಳನ್ನು ಹುಡುಕಿಕೊಂಡು ಅಲೆದಾಡುತ್ತಿದೆ. ಕಾಂಗ್ರೆಸ್‌ ಈಗ ಒಂದು ಪ್ರಾದೇಶಿಕ ಪಕ್ಷದಂತಾಗಿದೆ ಎಂದು ಚಾಟಿ ಬೀಸಿದ್ದಾರೆ.

ಇತ್ತೀಚಿನ ಉಪಚುನಾವಣೆಗಳಲ್ಲಿ ಬಿಜೆಪಿ ಅನುಭವಿಸಿದ ಸೋಲನ್ನು ಉಪೇಕ್ಷಿಸಿರುವ ಅವರು, 1998ರಲ್ಲಿ ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೂರನೇ ಎರಡರಷ್ಟುಸ್ಥಾನಗಳನ್ನು ಗೆದ್ದಿತ್ತು. ಆದರೆ ಅದಕ್ಕೂ ಮುನ್ನ ನಡೆದ ಉಪಚುನಾವಣೆಗಳಲ್ಲಿ ಪರಾಭವಗೊಂಡಿತ್ತು ಎಂದು ವಿವರಿಸಿದ್ದಾರೆ.

ನಾನು ರಾಜಾಧಿರಾಜ, ಸೊಕ್ಕಿನ ಆಡಳಿತಗಾರ ಅಲ್ಲ: ಮೋದಿ

ಜನರ ಪ್ರೀತಿ ಉಪೇಕ್ಷಿಸಲು ನಾನೇನು ಶಹೆನ್‌ಶಾ (ರಾಜಾಧಿರಾಜ) ಅಥವಾ ಸೊಕ್ಕಿನ ಆಡಳಿತಗಾರ ಅಲ್ಲ. ಜನರ ನಡುವೆ ಇರುವುದರಿಂದ ನನಗೆ ಶಕ್ತಿ ಲಭಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ನಾನು ಪ್ರಯಾಣ ಮಾಡುವಾಗ ಎಲ್ಲ ವಯಸ್ಸಿನ ಹಾಗೂ ಎಲ್ಲ ಜನಾಂಗದ ಜನರನ್ನು ನೋಡುತ್ತೇನೆ. ಅವರೆಲ್ಲಾ ನನಗೆ ಶುಭ ಕೋರಲು ಹಾಗೂ ಸ್ವಾಗತಿಸಲು ರಸ್ತೆಯಲ್ಲಿ ನಿಂತಿರುತ್ತಾರೆ. ಅವರ ಕಾಳಜಿ ಹಾಗೂ ಬಾಂಧವ್ಯದ ಪ್ರದರ್ಶನದ ಬಗ್ಗೆ ಗಮನಕೊಡದೇ ಕಾರಿನಲ್ಲೇ ಕೂರಲು ನನ್ನಿಂದ ಆಗುವುದಿಲ್ಲ. ಹೀಗಾಗಿ ಕಾರಿನಿಂದ ಕೆಳಗಿಳಿದು, ನನ್ನಿಂದಾಗುವಷ್ಟುಕೆಲಸ ಮಾಡುತ್ತೇನೆ ಎಂದು ‘ಸ್ವರಾಜ್ಯ’ ನಿಯತಕಾಲಿಕೆಗೆ ನೀಡಿರುವ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ. ಇತ್ತೀಚೆಗೆ ಮೋದಿ ಅವರ ಭದ್ರತೆಯಲ್ಲಿ ಹೆಚ್ಚಳ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಪದೇಪದೇ ಉಗ್ರ ದಾಳಿ ಈಗ ಇತಿಹಾಸ: ಮೋದಿ

ಯುಪಿಎ ಸರ್ಕಾರದ ಅವಧಿಯಲ್ಲಿ ಭಯೋತ್ಪಾದಕ ದಾಳಿಗಳು ಪದೇಪದೇ ಘಟಿಸುತ್ತಿದ್ದವು. ಆದರೆ ಈಗ ಅದೆಲ್ಲಾ ಇತಿಹಾಸ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಇದೇ ವೇಳೆ, ಜಮ್ಮು-ಕಾಶ್ಮೀರದಲ್ಲಿ ಉತ್ತಮ ಆಡಳಿತ, ಅಭಿವೃದ್ಧಿ ಹಾಗೂ ಜವಾಬ್ದಾರಿ ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ.

loader