ನವದೆಹಲಿ[ಮಾ.23]: ರಾಷ್ಟ್ರೀಯ ದಿನಾಚರಣೆ ಸಂಭ್ರಮದಲ್ಲಿರುವ ಪಾಕಿಸ್ತಾನ ಹಾಗೂ ಆ ದೇಶದ ಜನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಹೇಳಿದ್ದಾರೆ. ಈ ಬಗ್ಗೆ ಶುಕ್ರವಾರ ಟ್ವೀಟ್‌ ಮಾಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು, ‘ಪಾಕಿಸ್ತಾನ ಹಾಗೂ ದೇಶದ ಜನತೆಗೆ ನರೇಂದ್ರ ಮೋದಿ ಅವರು ಶುಭ ಕೋರಿರುವ ಸಂದೇಶ ಪಡೆದಿದ್ದೇನೆ,’ ಎಂದಿದ್ದಾರೆ.

ರಾಷ್ಟ್ರೀಯ ಸಂಭ್ರಮಾಚರಣೆಯಲ್ಲಿರುವ ಪಾಕಿಸ್ತಾನಕ್ಕೆ ನಾನು ಶುಭ ಕೋರುತ್ತೇನೆ. ಪ್ರಾದೇಶಿಕ ಅಭಿವೃದ್ಧಿ, ಪ್ರಜಾಪ್ರಭುತ್ವÜ, ಶಾಂತಿ ನೆಲೆಸಲು ಹಾಗೂ ಹಿಂಸಾಚಾರ ಮತ್ತು ಭಯೋತ್ಪಾದನಾ ರಹಿತ ವಾತಾವರಣಕ್ಕಾಗಿ ಉಭಯ ರಾಷ್ಟ್ರಗಳು ಒಟ್ಟಿಗೆ ಕಾರ್ಯ ನಿರ್ವಹಿಸಲು ಇದು ಸುಸಂದರ್ಭ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂದೇಶದಲ್ಲಿ ಪ್ರತಿಪಾದಿಸಿದ್ದಾರೆ ಎಂದು ಇಮ್ರಾನ್‌ ಖಾನ್‌ ಹೇಳಿದ್ದಾರೆ.

ದೆಹಲಿಯ ಹೈಕಮಿಷನರ್‌ ಕಚೇರಿಯಲ್ಲಿ ನಡೆದ ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಗೆ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ(ಹುರಿಯತ್‌ ನಾಯಕರು)ಗಳಿಗೆ ಬುಲಾವ್‌ ನೀಡಿದ್ದನ್ನು ಭಾರತ ಬಹಿಷ್ಕರಿಸಿದೆ. ಅಲ್ಲದೆ, ಈ ಕಾರ್ಯಕ್ರಮಕ್ಕೆ ಭಾರತದಿಂದ ಯಾವುದೇ ಪ್ರತಿನಿಧಿಗಳು ಭಾಗವಹಿಸುವುದಿಲ್ಲ ಎಂದು ಭಾರತ ವಿದೇಶಾಂಗ ಸಚಿವಾಲಯ ಸ್ಪಷ್ಟವಾಗಿ ಹೇಳಿತ್ತು. ಆದಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಅವರು ತಮಗೆ ಶುಭ ಕೋರಿದ್ದಾರೆ. ಮೋದಿ ಅವರ ಈ ಕ್ರಮಕ್ಕೆ ಕಾಂಗ್ರೆಸ್‌ ಸೇರಿದಂತೆ ವಿವಿಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಅಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲಿ ಮೋದಿ ಹಾಗೂ ಕೇಂದ್ರ ಸರ್ಕಾರದ ನಿಲುವುಗಳ ಟ್ವೀಟಿಗರು ಪ್ರಶ್ನಿಸುತ್ತಿದ್ದಾರೆ.