ಸ್ವಕ್ಷೇತ್ರ ವಾರಾಣಸಿಯಲ್ಲಿ ಪ್ರಧಾನಿ ಮೋದಿ| ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಚಾಲನೆ| ವಾರಾಣಸಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಕಂಚಿನ ಪ್ರತಿಮೆ ಉದ್ಘಾಟನೆ| ‘2024ರಲ್ಲಿ ದೇಶದ ಅರ್ಥ ವ್ಯವಸ್ಥೆ 5 ಟ್ರಿಲಿಯನ್ ತಲುಪಲಿದೆ’| 5 ಟ್ರಿಲಿಯನ್ ಅರ್ಥ ವ್ಯವಸ್ಥೆ ಹೊಂದಲು ದಾರಿ ತೋರಿದ ಪ್ರಧಾನಿ ಮೋದಿ|
ವಾರಾಣಸಿ(ಜು.06): ಮೋದಿ 2.0 ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಎರಡನೇ ಬಾರಿಗೆ ಸ್ವಕ್ಷೇತ್ರ ವಾರಾಣಸಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ.
ಈ ವೇಳೆ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಜನತೆಯ ವಿಶ್ವಾಸ ಮತ್ತು ನಿಮ್ಮ ಪರಿಶ್ರಮದ ಫಲವಾಗಿ ಕೇಂದ್ರದಲ್ಲಿ ಸದೃಢ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ಹೇಳಿದ್ದಾರೆ.
2024ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಯುಎಸ್ ಡಾಲರ್ ಅರ್ಥ ವ್ಯವಸ್ಥೆಯನ್ನಾಗಿ ಮಾಡುವ ತಮ್ಮ ಗುರಿ ಈಡೇರುವ ಭರವಸೆ ಇದೆ ಎಂದು ಪ್ರಧಾನಿ ಮೋದಿ ನುಡಿದರು.
ಭಾರತ 5 ಟ್ರಿಲಿಯನ್ ಯುಎಸ್ ಡಾಲರ್ ಅರ್ಥ ವ್ಯವಸ್ಥೆಯನ್ನು ಹೊಂದಲಿದೆ ಎಂದು ಹೇಳಿದರೆ ಕೆಲವರು ನಗುತ್ತಾರೆ. ಆದರೆ ಅವರಿಗೆ ಗುರಿ ತಲುಪುವ ದಾರಿಯೂ ಗೊತ್ತಿಲ್ಲ, ಗುರಿ ತಲುಪುವ ಆತ್ಮ ವಿಶ್ವಾಸವೂ ಇಲ್ಲ ಎಂದು ಮೋದಿ ಲೇವಡಿ ಮಾಡಿದರು.
5 ಟ್ರಲಿಯನ್ ಯುಎಸ್ ಡಾಲರ್ ಅರ್ಥ ವ್ಯವಸ್ಥೆ ಹೊಂದಲು ದೇಶದ ಆರ್ಥಿಕ ಅಭಿವೃದ್ಧಿಯನ್ನು ದ್ವಿಗುಣಗೊಳಿಸಬೇಕಾಗುತ್ತದೆ. ಈ ಪಕ್ರಿಯೆಯಲ್ಲಿ ದೇಶದ ಎಲ್ಲ ಜನಸಮುದಾಯವನ್ನು ಭಾಗಿದಾರರನ್ನಾಗಿ ಮಾಡುವ ಮೂಲಕ ಗುರಿ ತಲುಪಲು ಸಾಧ್ಯ ಎಂದು ಮೋದು ನುಡಿದರು.
ವ್ಯಕ್ತಿಯ ವೈಯಕ್ತಿಕ ಅಭಿವೃದ್ಧಿ ದೇಶದ ಸರ್ವೋತೋಮುಖ ಅಭಿವೃದ್ಧಿಗೆ ಪೂರಕ ಎಂದ ಪ್ರಧಾಣಿ, ಆರ್ಥಿಕ ಅಭಿವೃದ್ಧಿಯ ಈ ನಾಗಾಲೋಟದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ದೇಶವನ್ನು ಮತ್ತಷ್ಟು ಸದೃಢಗೊಳಿಸಬೇಕು ಎಂದು ಮೋದಿ ಮನವಿ ಮಾಡಿದರು.
ಇದಕ್ಕೂ ಮೊದಲು ವಾರಾಣಸಿಯ ಬಾಬತ್‌ಪುರದ ಲಾಲ್ ಬಹದ್ದೂರ್ ಶಾಸ್ತ್ರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಮಾಜಿ ಪ್ರಧಾನಿಯ 18 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು.
ಶಾಸ್ತ್ರಿ ಅವರ ಪ್ರತಿಮೆಯನ್ನು ಖ್ಯಾತ ಶಿಲ್ಪಿ ರಾಮ್ ವಂಜಿ ಸುತಾರ್ ನಿರ್ಮಿಸಿದ್ದು, ಇವರು ಹಿಂದೆ ಸರ್ದಾರ್ ಪಟೇಲ್ ಅವರ 182 ಮೀಟರ್ ಎತ್ತರದ ಏಕತಾ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದರು.
